Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಾಡು ಎಂದು ಗೇಲಿ ಮಾಡಿದರು, ಆತ ಕಾಡಲ್ಲಿದ್ದೇ ಚಾಂಪಿಯನ್ ಆದ

ಸೋಮಶೇಖರ್ ಪಡುಕರೆ ಬೆಂಗಳೂರು 

ಇದು ಕತೆಯಲ್ಲ …ಬುಡಕಟ್ಟು ಹುಡುಗನ ಯಶೋಗಾಥೆ ….

ಸುಮಾರು 20ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿಯ ಕುಂದಾಣದ ಗ್ರಾಮಕ್ಕೆ ತಾಗಿಕೊಂಡಿರುವ ಕಾಡಿನ ಪ್ರದೇಶ ಚೆನ್ನಕೆಂಪನಹಳ್ಳಿ. ಅದು ಕಾಡು ಪ್ರದೇಶ. ಅದ ಬುಡಕಟ್ಟು ಜನರು ವಾಸಿಸುವ ಪ್ರದೇಶವಾಗಿತ್ತು. ನರಸಿಂಹಯ್ಯ ಹಾಗೂ ಜಯಮ್ಮ ಅವರ ಕುಟಂಬ ಅಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿತ್ತು. ಅವರ ಕುಟಂಬದಲ್ಲಿ ಸಂಜಯ್ ಕ್ರೀಡೆಯಲ್ಲಿ ಆಸಕ್ತಿ ಇರುವ ಹುಡುಗ. ಆದರೆ ಕಾಡಿನಲ್ಲಿ ವಾಸಿಸುತ್ತಿದ್ದ ಕಾರಣ ಆತನನ್ನು ಸಂಜಯ್ ಎಂದು ಕರೆಯದೆ ಕಾಡು ಎಂದೇ ಗೇಲಿ ಮಾಡುತ್ತಿದ್ದರು. ಸಂಜಯ್ ಪದವಿ ಶಿಕ್ಷಣ ಮುಗಿಸುವವರೆಗೂ ಕಾಡು ಎಂದೇ ಕರೆಯಲ್ಪಡುತ್ತಿದ್ದ.
ಆದರೆ ಸಮಾಜದ ಈ ಗೇಲಿಯ ಮಾತುಗಳಿಗೆ ಬೆಲೆ ಕೊಡದ ಸಂಜಯ್ ಕ್ರೀಡೆಯ ಮೂಲಕ ಉತ್ತರ ನೀಡಿದರು. ಜಿಲ್ಲಾ ಮಟ್ಟದಲ್ಲಿ ಜಾವಲಿನ್ ಹಾಗೂ ಡಿಸ್ಕಸ್ ಎತೆತಗಾರನಾಗಿದ್ದ ಸಂಜಯ್ ನಂತರ ವಾಲಿಬಾಲ್‌ನಲ್ಲಿ ಪಳಗಿ ಬಿಇಎಲ್ ಪರ ಆಡಿದ್ದರು. ಕಾಲಿನ ಲಿಗಾಮೆಂಟ್ ಹರಿದ ಕಾರಣ ವಾಲಿಬಾಲ್‌ನಿಂದಲೂ ದೂರ ಉಳಿಯಬೇಕಾಯಿತು. ಆದರೂ ಅವನ ಗೆಳೆಯರು ಕಾಡು ಎಂದೇ ಕರೆಯುವುದನ್ನು ಮುಂದುವರಿಸಿದರು. ನಂತರ ಒಂದು ವರ್ಷದ ಬಳಿಕ  ಬೈಕ್ ರೇಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಐಎನ್‌ಆರ್‌ಸಿ, ದಕ್ಷಿಣ ಡೇರ್, ರೈಡ್ ಡೆ ಹಿಮಾಲಯ ಮೊದಲಾದ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದರು. ಬುಲೆಟ್‌ನಲ್ಲೇ ರಾಷ್ಟ್ರೀಯ ರಾಲಿ ಚಾಂಪಿಯನ್ ಪಟ್ಟ ಗೆದ್ದು ದೇಶದ ಮೊದಲ ರಾಲಿ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬುಲೆಟ್‌ನಲ್ಲೇ ಜಗತ್ತಿನ ಅತ್ಯಂತ ಕಠಿಣ ರಾಲಿಗಳಲ್ಲಿ ಒಂದೆನಿಸಿರುವ ರೈಡ್ ಡೇ ಹಿಮಾಲಯದಲ್ಲಿ ಸಮಗ್ರ ಐದನೇ ಸ್ಥಾನ ಗಳಿಸಿದರು.  ಆದರೂ ಕಾಡುವ ಕಾಡು ಸಂಜಯ್ ಅವರನ್ನು ಅಂಟಿಕೊಂಡೇ ಬಂದಿತು. ಅಂಗತಾ ರಾಲಿ ತಂಡದ ಪ್ರಮುಖ ರೈಡರ್ ಆಗಿರುವ ಸಂಜಯ್ ದುಬೈ ಬಾಹಾ ಡೆಸರ್ಟ್ ರಾಲಿಯಲ್ಲಿ ಮಿಂಚಿದರು.

ಕಾಡು ಬದಲು ಟ್ರೈಬ್

ಕಾಡಿನ ಜನರು ಒಂದು ಬುಡಕಟ್ಟಿಗೆ ಸೇರಿದವರು. ಟ್ರೈಬಲ್ ಸಂಜಯ್, ಕಾಡು ಸಂಜಯ್ ಎಂದು ಕರೆಯುವವರಿಗೆ ಉತ್ತರ ನೀಡುವುದು ಸಂಜಯ್ ಅವರ ಉದ್ದೇಶವಾಗಿರಲಿಲ್ಲ. ಬದಲಾಗಿ ಬುಡಕಟ್ಟು , ಟ್ರೈಬಲ್ ಅಥವಾ ಕಾಡು ಇದಕ್ಕೊಂದು ಗೌರವ ನೀಡಬೇಕೆಂದು ತಮ್ಮ ಹೆಸರನ್ನೇ ಟ್ರೈಬಲ್ ಸಂಜಯ್ ಎಂದು ಬದಲಾಯಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಸಂಜಯ್ ಎಂದು ಹುಡುಕಿದರೆ ನಿಮಗೆ ಬೇರೆ ಯಾರೋ ಸಿಗುತ್ತಾರೆ. ಆದರೆ ಟ್ರೈಬಲ್ ಸಂಜಯ್ ಎಂದು ಹುಡುಕಿದರೆ ನಮ್ಮ ರಾಷ್ಟ್ರೀಯ ಚಾಂಪಿಯನ್ ಅವರ ಸಾಧನೆ ಸಿಗುತ್ತದೆ.

ಸಾಮಾಜಿಕ ಕಾಳಜಿ

ಸಂಜಯ್ ಅವರ ಕುಟುಂಬಕ್ಕೆ ಸೇರಿದ ಸುಮಾರು 8 ಎಕರೆ ಭೂಮಿ ಇದೆ. ಈಗ ಎಕರೆಯೊಂದಕ್ಕೆ ಕನಿಷ್ಠ  8  ಕೋಟಿ ರೂ. ಬೆಲೆ ಇದೆ. ಮಾರಿದರೆ ಬದುಕಿನ ಹಾದಿ ಸುಗಮವಾಗಬಹುದು. ಆದರೆ ಸಂಜಯ್ ಅವರ ಗುರಿಯೇ ಬೇರೆ. ಈಗಾಗಲೇ ಟ್ರೈಬಲ್ ಸಂಜಯ್ ಹೆಸರಲ್ಲಿ ಆ್ ರೋಡ್ ಟ್ರ್ಯಾಕ್ ನಿರ್ಮಿಸಿದ್ದಾರೆ. ರಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ತರಬೇತಿ ನೀಡುತ್ತಾರೆ. ಹವ್ಯಾಸಿ ರೈಡರ್‌ಗಳಾಗಲು ಕಲಿಯಲು ಬರುವವರಿಗೆ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡುತ್ತಾರೆ. ಶನಿವಾರ ಹಾಗೂ ಭಾನುವಾರ ಹೆಚ್ಚಿನ ಆಸಕ್ತರು ಸಂಜಯ್ ಅವರ ಟ್ರ್ಯಾಕ್‌ನಲ್ಲಿ ತರಬೇತಿ ಪಡೆಯುತ್ತಾರೆ.

ಸ್ಪೋರ್ಟ್ಸ್ ಹಾಸ್ಟೆಲ್ ಕಟ್ಟುವ ಗುರಿ

ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಸಂಜಯ್, ತಾವಿರುವ ಊರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಹಾಸ್ಟೆಲ್ ನಿರ್ಮಿಸುವ ಗುರಿ ಹೊಂದಿರುವುದಾಗಿ ಹೇಳಿದರು. ತಮ್ಮ ಎಂಟು ಎಕರೆ ಭೂಮಿಯ ಜತೆಯಲ್ಲಿ ಸುತ್ತಮುತ್ತಲಿನ ಇತರ ಭೂಮಿಯನ್ನೂ ಬೋಗ್ಯಕ್ಕೆ ಪಡೆದಿದ್ದಾರೆ. ಪ್ರತಿಯೊಬ್ಬ ತಮಗಿರುವ ಭೂಮಿಯಲ್ಲಿ ಶಾಲೆ ಕಟ್ಟಿ ಹಣ ಮಾಡುವ ಉದ್ದೇಶ ಹೊಂದಿರುತ್ತಾರೆ.ಆದರೆ ಸಂಜಯ್ ಅವರ ಗುರಿಯೇ ಬೇರೆ. ಬಡ ಮಕ್ಕಳಿಗಾಗಿ ಉತ್ತಮ ಗುಣಮಟ್ಟದ ಕ್ರೀಡಾ ಹಾಸ್ಟೆಲ್ ಕಟ್ಟುವುದು. ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವುದು. ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಮೋಟಾರ್ ಸ್ಪೋರ್ಟ್ಸ್ ಸೇರಿದಂತೆ ಹೆಚ್ಚಿನ ಕ್ರೀಡೆಗಳಿಗೆ ತಾನು ಕಟ್ಟುವ ಕ್ರೀಡಾ ಹಾಸ್ಟೇಲ್ ಉಪಯೋಗಕ್ಕೆ ಬರಬೇಕು ಎಂಬುದು ಸಂಜಯ್ ಅವರ ಗುರಿ.
ಸರಕಾರ ಅದೇಷ್ಟೋ ಕೆಲಸಕ್ಕೆ ಬಾರದ ಯೋಜನೆಗಳನ್ನು ಹಾಕಿಕೊಂಡು ನಂತರ ಕೈ ಬಿಡುತ್ತದೆ. ಖಾಸಗಿ ಹಾಗೂ ಸರಕಾರ ಜಂಟಿಯಾಗಿ ಸ್ಥಾಪಿಸುವ ಅದೆಷ್ಟೋ ಯೋಜನೆಗಳಿವೆ. ಸಂಜಯ್ ಅವರ ಈ ಯತ್ನಕ್ಕೆ ರಾಜ್ಯ ಸರಕಾರ ಕೈ ಜೋಡಿಸಿದರೆ ಉತ್ತಮ ಕ್ರೀಡಾ ಹಾಸ್ಟೆಲ್ ಹಾಗೂ ಅಪೂರ್ವವೆನಿಸುವ ಮೋಟಾರ್ ಸ್ಪೋರ್ಟ್ಸ್ ಕೇಂದ್ರವೊಂದು ಹುಟ್ಟಿಕೊಳ್ಳಲು ಸಾದ್ಯವಿದೆ.
ಸಂಜಯ್ ಅವರನ್ನು ಅಂದು ಕಾಡು ಎಂದು ಗೇಲಿ ಮಾಡುತ್ತಿದ್ದವರು ಇಂದು ಅವರ ಸಾಧನೆಯನ್ನು ಕಂಡು ನಿಬ್ಬೆರಗಾಗಿದ್ದಾರೆ. ನಾವೆಲ್ಲಿ ಇದ್ದೇವೆ ಎಂಬುದು ಮುಖ್ಯವಲ್ಲ, ನಾವು ಏನು ಸಾಧನೆ ಮಾಡುತ್ತಿದ್ದೇವೆ ಎಂಬುದು ಮುಖ್ಯ.

administrator