ಆರ್ಸಿಬಿಯ ಹೊಸ ಮನೆ ಬಹುತೇಕ ಫೈನಲ್: ವರದಿ
ಬೆಂಗಳೂರು: ಕ್ರಿಕೆಟ್ ಜಗತ್ತಿನ ಉತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಮನೆಯಂಗಣ, ಆದರೆ ಕಳೆದ ವರ್ಷ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಕ್ರಿಕೆಟ್ ಮೌನಕ್ಕೆ ಜಾರಿದೆ. ಕ್ರಿಕೆಟ್ ನಡೆಯದಿದ್ದರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಖುಷಿಪಡುವವರ ಸಂಖ್ಯೆಯೂ ಅಪಾರ. ಆದರೆ ಈ ಬಾರಿ ಇಲ್ಲಿಯ ಪಂದ್ಯಗಳು ಛತ್ತೀಸ್ಗಢದ ರಾಯ್ಪುರಕ್ಕೆ ಸ್ಥಳಾಂತರಗೊಳ್ಳುತ್ತಿದೆ ಎಂಬ ಸುದ್ದಿ ಹಬ್ಬಿದೆ. RCB Unlikely To Return To M Chinnaswamy Stadium For IPL After Stampede Mess, New ‘Home’ Almost Final.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಅವರ ತಂಡ ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನಸಭಾ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ,ಕೆ, ಶಿವಕುಮಾರ್ ಹಾಗೂ ಗೃಹ ಸಚಿವ ಡಾ, ಪರಮೇಶ್ವರ್ ಅವರನ್ನು ಭೇಟಿಯಾಗಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿಕೊಂಡಿದ್ದರು. ಅದಕ್ಕೆ ಸರಕಾರ ಒಪ್ಪಿಗೆಯನ್ನೂ ನೀಡಿತ್ತು, ಆದರೆ ಈ ಬಾರಿಯ ವಿಜಹ ಹಜಾರೆ ಟ್ರೋಫಿಯ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯದೆ ನಗರದ ಹೊರಭಾಗದಲ್ಲಿರುವ ಬಿಸಿಸಿಐ ಎಕ್ಸಲೆನ್ಸಿ ಕ್ರೀಡಾಂಗಣದಲ್ಲಿ ನಡೆದಿತ್ತು.
ಈಗ ಎನ್ಡಿಟಿವಿ ಸ್ಪೋರ್ಟ್ಸ್ನ ವರದಿಯ ಪ್ರಕಾರ ಈ ಬಾರಿಯ ಆರ್ಸಿಬಿ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ, ಬದಲಾಗಿ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆಯಲಿದೆ. ಚಿನ್ನಸ್ವಾಮಿ ದೇಶೀಯ ಪಂದ್ಯಗಳನ್ನು ಕಳೆದುಕೊಂಡಿರುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಪಂದ್ಯಗಳಿಂದಲೂ ವಂಚಿತವಾಗಿದೆ.
ಬಿಸಿಸಿಐ ಇದೇ ರೀತಿಯ ನಿಲುವನ್ನು ಮುಂದುವರಿಸಿದೆ, ರಾಜ್ಯ ಸರಕಾರ ಇದೇ ರೀತಿಯಲ್ಲಿ ಮೌನವಾದರೆ ಕರ್ನಾಟಕದ ಕ್ರಿಕೆಟ್ಗೆ ಮಾತ್ರವಲ್ಲ ರಾಜ್ಯದ ಆದಾಯ ಹಾಗೂ ಪ್ರವಾಸೋದ್ಯಮಕ್ಕೂ ಹೊಡೆತ ಬೀಳಲಿದೆ. ಅದೇ ರೀತಿ ಕ್ರಿಕೆಟ್ನ ಅಭಿವೃದ್ಧಿಯೂ ಕುಂಠಿತವಾಗಲಿದೆ. ಇದರ ನಡುವೆ ರಾಜ್ಯ ಸರಕಾರ ಸೂರ್ಯನಗರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾಗಂಣ ಕಟ್ಟಲು ಮುಂದಾಗಿದೆ. ಏನೇ ಇರಲಿ ಐತಿಹಾಸಿಕ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ನ ಧ್ವನಿ ಮೊಳಗಬೇಕು. ನೋವುಗಳನ್ನು ಮರೆತು ಬದುಕುವುದೇ ಜೀವನ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯೂ ಈ ಬಗ್ಗೆ ಯೋಚಿದುವುದು ಸೂಕ್ತ,

