ಅಟ್ಲಾಂಟಿಕ್ ಸಾಗರ ದಾಟಿದ ಜಿಎಸ್‌ಎಸ್ ಮೊಮ್ಮಗಳು ಅನನ್ಯ ಪ್ರಸಾದ್
ಬೆಂಗಳೂರು: “ಕಾಣದ ಕಡಲಿಗೆ ಹಂಬಲಿಸಿದೆ ಮನ” ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಈ ಗೀತೆ ಎಂದೆಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವುದು. ಅವರ ಮೊಮ್ಮಗಳು ಅನನ್ಯ ಪ್ರಸಾದ್ ಅಜ್ಜನ ಕಾಣದ ಕಡಲನ್ನು ದಾಟಿ ಬಂದಿದ್ದಾರೆ. ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ. ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ಹಾಕಿ ದಾಟುವ ಮೂಲಕ ಇತಿಹಾಸ ಬರೆದಿದ್ದಾರೆ. Rashtra Kavi Dr Shivarudrappa’s Grand Daughter Ananya Prasad creates history by crossing Atlantic Ocean by rowing.
ಈ ಸಾಧನೆ ಮಾಡಿದ ಭಾರತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಡಿಸೆಂಬರ್ 12, 2024 ರಂದು ಸ್ಪೇನ್‌ನ ಗೊಮೆರಾದಲ್ಲಿರುವ ಕ್ಯಾನ್ಬೆರಾ ದ್ವೀಪದಿಂದ ಹೊರಟ ಅನನ್ಯ 52 ದಿನಗಳ ಕಾಲ ಅಟ್ಲಾಂಟಿಕ್ ಸಾಗರವನ್ನು ತಮ್ಮ “ಅಟ್ಲಾಂಟಿಕ್ ಒಡಿಸ್ಸಿ” ಹೆಸರಿನ ದೋಣಿಯ ಮೂಲಕ ಒಂಟಿಯಾಗಿ ಹುಟ್ಟು ಹಾಕಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್‌ನ ಶೆಫೀಲ್ಟ್‌ನಲ್ಲಿ ನೆಲೆಸಿರುವ ಅನನ್ಯ ಅವರ ತಂದೆ, ಜಿಎಸ್ ಶಿವರುದ್ರಪ್ಪ ಅವರ ಮಗ, ಡಾ. ಶಿವಪ್ರಸಾದ್ ಅವರು ಸ್ಪೋರ್ಟ್‌ಮೇಲ್‌ಗೆ ಈ ವಿಷಯವನ್ನು ತಿಳಿಸಿದ್ದಾರೆ. ಫೆಬ್ರವರಿ 1 2025 ರಂದು ಆಂಟಿಗುವಾ ತಲಪುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅನನ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಲಪುವ ಸಮಯ ಆಂಟಿಗುವಾದ ಸ್ಥಳೀಯ ಸಮಯ ಬೆಳಗ್ಗಿನ 9 ಗಂಟೆ ಎಂದು ತಿಳಿಸಿದ್ದಾರೆ. ಆಂಟಿಗುವಾದ ನೆಲ್ಸನ್ ಡಾಕ್‌ಯಾರ್ಡ್‌ನ್ನು ಅನನ್ಯಾ ತಲುಪಲಿದ್ದಾರೆ.
ಅನನ್ಯ ಈ ಸಾಧನೆಯನ್ನು ಒಂದು ಉದ್ದೇಶವಿರಿಸಿಕೊಂಡು ಮಾಡಿದ್ದಾರೆ ಜಿಎಎಸ್‌ಎಸ್ ಅವರ ಹಿರಿಯ ಪುತ್ರ ಜಯದೇವ್ ಅವರು ಚಾಮರಾಜನಗರದಲ್ಲಿ ನಡೆಸುತ್ತಿರುವ ದೀನಬಂಧು ಟ್ರಸ್ಟ್‌ಗಾಗಿ ಮತ್ತು ಮೆಂಟಲ್ ಹೆಲ್ತ್ ಫೌಂಡೇಷನ್‌ಗಾಗಿ ನಿಧಿ ಸಂಗ್ರಹಿಸುವುದು ಅವರ ಉದ್ದೇಶವಾಗಿತ್ತು.