Monday, December 4, 2023

13ನೇ ವಯಸ್ಸಿಗೇ ಹಣಕ್ಕಾಗಿ ಹೆತ್ತವರೇ ಮಾರಿದರು, ನೀತು ಈಗ 3ನೇ ಪದಕ ಗೆದ್ದಳು!

ಗೋವಾ: ಭಾರತದ ಕ್ರೀಡಾ ಇತಿಹಾಸದಲ್ಲಿ ಬಾಕ್ಸರ್‌ ಮೇರಿ ಕೋಮ್‌ ಅವರ ಬದುಕು ಅತ್ಯಂತ ಸ್ಫೂರ್ತಿದಾಯಕವಾದುದು. ಅವರ ಬದುಕಿನ ಕತೆಯನ್ನೇ ಸ್ಫೂರ್ತಿಯಾಗಿಸಿಕೊಂಡ ಕತೆ ಇದು. ಮೇರಿಯ ಕತೆಗಿಂತಲೂ   ಹೃದಯ ಭಾರಗೊಳಿಸುವ ಕತೆ ನೀತು ಸರ್ಕಾರ್‌ ಅವರದ್ದು. 13ನೇ ವಯಸ್ಸಿನಲ್ಲಿ ಹಣಕ್ಕಾಗಿ ಮನೆಯವರೇ ಮಾರಿದರು. 14ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ಜನನ. ಇವುಳೆಲ್ಲದರ ನಡುವೆ ಕುಸ್ತಿಯನ್ನೇ ಉಸಿರಾಗಿಸಿಕೊಂಡು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೂರನೇ ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ.ಮ Sold by parents at 13, Neetu Sarkar win third National Games Medal

ಕಷ್ಟದ ದೂಳಿನಿಂದ ಮೇಲೆದ್ದ ನೀತು ಸರ್ಕಾರ್‌ ಅವರ ಬದುಕಿನ ಕತೆ ಕ್ರೀಡಾ ಜಗತ್ತಿಗೆ ಸ್ಫೂರ್ತಿಯಾದುದು. ಆಕೆ ಗೆದ್ದಿರುವ ಪದಕ ಮುಖ್ಯವಲ್ಲ, ಕಷ್ಟಗಳನ್ನು ಮೆಟ್ಟಿ ನಿಂತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದೇ ಸ್ಫೂರ್ತಿ. “ನಾನು ಸಾಕಷ್ಟು ಕಷ್ಟಗಳನ್ನು ದಾಟಿ ಬಂದವಳು. ಅದರ ಬಗ್ಗೆ ಈ ಮಾತನಾಡಲು ಇಷ್ಟವಿಲ್ಲ. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಎರಡನೇ ಅವಕಾಶ ಸಿಗುತ್ತದೆ. ಸಾಕಷ್ಟು ಕಷ್ಟಪಟ್ಟು ನಾನು ಈ ಪದಕಗಳನ್ನು ಗೆದ್ದಿರುವೆ ಎನ್ನಲು ಹೆಮ್ಮೆ ಅನಿಸುತ್ತದೆ,” ಎಂದು ಎಸ್‌ಎಸ್‌ಬಿ ಯಲ್ಲಿ ಉದ್ಯೋಗಿಯಾಗಿರುವ ನೀತು ಸರ್ಕಾರ್‌ ಹೇಳಿದ್ದಾರೆ. ಬಿವಾನಿಯ ಬಡ ಕುಟುಂಬದಲ್ಲಿ ಜನಿಸಿದ ನೀತು ಚಿಕ್ಕಂದಿನಲ್ಲಿಯೇ ಕಷ್ಟದ ಮಡಿಲಿಗೆ ತಳ್ಳಲ್ಪಟ್ಟರು. 13ನೇ ವಯಸ್ಸಿನಲ್ಲಿ ಹೆತ್ತವರೇ ಆಕೆಯನ್ನು ಹಣಕ್ಕಾಗಿ ಮಾರಿದರು. 43 ವರ್ಷದ ಆತ ಹುಚ್ಚ ಎಂದು ತಿಳಿದ ಕೂಡಲೇ ಹೇಗೋ ತಪ್ಪಿಸಿಕೊಂಡ ನೀತು ಮನೆ ಸೇರಿದಳು. ಹೆತ್ತವರು ಅಲ್ಲಿಗೆ ಸುಮ್ಮನಿರಲಿಲ್ಲ. ಮತ್ತೊಬ್ಬ ನಿರುದ್ಯೋಗಿಯನ್ನು ಹಿಡಿದು ಮದುವೆ ಮಾಡಿದರು. ಆತನಿಗೆ ತಾಯಿಯ ಪಿಂಚಣಿ ಬರುತ್ತಿತ್ತು. ಅದೇ ಆತನ ಬದಕಾಗಿತ್ತು.

“ನಮಗೆ ಆರ್ಥಿಕ ಸಂಕಷ್ಟವನ್ನು ಎದುರಿಸುವುದು ಕಷ್ಟವಾಗಿತ್ತು. ಅತ್ತೆಯ ಚಿಕ್ಕ ಪಿಂಚಣಿಯಲ್ಲಿಯೇ ಬದುಕಬೇಕಾಗಿತ್ತು. ಈ ಕಾರಣಕ್ಕಾಗಿ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿದೆ. ಗದ್ದೆ ಉಳುವುದು, ಮನೆಯಾಳು ಕೆಲಸ, ಬ್ಯುಟಿಷನ್‌, ಅಂಗಡಿಯಲ್ಲಿ ಕ್ಲರ್ಕ್‌ ಹಾಗೂ ಟೈಲರ್‌ ಕೆಲಸಗಳನ್ನು ಮಾಡಿಕೊಂಡು ಬದುಕಿದೆ,” ಎನ್ನುತ್ತಾರೆ ನೀತು. ಈ ಕಷ್ಟಗಳ ನಡುವೆ 14ನೇ ವಯಸ್ಸಿಗೇ ಅವಳಿ ಗಂಡು ಮಕ್ಕಳ ಜನನ. ಈಗ ಬದುಕು ಮತ್ತಷ್ಟು ಕಠಿಣವಾಯಿತು. ಈ ನಡುವೆ ಯೋಗ ಕಲಿತು ಯೋಗ ಶಿಕ್ಷಕಿಯಾಗಿ ಕೆಸಲ ಮಾಡತೊಡಗಿದರು. ಇದು ನೀತು ಅವರ ಬದುಕಿನ ಹಾದಿಯನ್ನೇ ಬದಲಾಯಿಸಿತು. ಕ್ರೀಡೆ ಆಕೆಯ ಬದುಕಿಗೆ ಹೊಸ ರೂಪು ನೀಡಿತು.

ಯೋಗ ಗುರುಗಳು ಕುಸ್ತಿ ಕೋಚ್‌ ಜೈಲೀ ಸಿಂಗ್‌ ಅವರನ್ನು ಪರಿಚಯಿಸಿದರು. ಸಿಂಗ್‌ ಅವರು ನೀತುಗೆ ಮೇರಿ ಕೋಮ್‌ ಅವರ ಬದುಕಿನ ಕತೆಯನ್ನು ಹೇಳಿದರು. ಇದು ನೀತು ಅವರಲ್ಲಿ ಹೊಸ ಉತ್ಸಾಹವನ್ನುಂಟು ಮಾಡಿತು. ನೀತು ಅವರ ಪತಿ ಇದಕ್ಕೆ ಆರಂಭದಲ್ಲಿ ಪ್ರೋತ್ಸಾಹ ನೀಡಲಿಲ್ಲ. “ನನ್ನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ನನ್ನಂತೆ ಕಷ್ಟ ಪಡಬಾರದು ಎಂಬ ಉದ್ದೇಶಕ್ಕಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡೆ,” ಎನ್ನುತ್ತಾರೆ ನೀತು.

“ನಾನು ಕಲಿತದ್ದು ಬರೇ ಏಳನೇ ತರಗತಿ ವರೆಗೆ. ಈ ಶೈಕ್ಷಣಿಕ ಅರ್ಹತೆಗೆ ನನಗೆ ಯಾವುದೇ ಕೆಲಸ ಸಿಗುವುದಿಲ್ಲವೆಂಬುದು ನನಗೆ ಗೊತ್ತಿತ್ತು. ಅದಕ್ಕಾಗಿ ಕುಸ್ತಿಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಪತಿಯಲ್ಲಿ ವಿನಂತಿಸಿಕೊಂಡೆ, ಅವರು ಒಪ್ಪಿದರು. ಆದರೆ ಅದಕ್ಕೊಂದು ಷರತ್ತು ಹಾಕಿದರು. ಕುಟುಂಬದ ಸದಸ್ಯರು ಮತ್ತು  ಊರಿನಲ್ಲಿ ಎಲ್ಲರೂ ಎದ್ದೇಳುವುದಕ್ಕೆ ಮೊದಲೇ ಅಭ್ಯಾಸವನ್ನು ಮುಗಿಸಿಬೇಕು ಎಂದರು. ಅದಕ್ಕೆ ಒಪ್ಪಿದೆ, ಬೆಳಿಗ್ಗೆ 3:30ಕ್ಕೆ ಎದ್ದು 10ಕಿಮೀ ಓಟವನ್ನು ಮುಗಿಸಿ ನಂತರ ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ,” ಎಂದು ನೀತು ಅವರು ಹೇಳುವಾಗ ಅವರು ಗೆದ್ದಿರುವ ಮೂರು ಪದಕಗಳ ಹಿಂದೆ ಎಷ್ಟು ಕಣ್ಣೀರು ಇದೆ ಎಂಬುದು ಸ್ಪಷ್ಟವಾಗುತ್ತದೆ.

17ನೇ ವಯಸ್ಸಿನಲ್ಲಿ ಕ್ರೀಡೆಯಲ್ಲಿ ಗಂಭೀರವಾಗಿ ತಮ್ಮನ್ನು ನೀತು ತೊಡಗಿಸಿಕೊಂಡರು. 19ನೇ ವಯಸ್ಸಿನಲ್ಲಿ ರಾಷ್ಟ್ರೀಯ ಹಿರಿಯ ಕುಸ್ತಿಯಲ್ಲಿ ಪದಕ. ಎರಡು ವರ್ಷಗಳ ಬಳಿಕ ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಜೂನಿಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ. 2015ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ. ಕಳೆದ ವರ್ಷ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ, ಜೊತೆಯಲ್ಲಿ ಪಾಲ್ಗೊಂಡ ಎಲ್ಲ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ನೀತುಗೆ ಪದಕ ಕಟ್ಟಿಟ್ಟ ಬುತ್ತಿ. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಒಬ್ಬ ಜಾವೆಲಿನ್‌ನಲ್ಲಿ ತೊಡಗಿಕೊಂಡಿದ್ದರೆ ಇನ್ನೊಬ್ಬ ಎಸ್‌ಎಸ್‌ಬಿಯಲ್ಲಿ ಕಾನ್‌ಸ್ಟೇಬಲ್‌. ನೀತುಗೆ ಈಗ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಹಂಬಲ.

Related Articles