Friday, December 13, 2024

ಅಣ್ಣನ ಬದಲಿಗೆ ಹುಡುಗರ ತಂಡದಲ್ಲಿ ಆಡಿ ಸರಣಿಶ್ರೇಷ್ಠಳೆನಿಸಿದ ಶಫಾಲಿ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

  ಈ ಭೂಮಿಯ ಮೇಲೆ ಸಾಧಕಿಯೊಬ್ಬಳ ಜೀವನಗಾಥೆಯನ್ನು ಗಮನಿಸಿದಾ, ನೆನಪಾಗುವುದು ಜಿ.ಎಸ್. ಶಿವರುದ್ರಪ್ಪನರ ಕವಿತೆಯ ಸಾಲು…ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ…..ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಪುರುಷರಂತೆ ಅಬ್ಬರದ ಆಟವಾಡಿ ನಾಲ್ಕು ಪಂದ್ಯಗಳಲ್ಲಿ 161 ರನ್ ಗಳಿಸಿ, ನೂತನ ವಿಶ್ವ ರಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಸ್ಫೋಟಕ ಆಟಗಾರ್ತಿ ಹರಿಯಾಣದ ಶಫಾಲಿ ವರ್ಮಾ. ಶಿಫಾಲಿ ಸಿಡಿಸಿದ ಪ್ರತಿಯೊಂದು ಸಿಕ್ಸರ್ ಹಿಂದೆ ಖುಷಿ ಇದೆ…..ನೋವಿದೆ…. ಸ್ಫೂರ್ತಿಯ ಸೆಲೆ ಇದೆ…..ಭವಿಷ್ಯದ ಬೆಳಕಿದೆ.

ಶಫಾಲಿ ಅವರ ತಂದೆ ಸಂಜೀವ್ ವರ್ಮಾ ಅವರು ಪ್ರಾಥಮಿಕ ಹಂತದಲ್ಲಿ ಕ್ರಿಕೆಟ್ ಆಡಿದವರು, ಆದರೆ ಅದರಲ್ಲಿ ಮಿಂಚಲಾಗಲಿಲ್ಲ. ಮಗನನ್ನು ಕ್ರಿಕೆಟಿಗನನ್ನಾಗಿಸಬೇಕೆಂಬ ಅವರ ಹಂಲವೂ ಈಡೇರಲಿಲ್ಲ. ಆದರೆ ಕೊನೆಯಲ್ಲಿ ಮನೆಯನ್ನು ಬೆಳಗಿದ್ದು, ತಂದೆ ಆಸೆ ಈಡೇರಿಸಿದ್ದು ಈ ಹದಿನಾರರ ಹರೆಯದ ಶಫಾಲಿ.

 

ಹರಿಯಾಣದ ರೊಹ್ತಾಕ್ ನಲ್ಲಿ ಈಗ ಶಫಾಲಿ ವರ್ಮಾ ಅವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಆದರೆ ಹತ್ತು ವರ್ಷಗಳ ಹಿಂದೆ ಸಂಜೀವ್ ಶರ್ಮಾ ಅವರು ತನ್ನ ಮಗಳಿಗಾಗಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅವಕಾಶ ನೀಡಿ ಎಂದು ಕೇಳಿಕೊಂಡಾಗ ತಮಾಷೆ ಮಾಡಿದವರೇ ಹೆಚ್ಚು. ‘’ ನಿಮ್ಮ ಮಗಳಿಗೆ ಚೆಂಡು ತಗಲಿ ಪೆಟ್ಟಾದೀತು ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳಿ’’ ಎಂದು ತಮಾಷೆ ಮಾಡಿರುವುದನ್ನು ಶಫಾಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಂದು ದಿನ ತಲೆಯ ಕೂದಲನ್ನು ಹುಡುಗರಂತೆ ಕಟ್ ವಿನ್ಯಾಸ ಮಾಡಿಕೊಂಡಾಗ ತರಬೇತಿಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು.

ಪುರುಷರ ಟೂರ್ನಿಯಲ್ಲಿ  ಸರಣಿಶ್ರೇಷ್ಠ ಗೌರವ

 

ಒಮ್ಮೆ 12 ವರ್ಷ ವಯೋಮಿತಿಯ ಪುರುಷರ ಟೂರ್ನಿಯೊಂದು ನಡೆಯುತ್ತಿತ್ತು, ಶಫಾಲಿಯ ಸಹೋದರ ಆ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಅನಾರೋಗ್ಯದ ಕಾರಣ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಸಂಜೀವ್ ವರ್ಮಾ ತನ್ನ ಮಗನ ಬದಲಿಗೆ ಮಗಳಿಗೆ ಅವಕಾಶ ನೀಡುವಂತೆ ವಿಚಿತ್ರ ಬೇಡಿಕೆ ಮುಂದಿಟ್ಟರು. ಸಂಘಟಕರು ಅದಕ್ಕೆ ಒಪ್ಪಿ ಶಫಾಲಿಗೆ ಅವಕಾಶ ಕಲ್ಪಿಸಿದರು. ಎಲ್ಲರಿಗಿಂತ ಹೆಚ್ಚು ರನ್ ಗಳಿಸಿದ ಶಿಫಾಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಲ್ಲಿಂದ ಕಪಿಲ್ ದೇವ್ ಅವರ ಊರಿನಲ್ಲಿ ಹೊಸ ಪ್ರತಿಭೆಯೊಂದು ಚಿಗುರೊಡೆಯಿತು.

 

ಗ್ಯಾಲರಿಯಲ್ಲಿ ಕುಳಿತು ಸಚಿನ್, ಸಚಿನ್ ಎಂದು ಸಂಭ್ರಮ ಪಡುತ್ತಿದ್ದ ಶಫಾಲಿ ಮುಂದೊಂದು ದಿನ ಕ್ರಿಕೆಟ್ ದಿಗ್ಗಜನ ದಾಖಲೆಯೊಂದನ್ನು ಮುರಿಯತ್ತಾಳೆಂದು ಯಾರೂ ಊಹಿಸಿರಲಿಲ್ಲ.  15 ವರ್ಷ  285 ದಿನಗಳು,… ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅರ್ಧ ಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಕ್ರಿಕೆಟ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲಿಯವರೆಗೂ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಈ ದಾಖಲೆ ಇದ್ದಿತ್ತು. ಸಚಿನ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 59 ರನ್ ಗಳಿಸಿದಾಗ ಅವರಿಗೆ 16 ವರ್ಷ 214 ದಿನಗಳು.

 

100 ಎಸೆತಗಳಲ್ಲಿ 161 ರನ್!

ಈ ಬಾರಿಯ ಮಹಿಳಾ ವಿಶ್ವಕಪ್ ನಲ್ಲಿ ಶಫಾಲಿ ನಾಲ್ಕು ಪಂದ್ಯಗಳಲ್ಲಿ ಒಟ್ಟು 161 ರನ್ ಗಳಿಸಿದ್ದಾರೆ. (29, 39, 46, 47) ಅವರು ಎದುರಿಸಿದ ಒಟ್ಟು ಎಸೆತ 100. ಒಟ್ಟು 9 ಸಿಕ್ಸರ್ ಗಳನ್ನು ಗಳಿಸಿರುತ್ತಾರೆ. ಶಫಾಲಿ ಅವರ ಈ ಸಾಧನೆ ಅಂತಾರಾಷ್ಟ್ರೀಯ ಟಿ20 ರಾಂಕಿಂಗ್ ನಲ್ಲಿ ನಂ1 ಸ್ಥಾನವನ್ನು ತಂದುಕೊಟ್ಟಿದೆ.

 

ಮಹಿಳಾ ಕ್ರಿಕೆಟ್ ನಲ್ಲಿ ಕುತೂಹಲ ಇಲ್ಲ, ಅದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ ಎಂದು ಹೇಳುತ್ತಿರುವ ಬಿಸಿಸಿಐನ ಅಭಿಪ್ರಾಯ ತಕ್ಕುದಾದುದಲ್ಲ. ಈಗ ಮಹಿಳಾ ಕ್ರಿಕೆಟ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಗೆ ಉತ್ತಮ ಪ್ರೇಕ್ಷಕರಿದ್ದಾರೆ. ಶಫಾಲಿ ವರ್ಮಾ ಅವರಂಥ ಆಟಗಾರರು ಮಹಿಳಾ ಕ್ರಿಕೆಟ್ ನಲ್ಲಿ ಹೊಸ ಅಲೆಯನ್ನುಂಟುಮಾಡಿದ್ದಾರೆ, ಈ ಅಲೆ ಮುಂದೆ ಸಾಗಲಿ. ಶಫಾಲಿ ಅವರ ಸಾಧನೆ ಬೇರೆಯವರಿಗೆ ಸ್ಫೂರ್ತಿಯಾಗಲಿ.

Related Articles