ಮೆಸ್ಸಿಗೆ ಮಿಸ್, ಸ್ಪೇನ್ ವಿಶ್ವ ಕಪ್‌ಗೆ ಕಿಸ್
ನ್ಯೂಯಾರ್ಕ್ ನ್ಯೂಜೆರ್ಸಿ: ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ಮತ್ತೊಮ್ಮೆ ವಿಶ್ವ ಫುಟ್‌ಬಾಲ್‌ನ ಚಕ್ರವರ್ತಿಯಾಗಿ ಹೊರಹೊಮ್ಮಿದೆ. ಹೆಚ್ಚುವರಿ ಸಮಯ 106ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್, ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಅಂತರದಿಂದ ಮಣಿಸಿ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿದೆ. Spain are champions of the world for a second time after substitute Ferran Torres hit a 106th-minute winner to wrest the trophy from the grip of Lionel Messi and Co
106ನೇ ನಿಮಿಷದಲ್ಲಿ ನಿರ್ಣಾಯಕ ಗೋಲು
ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಸ್ಪೇನ್‌ಗೆ ಗೋಲು ಮಾತ್ರ ಸಿಗುತ್ತಿರಲಿಲ್ಲ. ಅರ್ಜೆಂಟೀನಾ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಒಂದರ ಹಿಂದೆ ಒಂದರಂತೆ 12 ಅದ್ಭುತ ಸೇವ್‌ಗಳನ್ನು ಮಾಡಿ ತಂಡವನ್ನು ರಕ್ಷಿಸುತ್ತಿದ್ದರು.
ಆದರೆ 106ನೇ ನಿಮಿಷದಲ್ಲಿ ಅವರಿಗೂ ಉತ್ತರವೇ ಇರಲಿಲ್ಲ. ಪೆಡ್ರೊ ಪೊರೊ ನೀಡಿದ ಕ್ರಾಸ್‌ಗೆ ನಿಕೊ ವಿಲಿಯಮ್ಸ್ ಹೆಡರ್ ಮೂಲಕ ಚೆಂಡನ್ನು ಟೊರೆಸ್‌ಗೆ ತಲುಪಿಸಿದರು. ಅವಕಾಶವನ್ನು ಚಿನ್ನವಾಗಿಸಿದ ಟೊರೆಸ್ ಮೊದಲ ಸ್ಪರ್ಶದಲ್ಲೇ ಬಲಿಷ್ಠ ಶಾಟ್ ಬಾರಿಸಿ ಚೆಂಡನ್ನು ಬಲೆಯ ಮೇಲ್ಭಾಗಕ್ಕೆ ತೂರಿದರು. ಅದೇ ಪಂದ್ಯ ನಿರ್ಧರಿಸಿದ ಗೋಲಾಗಿತು.

ಅರ್ಜೆಂಟೀನಾಗೆ ರೆಡ್ ಕಾರ್ಡ್
ನಿಯಮಿತ ಸಮಯದ ಕೊನೆಯಲ್ಲಿ ಎನ್ಜೊ ಫರ್ನಾಂಡೆಸ್ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನ ತೊರೆದರು. ಹತ್ತು ಆಟಗಾರರೊಂದಿಗೆ ಅರ್ಜೆಂಟೀನಾ ಕೊನೆಯವರೆಗೂ ಹೋರಾಡಿದರೂ ಸ್ಪೇನ್‌ನ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ.
2010ರ ವಿಶ್ವಕಪ್ ಫೈನಲ್‌ನಂತೆ ಈ ಬಾರಿಯೂ ಸ್ಪೇನ್ ಹೆಚ್ಚುವರಿ ವೇಳೆಯಲ್ಲೇ ಗೆಲುವಿನ ಉತ್ತರ ಕಂಡುಕೊಂಡಿತು.
ಆರಂಭದಿಂದಲೇ ಸ್ಪೇನ್ ಮೇಲುಗೈ
ಯುರೋಪ್ ಮತ್ತು ದಕ್ಷಿಣ ಅಮೆರಿಕದ ಚಾಂಪಿಯನ್‌ಗಳ ನಡುವಿನ ಫೈನಲ್ ನಿರೀಕ್ಷೆಯಂತೆಯೇ ರೋಚಕವಾಗಿತ್ತು. ಆದರೆ ಆಟದ ಮೇಲಿನ ಹಿಡಿತ ಮಾತ್ರ ಸ್ಪೇನ್‌ನದ್ದಾಗಿತ್ತು.
ಐದನೇ ನಿಮಿಷದಲ್ಲೇ ಲಮಿನ್ ಯಮಾಲ್ ಮೊದಲ ಅಪಾಯಕಾರಿ ಪ್ರಯತ್ನ ನಡೆಸಿದರು. ಬಳಿಕ ಮಿಕೇಲ್ ಓಯಾರ್ಜಾಬಲ್, ಮಾರ್ಕ್ ಕುಕುರೇಯಾ, ಫೆರಾನ್ ಟೊರೆಸ್, ಪೆಡ್ರಿ, ಪೌ ಕುಬಾರ್ಸಿ ಹಾಗೂ ನಿಕೊ ವಿಲಿಯಮ್ಸ್ ನಿರಂತರವಾಗಿ ಗೋಲು ಹುಡುಕಿದರೂ, ಮಾರ್ಟಿನೆಜ್ ಗೋಡೆಯಂತೆ ನಿಂತಿದ್ದರು.
ಗಾಯಗಳಿಂದ ಕಂಗೆಟ್ಟ ಅರ್ಜೆಂಟೀನಾ
ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿಗೆ ಪಂದ್ಯ ಮಧ್ಯೆ ಮತ್ತೊಂದು ಆಘಾತ ಎದುರಾಯಿತು. ಮೊದಲಾರ್ಧದಲ್ಲೇ ಲಿಸಾಂಡ್ರೊ ಮಾರ್ಟಿನೆಜ್ ಗಾಯಗೊಂಡು ಹೊರನಡೆದರೆ, 70ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಕೂಡ ಮೈದಾನ ತೊರೆದರು. ಇದರಿಂದ ಅರ್ಜೆಂಟೀನಾ ರಕ್ಷಣಾ ವಿಭಾಗ ದುರ್ಬಲಗೊಂಡಿತು.
ಮಾರ್ಟಿನೆಜ್ ಹೋರಾಟ ವ್ಯರ್ಥ
ಫೈನಲ್‌ಗೂ ಮುನ್ನ 19 ಗೋಲುಗಳನ್ನು ದಾಖಲಿಸಿದ್ದ ಅರ್ಜೆಂಟೀನಾ, ಸ್ಪೇನ್‌ನ ಕಟ್ಟುನಿಟ್ಟಿನ ಆಟದ ಎದುರು ಹೆಚ್ಚುವರಿ ಸಮಯದವರೆಗೂ ಗುರಿಮುಟ್ಟುವ ಒಂದೇ ಒಂದು ಪ್ರಯತ್ನವನ್ನೂ ದಾಖಲಿಸಲು ವಿಫಲವಾಯಿತು.
ಇನ್ನೊಂದೆಡೆ, ಮಾರ್ಟಿನೆಜ್ ಅದ್ಭುತ ಗೋಲ್‌ಕೀಪಿಂಗ್ ಮೂಲಕ ಪಂದ್ಯವನ್ನು ಜೀವಂತವಾಗಿಟ್ಟರೂ, ಅಂತಿಮವಾಗಿ ಟೊರೆಸ್ ಗೋಲಿನ ಎದುರು ಶರಣಾಗಬೇಕಾಯಿತು.
ಸ್ಪೇನ್‌ಗೆ ಮತ್ತೊಂದು ಸುವರ್ಣ ಅಧ್ಯಾಯ
2010ರ ಬಳಿಕ ಮತ್ತೊಮ್ಮೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಸ್ಪೇನ್, ವಿಶ್ವ ಫುಟ್‌ಬಾಲ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇನ್ನೊಂದೆಡೆ, ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಸತತ ಎರಡನೇ ವಿಶ್ವಕಪ್ ಕನಸು ನನಸಾಗಿಸಿಕೊಳ್ಳುವಲ್ಲಿ ವಿಫಲವಾಯಿತು.

