ಜರ್ಮನಿಯ ಕ್ರಿಕೆಟ್ ನಲ್ಲಿ ಕರ್ನಾಟಕದ ಬಾಸ್ಕೆಟ್ ಬಾಲ್ ತಾರೆ!

0
118

ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್

ಕರ್ನಾಟಕದಲ್ಲಿ ಬಾಸ್ಕೆಟ್ ಬಾಲ್ ನಲ್ಲಿ ಮಿಂಚಿದ್ದ ಆಟಗಾರ್ತಿಯೊಬ್ಬರು ಜರ್ಮನಿಯ ಮಹಿಳಾ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಆಗಿ ಯಶಸ್ಸು ಕಂಡ ಕತೆ ಇಲ್ಲಿದೆ. ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ ನೆಲೆಸಿರುವ ಕಾರ್ತಿಕಾ ವಿಜಯರಾಘವನ್ ಅಲ್ಲಿಯ ಕ್ರಿಕೆಟ್ ಗೆ ಜೀವ ತುಂಬಿದ ಕರ್ನಾಟಕದ ಮೂವರು ಚಾಂಪಿಯನ್ ಆಟಗಾರ್ತಿಯರಲ್ಲಿ ಒಬ್ಬರು.

ಬೆಂಗಳೂರಿನ ಆರ್.ವಿ.ಸಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವಾಗ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ತಂಡದ ನಾಯಕಿಯಾಗಿದ್ದ ಕಾರ್ತಿಕಾ ಆ ತಂಡ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದೇ ರೀತಿ ವಿವಿ ಮಟ್ಟದ ಆಟಗಾರ್ತಿ. ಈಗ ಜರ್ಮನಿಯ ಮಹಿಳಾ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜರ್ಮನಿ ತಂಡದ ನಾಯಕಿ ಡಾ. ಅನುರಾಧ ಮತ್ತು ಆಲ್ರೌಂಡರ್ ಶರಣ್ಯ ಕೂಡ ಕನ್ನಡಿಗರು.

 

 

 

ಗುರುವಾರ ಜರ್ಮನಿಯ ಸ್ಟಟ್ಗಾರ್ಟ್ ನಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಕಾರ್ತಿಕಾ ವಿಜಯರಾಘವನ್ ತಮ್ಮ ಯಶಸ್ಸಿನ ಹಾದಿಯಲ್ಲೊಮ್ಮೆ ಹಿಂತಿರುಗಿ ನೋಡಿದ್ದಾರೆ. “ಬೆಂಗಳೂರಿನ ಇಂದಿರಾ ನಗರದಲ್ಲಿರುವ ಎನ್ಪಿಎಸ್ ಶಾಲೆಯಲ್ಲಿ ಓದುತ್ತಿರುವಾಗಲೇ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಗುರಿಯಾಗಿತ್ತು. ಅದೇ ರೀತಿ ಬಾಸ್ಕೆಟ್ ಬಾಲ್ ನಲ್ಲಿ ನನಗೆ ಹೆಚ್ಚಿನ ಆಸಕ್ತಿ ಕುದುರಿತು. ಅದೇ ಕ್ರೀಡೆಯಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದವರೆಗೂ ಆಡಿದೆ. ಆದರೆ ಮದುವೆ ಮತ್ತು ವೃತ್ತಿ ನನ್ನನ್ನು ಬಾಸ್ಕೆಟ್ ಬಾಲ್ ನಿಂದ ದೂರ ಮಾಡಿತು. ಅದು ಅನಿವಾರ್ಯ ಕೂಡ  ಆಗಿತ್ತು. ಆದರೆ ಉದ್ಯೋಗಕ್ಕಾಗಿ ಪತಿಯೊಂದಿಗೆ ಜರ್ಮನಿಗೆ ಬಂದಾಗ ಬದುಕು ಹೊಸ ದಾರಿಯತ್ತ ಮುಖ ಮಾಡಿತು. ಪತಿ ವಿಜಯರಾಘವನ್ ಎಂಜಿನಿಯರ್ ಆಗಿದ್ದರೂ ಕ್ರೀಡೆಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ, ಇಲ್ಲಿಗೆ ಬಂದ ನಂತರ ಕ್ರಿಕೆಟ್ ನತ್ತ ಒಲವು ಮೂಡಿತು,’’ ಎಂದು ಹೇಳಿದರು.

 

ಹವ್ಯಾಸವೇ ಹೊಸ ಹಾದಿ

ಜರ್ಮನಿಯಲ್ಲಿ ಎಲ್ಲರಿಗೂ ತಿಳಿದಿರುವಂತೆ ಫುಟ್ಬಾಲ್ ಜನಪ್ರಿಯ ಕ್ರೀಡೆ. ಆದರೆ ಅಲ್ಲಿ ಮಹಿಳಾ ಕ್ರಿಕೆಟ್ ಕೂಡ ಚಿಗುರೊಡೆದಿದೆ ಎಂದರೆ ಅದಕ್ಕೆ ಮೂಲ ಕಾರಣ ಬದುಕು ಕಟ್ಟಿಕೊಳ್ಳಲು ಜರ್ಮನಿಗೆ ತೆರಳಿದ ಬೆಂಗಳೂರಿನ ನಮ್ಮ ಕನ್ನಡತಿಯರು. “ಕ್ರಿಕೆಟ್ ಇಲ್ಲಿ ಜನಪ್ರಿಯ ಕ್ರೀಡೆಯಾಗಿರಲಿಲ್ಲ. ಅದು ಬರೇ ಹವ್ಯಾಸದ ಕ್ರೀಡೆಯಾಗಿತ್ತು. ಸ್ಥಳೀಯ ಕ್ಲಬ್ ನಲ್ಲಿ ನಾನು ಟೈಂ ಪಾಸ್ ಗಾಗಿ ಹೋಗುತ್ತಿದ್ದೆ, ಆದರೆ ಅದು ಬರೇ ಟೈಮ್ ಪಾಸ್ ಆಗಿರಲಿಲ್ಲ. ಮುಂದೊಂದು ದಿನ ಜರ್ಮನಿ ಮಹಿಳಾ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ಕಲ್ಪಿಸಿತು. ಈ ವಿಷಯದಲ್ಲಿ ಪತಿ ವಿಜಯರಾಘವನ್ ಹಾಗೂ ನಮ್ಮ ತಂಡದ ನಾಯಕಿ ಡಾ. ಅನುರಾಧ ಮತ್ತು ಇತರರ ಪಾತ್ರ ಪ್ರಮುಖವಾಗಿದೆ. ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಂಡ ಗೆಲುವು ಜರ್ಮನಿ ಕ್ರಿಕೆಟ್ ಗೆ ಹೊಸ ರೂಪ ನೀಡಿತು ಮಾತ್ರವಲ್ಲದೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಸಿತು,’’ ಎಂದು ಕಾರ್ತಿಕಾ ಅವರು ಹೆಮ್ಮೆಯಿಂದ ಹೇಳಿಕೊಂಡರು.

ಇಂಗ್ಲೆಂಡಿನ ಸಾರಾ ಟೇಲರ್, ಆಸ್ಟ್ರೇಲಿಯಾದ ಆ್ಯಡಂ ಗಿಲ್ ಕ್ರಿಸ್ಟ್ ಭಾರತದ ಮಹೇಂದ್ರ ಸಿಂಗ್ ಧೋನಿ ಅವರನ್ನು ಆದರ್ಶವಾಗಿರಿಸಿಕೊಂಡಿರುವ ಕಾರ್ತಿಕಾ, ಅಷ್ಟೇ ಬದ್ಧತೆಯ ಆಟಗಾರ್ತಿ. ವಿಜಯರಾಘವನ್ ಅವರನ್ನು 2005ರಲ್ಲಿ ಮದುವೆಯಾದ ನಂತರ ಜರ್ಮನಿಯಲ್ಲಿ ಬಂದು ನೆಲೆಸಿದರು. ಕ್ರಿಕೆಟಿಗರಾಗಿದ್ದ ವಿಜಯರಾಘವನ್ ಅಲ್ಲಿನ ಕೊಲೊಗ್ನೆ ಎಕ್ಸ್ಟ್ರೀಮರ್ಸ್ ಮತ್ತು ಲುಫ್ತಾಂಹ್ಸ ತಂಡದಲ್ಲಿ ಆಡಿದ್ದರು. ಸದ್ಯ ಕಾರ್ತಿಕಾಗೆ ಹೆಚ್ಚಿನ ತರಬೇತಿಯನ್ನು ವಿಜಯರಾಘವನ್ ಅವರೇ ನೀಡುತ್ತಿದ್ದಾರೆ.

ಕಾರ್ತಿಕಾ ಅವರು ಸ್ಟುಟ್ಗಾರ್ಟ್ ನಲ್ಲಿ ಖಾಸಗಿ ಆರೋಗ್ಯ ವಿಮಾ ಕಂಪೆನಿಯಲ್ಲಿ ಅಪ್ಲಿಕೇಷನ್ ಡೆವಲಪ್ಪರ್ ಆಗಿ ಕೆಲಸ ಮಾಡುತ್ತಿದ್ದರೆ, ವಿಜಯರಾಘವನ್, ಆಟೋಮೊಬೈಲ್ ಕಂಪೆನಿಯಲ್ಲಿ ಸಿಮ್ಯುಲೇಶನ್ ಎಂಜಿನಿಯರ್ ಆಗಿದ್ದಾರೆ.

ಐಸಿಸಿ 25ನೇ ಸ್ಥಾನ!!

ಕ್ಲಬ್ ಹಂತದಲ್ಲಿ ಆರಂಭಗೊಂಡ ಜರ್ಮನಿಯ ಮಹಿಳಾ ಕ್ರಿಕೆಟ್ 7-8 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನಾಡುವ ಅರ್ಹತೆ ಪಡೆಯಿತು. ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್ ವಿರುದ್ಧ ಸರಣಿ ಜಯ ಗಳಿಸಿ ಐಸಿಸಿ ರಾಂಕಿಂಗ್ ನಲ್ಲಿ 25ನೇ ಸ್ಥಾನಕ್ಕೆ ಜಿಗಿದಿದೆ. ‘’ಇಲ್ಲಿ ನಾವ್ಯಾರೂ ಹಣಕ್ಕಾಗಿ ಆಡುತ್ತಿಲ್ಲ. ಎಲ್ಲರೂ ನಮ್ಮ ಬಿಡುವಿನ ಸಮಯವನ್ನು ವಿನಿಯೋಗಿಸುತ್ತಿದ್ದೇವೆ, ಇಲ್ಲಿ ಒಮ್ಮತದ ತ್ಯಾಗ ಇದೆ. ಅದರಲ್ಲಿ ಒಂದು ದೇಶದಲ್ಲಿ ಕ್ರೀಡೆಯೊಂದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ ಎಂಬುದು ನಮಗೆಲ್ಲರಿಗೂ ಖುಷಿಕೊಟ್ಟಿದೆ. ಇಲ್ಲಿ ಎಲ್ಲ ಎಲ್ಲೆಯನ್ನು ಮೀರಿ ಕ್ರಿಕೆಟ್ ಬೆಳೆಯುತ್ತಿದೆ,’’ ಎಂದು ಕಾರ್ತಿಕಾ ತಿಳಿಸಿದರು.

ಹೆತ್ತವರ ಪ್ರೋತ್ಸಾಹ

ಉದ್ಯಮಿ ಲೋಕನಾಥನ್ ಮತ್ತು ತಮೀಜ್ ಸೆಲ್ವಿ ದಂಪತಿಯ ಹಿರಿಯ ಮಗಳು ಕಾರ್ತಿಕಾ ಅವರ ಕ್ರೀಡಾ ಬದುಕಿಗೆ ಮನೆಯವರಿಂದಲೂ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಮಗಳ ಕ್ರಿಕೆಟ್ ಸಾಧನೆ ಬಗ್ಗೆ ಲೋಕನಾಥನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹೋದರಿ ಡಾ. ದೀಪಿಕಾ ಕೂಡ ಕ್ರೀಡಾ ಪ್ರೋತ್ಸಾಹಕಿ.