Friday, October 4, 2024

ಈ ಮಾಜಿ ಕ್ರಿಕೆಟಿಗನ ಒಟ್ಟು ಆಸ್ತಿ 20,000 ಕೋಟಿ!!!

ಜಗತ್ತಿನಲ್ಲಿ ಶ್ರೀಮಂತ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆ ಉದ್ಭವಿಸಿದಾಗ ನಾವು ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ ಎಂದು ಉತ್ತರಿಸುತ್ತೇವೆ. ಆದರೆ ಬರೋಡದ ಮಾಜಿ ಕ್ರಿಕೆಟಿಗರೊಬ್ಬರು ಜಗತ್ತಿನ ಶ್ರೀಮಂತ ಕ್ರಿಕೆಟಿಗ ಎಂಬುದು ಸುದ್ದಿಯಾಗಿರಲೇ ಇಲ್ಲ. This former cricketer is richer than Sachin Tendulkar

ಆದರೆ ಈ ಕ್ರಿಕೆಟಿಗ ಕೇವಲ ರಣಜಿ ಪಂದ್ಯವನ್ನಾಡಿದ್ದು ಅಷ್ಟೇ, ಶ್ರೀಮಂತಿಕೆಯಲ್ಲಿ ಭಾರತದ ಎಲ್ಲ ಕ್ರಿಕೆಟಿಗರನ್ನು ಹಿಂದಿಕ್ಕಿದ್ದು ಅಚ್ಚರಿ. ಅದು ಜಾಹೀರಾತು, ಪಂದ್ಯ ಶುಲ್ಕದಿಂದಲ್ಲ. ತನ್ನ ಪಿತ್ರಾರ್ಜಿತ ಆಸ್ತಿಯಿಂದ ಎಂಬುದು ಮುಖ್ಯ. ನಾವು ಮಾತನಾಡುತ್ತಿರುವುದು ಬರೋಡದ ಸಮರ್ಜಿತ್‌ಸಿಂಗ್‌ ರಂಜಿತ್‌ಸಿನ್ಹಾ ಗಾಯಕ್ವಾಡ್‌ ಅವರ ಬಗ್ಗೆ. 1967 ಏಪ್ರಿಲ್‌ 25 ರಂದು ಜನಿಮಸಿದ ಸಮರ್ಜಿತ್‌ಸಿಂಗ್‌ ಅವರು  ರಂಜಿತ್‌ಸಿನ್ಹಾ ಪ್ರತಾಪ್‌ಸಿನ್ಹಾ ಗಾಯಕ್ವಾಡ್‌ ಮತ್ತು ಶುಭಾಂಗಿನಿರಾಜೆ ಅವರ ಏಕೈಕ ಮಗ. ಓದಿದ್ದು ಡೆಹ್ರಾಡೂನ್‌ನ ದಿ ಡೂನ್‌ ಸ್ಕೂಲ್‌ನಲ್ಲಿ. ಶಾಲೆಯಲ್ಲಿ ಟೆನಿಸ್‌, ಫುಟ್ಬಾಲ್‌ ಮತ್ತು ಕ್ರಿಕೆಟ್‌ ತಂಡದ ನಾಯಕ. ನಂತರ 1987/88- 1988/89ರಲ್ಲಿ ಬರೋಡ ರಣಜಿ ತಂಡದ ಆಟಗಾರ. ನಿವೃತ್ತಿಯ ನಂತರ ಬರೋಡ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆ. ಈ ಕ್ರಿಕೆಟಿಗನ ಒಟ್ಟು ಆಸ್ತಿ ಮೌಲ್ಯ 20,000 ಕೋಟಿ ರೂ.!.

ತನ್ನ ಚಿಕ್ಕಪ್ಪನೊಂದಿಗೆ ಕುಟುಂಬದ ಪಾಲು ಪಡೆದ ನಂತರ ಸಮರ್ಜಿತ್‌ಸಿಂಗ್‌ ಬೃಹತ್‌ ಮೊತ್ತದ ಆಸ್ತಿಯ ಒಡೆಯರಾದರು. ತಂದೆಯ ನಿಧನದ ನಂತರ 2012ರಲ್ಲಿ ಬರೋಡದ ಮಹಾರಾಜನಾಗಿ ಆಯ್ಕೆಯಾದರು. ಈ ಬಳಿಕ ಭಾರತದ ಅತ್ಯಂತ ದೊಡ್ಡ ಖಾಸಗಿ ನಿವಾಸದ ಒಡೆಯನಾದರು. ಗುಜರಾತ್‌ ಮತ್ತು ಬನಾರಸ್‌ನಲ್ಲಿರುವ 17 ಪ್ರಧಾನ ದೇವಸ್ಥಾನಗಳ ಟ್ರಸ್ಟಿಯಾದರು.

ಈಗ ಭಾರತ ಕ್ರಿಕೆಟ್‌ ತಂಡದ ಹಾಲಿ ಮತ್ತು ಮಾಜಿ ಆಟಗಾರರ ಶ್ರೀಮಂತಿಕೆಗೆ ಹೋಲಿಸಿದರೆ ಸಮರ್ಜಿತ್‌ಸಿಂಗ್‌ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಸಚಿನ್‌ ತೆಂಡೂಲ್ಕರ್‌ ಅವರ ಆಸ್ತಿಯ ಮೊತ್ತ 1250 ಕೋಟಿ ರೂ. ವಿರಾಟ್‌ ಕೊಹ್ಲಿಯ ಓಟ್ಟು ಆಸ್ತಿಯ ಮೊತ್ತ 1050 ಕೋಟಿ ರೂ. ಮತ್ತು ಮಹೇಂದ್ರ ಸಿಂಗ್‌ ಧೋನಿಯ ಆಸ್ತಿಯ ಮೊತ್ತ 1040 ಕೋಟಿ ರೂ. ಆದ್ದರಿಂದ ಸಮರ್ಜಿತ್‌ಸಿಂಗ್‌ ಕ್ರಿಕೆಟ್‌ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುತ್ತಾರೆ. ಆದರೆ ಸಚಿನ್‌, ವಿರಾಟ್‌ ಹಾಗೂ ಧೋನಿ ಇವರೆಲ್ಲ ಕ್ರಿಕೆಟ್‌ ಆಡಿ ಶ್ರೀಮಂತರಾದವರು ಯಾವುದೇ ಪಿತ್ರಾರ್ಜಿತ ಆಸ್ತಿಯ ಮೂಲಕ ಶ್ರೀಮಂತರಾದವರಲ್ಲ ಎಂಬುದು ಮುಖ್ಯ.

Related Articles