Wednesday, July 24, 2024

ಮುಖ್ಯಮಂತ್ರಿಗಳೇ ಸೈಟ್ ಕೊಡುವುದು ಯಾವಾಗ?

ಸೋಮಶೇಖರ್ ಪಡುಕರೆ ಬೆಂಗಳೂರು 

ಕಳೆದ 13 ವರ್ಷಗಳಿಂದ ಓಡುತ್ತಲೇ ಇದ್ದೇನೆ…ಎರಡು ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದೇನೆ …… ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಷಿಪ್, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪದಕಗಳು ಮನೆಯನ್ನು ತುಂಬಿವೆ…. ನನ್ನ ಸಾಮರ್ಥ್ಯಕ್ಕೆ ತಕ್ಕುದಾದ ಸಾಧನೆ ಮಾಡಿದ್ದೇನೆಂಬ ತೃಪ್ತಿ ಇದೆ…..ಆದರೆ ರಾಜ್ಯ ಸರಕಾರ 2014ರಲ್ಲಿ ನೀಡಿರುವ ನಿವೇಶನದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ… ಆದರೂ ದೇಶಕ್ಕಾಗಿ ಓಡಿ ಪದಕ ಗೆಲ್ಲುವ ನನ್ನ ಕೆಲಸ ಮುಂದುವರಿಯುತ್ತದೆ ಎಂದು ಇತ್ತೀಚಿಗೆ  ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ  ಒಂದು ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿರುವ ಕರ್ನಾಟಕದ ಓಟಗಾರ್ತಿ ಎಂ.ಆರ್. ಪೂವಮ್ಮ ಅತ್ಯಂತ ಬೇಸರದಿಂದ ಹೇಳಿದ್ದಾರೆ.

ಜಕಾರ್ತದಿಂದ ದಿಲ್ಲಿಗೆ, ಅಲ್ಲಿಂದ ಗುರುವಾರ ಮಂಗಳೂರಿಗೆ ಆಗಮಿಸಿದ ಪೂವಮ್ಮ ಸ್ಪೋರ್ಟ್ಸ್ ಮೇಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸರಕಾರದ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದರು. ಏಷ್ಯನ್ ಗೇಮ್ಸ್‌ನಲ್ಲಿ ನಿರಂತರವಾಗಿ ಪದಕ ಗೆಲ್ಲುತ್ತಿದ್ದೇನೆ. 2014ರಲ್ಲಿ ಪದಕ ಗೆದ್ದಾಗ ನಿವೇಶನ ನೀಡುವುದಾಗಿ ಸರಕಾರ ಘೋಷಿಸಿತ್ತು. ಆದರೆ ಇದುವರೆಗೂ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಲಿಲ್ಲ. ನನ್ನ ಓಟ ಮಾತ್ರ ಮುಂದುವರಿದಿದೆ. ಸರಕಾರದ ಈ ರೀತಿಯ ಧೋರಣೆಯಿಂದ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸ್ಫೂರ್ತಿ ಸಿಗುತ್ತದೆ ಎಂದು ಹೇಳಲಾಗದು,  ಎಂದು ಪೂವಮ್ಮ ನುಡಿದರು.
ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ರಿಲೇ ಹಾಗೂ ಮಿಶ್ರ ರಿಲೇಯಲ್ಲಿ ಪೂವಮ್ಮ ಚಿನ್ನ ಹಾಗೂ ಬೆಳ್ಳಿಯ ಸಾಧನೆ ಮಾಡಿದ್ದರು. ಪ್ರತಿಯೊಂದು ಕ್ರೀಡಾಕೂಟದಲ್ಲೂ ಪೂವಮ್ಮ ಸಾಧನೆ ಮಾಡುತ್ತಲೇ ಬಂದಿದ್ದಾರೆ. ಮುಂದಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.
ಕಾಮನ್‌ವೆಲ್ತ್ ಹಾಗೂ ಒಲಿಂಪಿಕ್ಸ್ ಎರಡು ಕೂಟಗಳಲ್ಲಿ ಪದಕ ಗೆಲ್ಲುವುದು ಬಾಕಿ ಇದೆ. ಟೋಕಿಯೊ ಒಲಿಂಪಿಕ್ಸ್‌ಗಾಗಿ ಕಠಿಣ ಅಭ್ಯಾಸ ನಡೆಸಲಿದ್ದೇನೆ.,  ಈಗಿರುವ ನಮ್ಮ ತಂಡ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದೆ.  ಇನ್ನೂ ಹೆಚ್ಚಿನ ಶ್ರಮ ವಹಿಸಿದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು ಎಂದರು.

ಖುಷಿ ನೀಡಿದ ಮಿಶ್ರ ರಿಲೇ

ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಮಿಶ್ರ ರಿಲೇಗೆ ಅವಕಾಶ ಕಲ್ಪಿಸಲಾಗಿತ್ತು. ಇಬ್ಬರು ಪುರುಷರು ಹಾಗೂ ಇಬ್ಬರು ವನಿತೆಯರು ಮಿಶ್ರ ರಿಲೇಯಲ್ಲಿ ಪಾಲ್ಗೊಳ್ಳುವರು. ಭಾರತದ ಪರ ಮೊಹಮ್ಮದ್ ಅನಾಸ್, ಎಂ.ಆರ್. ಪೂವಮ್ಮ, ಹಿಮಾ ದಾಸ್ ಹಾಗೂ ರಾಜೀವ್ ಅರೋಕಿಯಾ ಮಿಶ್ರ ರಿಲೇಯಲ್ಲಿ ಪಾಲ್ಗೊಂಡರು. ಈ ಬಗ್ಗೆ ಮಾತನಾಡಿದ ಪೂವಮ್ಮ, ಇದೇ ಮೊದಲ ಬಾರಿಗೆ ಮಿಶ್ರ ರಿಲೇಗೆ ಅವಕಾಶ ನೀಡಲಾಗಿತ್ತು. ಭಾರತ ತಂಡ ಬೆಳ್ಳಿ ಗೆದ್ದಿರುವುದು ಖುಷಿ ಕೊಟ್ಟಿದೆ. ಅದೊಂದು ಅಪೂರ್ಮ ಅನುಭವವಾಗಿತ್ತು. ಪುರುಷ ಓಟಗಾರರಿಂದ ಆರಂ‘ಗೊಂಡು ಪುರುಷ ಓಟಗಾರರಿಂದಲೇ ಕೊನೆಗೊಳ್ಳುತ್ತದೆ. ನಡುವೆ ಇಬ್ಬರು ಮಹಿಳಾ ಓಟಗಾರರು ಓಡುತ್ತಾರೆ, ಭಾರತಕ್ಕೆ ಈ ವಿಭಾಗದಲ್ಲೂ ಚಿನ್ನ ಗೆಲ್ಲುವ ಸಾ‘್ಯತೆ ಇದ್ದಿತ್ತು. ಆದರೆ ಕೆಲವು ಸೆಕೆಂಡುಗಳ ಅಂತರದಲ್ಲಿ ಚಿನ್ನದಿಂದ ವಂಚಿತವಾಯಿತು, ಎಂದು ಪೂವಮ್ಮ ಹೇಳಿದರು.   ವನಿತೆಯರ ರಿಲೇಯಲ್ಲಿ ಸರಿತಾ ಗಾಯಕ್ವಾಡ್, ಹಿಮಾ ದಾಸ್, ವಿಸ್ಮಯ ಹಾಗೂ ಪೂವಮ್ಮ ಅವರನ್ನೊಳಗೊಂಡ ತಂಡ ಚಿನ್ನ ಗೆದ್ದಿತ್ತು.

ಆಳ್ವಾಸ್‌ಗೆ ಅಭಿನಂದನೆ

ಗುರುವಾರ ವಿಮಾನ ನಿಲ್ದಾಣಕ್ಕೆ ಆಗಮಿಸಿ ತಮ್ಮನ್ನು ಸ್ವಾಗತಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ, ಮಾಜಿ ಸಚಿವ  ಕೆ. ಅಭಯಚಂದ್ರ ಜೈನ್ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾರಿಗೆ ತಾವು ಚಿರಋಣಿಯಾಗಿರುವುದಾಗಿ ಹೇಳಿದರು. ಡಾ. ಮೋಹನ್ ಆಳ್ವಾ ಅವರು ನನ್ನ ಕ್ರೀಡಾ ಬದುಕಿನಲ್ಲಿ ಸಾಕಷ್ಟು ನೆರವು ನೀಡಿದ್ದಾರೆ. ಕ್ರೀಡೆ ಹಾಗೂ ಕ್ರೀಡಾಪಟುಗಳ ಬಗ್ಗೆ ಅವರಿಗಿರುವ ಕಾಳಜಿ ಇತರರಿಗೆ ಮಾದರಿ. ಈ ಕಾರಣಕ್ಕಾಗಿ ಆಳ್ವಾಸ್‌ನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಎಂದರು.

Related Articles