ಸ್ಪೋರ್ಟ್ಸ್ ಮೇಲ್ ವರದಿ
ಕಲಿತ ಶಾಲೆಯ ಬಗ್ಗೆ ನಮಗೆ ಕಾಳಜಿ ಇದ್ದೇ ಇರುತ್ತದೆ. ನಡೆದು ಬಂದ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ ನಮ್ಮ ಬದುಕಿನ ಮೇಲೆ ಶಾಲಾ ದಿನಗಳು ಪ್ರಮುಖ ಪಾತ್ರವಹಿಸಿರುತ್ತವೆ.
ಅದು ಹಸಿರಾಗಿಯೇ ಉಳಿಯುವ ಉದ್ದೇಶದಿಂದ ನಾವು ಕಲಿತ ಶಾಲೆಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತೇವೆ. ಅದೇ ರೀತಿ ತಾವು ಕಲಿತ ಶಾಲೆಯ ಕಬಡ್ಡಿ ತಂಡಕ್ಕೆ ನೆರವು ನೀಡುತ್ತಿದ್ದಾರೆ. ಮಣೂರು ಪಡುಕರೆಯ ಸ್ಪಂದನ ಗ್ರೂಪ್‌ನ ಗೆಳೆಯರು.
೮೦ ಮಂದಿ ಸದಸ್ಯರಿಂದ ಕೂಡಿರುವ ಈ ಶಾಲೆಯ ಹಳೆ ವಿದ್ಯಾರ್ಥಿಗಳ ಗುಂಪು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಪ್ರತಿ ವರ್ಷ ಸದಸ್ಯರು ೧೨೦೦ ರೂ.ಗಳನ್ನು ಖಾತೆಗೆ ಜಮಾ ಮಾಡುತ್ತಾರೆ. ಸಂಗ್ರಹವಾದ ಹಣದಲ್ಲಿ ಮಕ್ಕಳಿಗೆ ಅಗತ್ಯವಿರುವ ಕ್ರೀಡೆ ಅಥವಾ ಇನ್ನಿತರ ಸೌಲಭ್ಯಗಳನ್ನು ನೀಡುತ್ತಾರೆ. ಇತ್ತೀಚಿಗೆ ಜಿಲ್ಲಾಮಟ್ಟದಲ್ಲಿ ಅಗ್ರ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಶಾಲೆಯ ತಂಡದ ಆಟಗಾರರಿಗೆ ಮ್ಯಾಟ್‌ನಲ್ಲಿ ಆಡಲು ಸೂಕ್ತವಾದ ಶೂ ಇಲ್ಲದ ಕಾರಣ ಗ್ರೂಪ್ ಸದಸ್ಯರು ಸಂಗ್ರಹಿಸಿದ ಹಣದಿಂದ ಉತ್ತಮ ಗುಣಮಟ್ಟದ ಶೂ ನೀಡಲಾಯಿತು. ಶಾಲಾ ಮಕ್ಕಳಿಗೆ ಗುರುತಿನ ಚೀಟಿ ನೀಡಿರುವ ಸ್ಪಂದನಾ ತಂಡ ಸರಕಾರದಿಂದ ಸಿಗದ ಸೌಲಭ್ಯಗಳನ್ನು ನೀಡುವ ಪ್ರಯತ್ನ ಮಾಡುತ್ತಿರುವುದು ವಿಶೇಷ.
ರಾಜ್ಯಮಟ್ಟಕ್ಕೆ ಕಬಡ್ಡಿ ತಂಡ
ಹೈಸ್ಕೂಲ್ ವಿಭಾಗದಲ್ಲಿ ಮಣೂರು ಶಾಲೆಯ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಬಂಟ್ವಾಳದಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ ಪ್ರೌಢ ಶಾಲಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಮಣೂರು ಪ್ರೌಢ ಶಾಲಾ ತಂಡ ಉಡುಪಿ ಜಿಲ್ಲೆಯನ್ನು ಪ್ರತನಿಧಿಸಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಪಂದ್ಯಗಳಲ್ಲೂ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ತಂಡದ ಉತ್ತಮ ಸಾಧನೆಯಲ್ಲಿ ತರಬೇತುದಾರರಾದ ದೈಹಿಕ ಶಿಕ್ಷಕ ಶರತ್ ಹಾಗೂ ಜಯಮಂಗಳ ಅವರ ಪಾತ್ರ ಪ್ರಮುಖವಾಗಿದೆ.