Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ರೀಡಾಕ್ಷೇತ್ರದ ಚಿನ್ನದ ಮಹಿಳೆ ಸರಳಾ ಶೆಟ್ಟಿ

 ಸೋಮಶೇಖರ್‌ ಪಡುಕರೆ: sportsmail

ಹೆಣ್ಣು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ, ಸಾಧನೆಯ ಹಾದಿಯಲ್ಲಿ ಪ್ರೋತ್ಸಾಹ ನೀಡಿದರೆ ಅವರು ಯಾವ ರೀತಿಯಲ್ಲಿ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬುದಕ್ಕೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟರ್‌ ಸರಳಾ ಬಿ. ಶೆಟ್ಟಿ ಉತ್ತಮ ನಿದರ್ಶನ.

ಭಾನುವಾರ ಮುಂಬಯಿಯಲ್ಲಿ ನಿಧನರಾದ ಸರಳಾ ಬಿ ಶೆಟ್ಟಿ ಅವರ ಅಗಲುವಿಕೆ ಕ್ರೀಡಾ ಲೋಕಕ್ಕೆ ತುಂಬಲಾರದ ನಷ್ಟ. ಆದರೆ ಅವರು ಮಾಡಿದ ಸಾಧನೆ ಹಾಗೂ ತೋರಿಸಿಕೊಟ್ಟ ದಾರಿ ಕ್ರೀಡಾ ಜಗತ್ತಿನಲ್ಲಿ ಸದಾ ಹಸಿರಾಗಿಯೇ ಉಳಿಯಲಿದೆ.

ಕಾರ್ಕಳ ತಾಲೂಕಿನ ಬೇಲಾಡಿಯ  ಪ್ರತಿಷ್ಠಿತ ಶೆಟ್ಟಿಬೆಟ್ಟು ಪರಾಡಿ ಮನೆತನದವರಾದ ಸರಳಾ ಶೆಟ್ಟಿಯವರು ಕಾಲೇಜು ದಿನಗಳಲ್ಲೇ ಕ್ರೀಡಾಕ್ಷೇತ್ರದಲ್ಲಿ ರಾಜ್ಯಕ್ಕೆ ಕೀರ್ತಿ ತಂದವರು. ಪತಿ ಬಾಲಕೃಷ್ಣ ಶೆಟ್ಟಿ ಅವರೊಂದಿಗೆ ಮುಂಬೈಯಲ್ಲಿ ನೆಲೆಸಿದ ನಂತರ ಮಹಾರಾಷ್ಟ್ರ ಸರಕಾರ ನೀಡುವ ಛತ್ರಪತಿ ಶಿವಾಜಿ ಮಹಾರಾಜ ಪ್ರಶಸ್ತಿಯನ್ನು ಎರಡು ಬಾರಿ ಗಳಿಸಿದವರು. ಅದೇ ರೀತಿ ದಾದಾಜಿ ಕೊಂಡದೇವ್‌ ಪ್ರಶಸ್ತಿಗೂ ಭಾಜನರಾದವರು.

ಶ್ರೇಷ್ಠ ಸಾಧಕಿ:

ಪವರ್‌ ಲಿಫ್ಟಿಂಗ್‌ ಮತ್ತು ವೇಟ್‌ ಲಿಫ್ಟಿಂಗ್‌ನಲ್ಲಿ ನಲ್ಲಿ ಒಟ್ಟು 17ಬಾರಿ ರಾಷ್ಟ್ರೀಯ ಚಾಂಪಿಯನ್‌ ಮಾತ್ರವಲ್ಲ ಹಲವು ಬಾರಿ ರಾಷ್ಟ್ರೀಯ ದಾಖಲೆ ಬರೆದ ಲಿಫ್ಟರ್.‌ ಏ಼ಷ್ಯನ್‌ ಚಾಂಪಿಯನ್ಷಿಪ್‌ನಲ್ಲಿ 9 ಬಾರಿ ಚಾಂಪಿಯನ್‌ ಪಟ್ಟ ಗೆದ್ದಿರುವುದು ಮಾತ್ರವಲ್ಲ ಏಷ್ಯನ್‌ ದಾಖಲೆ ಹೊಂದಿರುವ ಅಪೂರ್ವ ಸಾಧಕಿ. ವಿಶ್ವ ಚಾಂಪಿಯನ್ಷಿಪ್‌ನಲ್ಲಿ ಮೂರು ಬಾರಿ ಕಂಚಿನ ಪದಕ ಗೆದ್ದಿರುವ ಸರಳಾ ಶೆಟ್ಟಿಯವರು, ನ್ಯಾಷನಲ್‌ ಗೇಮ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ. ಐದು ಬಾರಿ ಭಾರತದ ಶ್ರೇಷ್ಠ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸರಳಾ ಶೆಟ್ಟಿಯವರಂಥ ಸಾಧಕಿ ಇತರರಿಗೆ ಮಾದರಿ ಎನಿಸಿದ್ದರು.

ಭಾರತೀಯ ಬ್ಯಾಂಕ್‌ ಅಸೋಸಿಯೇಷನ್‌ ನೀಡುವ ಸ್ಕ್ರಾಲ್‌ ಆಫ್‌ ಹಾನರ್‌ ಗೌರವಕ್ಕೆ ಪಾತ್ರರಾದ ಸರಳಾ ಬಿ ಶೆಟ್ಟಿಯವರು ಎರಡು ಬಾರಿ ಭಾರತೀಯ ಬ್ಯಾಂಕ್‌ ಅಸೋಷಿಯೇಷನ್‌ ನೀಡುವ ಶ್ರೇಷ್ಠ ಕ್ರೀಡಾ ಸಾಧಕಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಉತ್ತಮ ಸಂಘಟಕಿ:

ಸರಳಾ ಶೆಟ್ಟಿಯವರ ಕ್ರೀಡಾ ಸಾಧನೆಯು ಅವರಿಗೆ ವಿವಿಧ ಸಾಮಾಜಿಕ ಹಾಗೂ ಕ್ರೀಡಾ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ನಿಭಾಯಿಸುವ ಅವಕಾಶ ನೀಡಿದೆ. ರಾಷ್ಟ್ರೀಯ ಪವರ್‌ಲಿಫ್ಟರ್ಸ್‌ ಫೆಡರೇಷನ್‌ನ ಜೊತೆ ಕಾರ್ಯದರ್ಶಿ, ರಾಷ್ಟ್ರೀಯ ಪವರ್‌ಲಿಫ್ಟಿಂಗ್‌ ಫೆಡರೇಷನ್‌ನ ಆಯ್ಕೆ ಸಮಿತಿ ಸದಸ್ಯೆ, ಮಹಾರಾಷ್ಟ್ರ ಪವರ್‌ಲಿಫ್ಟಿಂಗ್‌ ಫೆಡರೇಷನ್‌ನ ಉಪಾಧ್ಯಕ್ಷೆ, ನವಿ ಮುಂಬೈ ಅಮೆಚೂರ್‌ ಪವರ್‌ಲಿಫ್ಟಿಂಗ್‌ ಫೆಡರೇಷನ್‌ನ ಕಾರ್ಯದರ್ಶಿ, ವೇಟ್‌ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ರೆಫರಿ, ಪವರ್‌ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ರೆಫರಿ, ಭಾರತೀಯ ಪವರ್‌ಲಿಫ್ಟಿಂಗ್‌ ಫೆಡರೇಷನ್‌ನ ಆಜೀವ ಸದಸ್ಯೆ, ಮುಂಬೈ ಬಂಟ್ಸ್‌ ಸಂಘದ ಉಪಾಧ್ಯಕ್ಷೆ, ಮುಂಬಯಿಯ ಕನ್ನಡ ವೆಲ್‌ಫೇರ್‌ ಸೊಸೈಟಿಯ ಉಪಾಧ್ಯಕ್ಷೆ, ಕಲ್ಯಾಣ ವಿಭಾಗದ ಪವರ್‌ಲಿಫ್ಟಿಂಗ್‌ ಅಸೋಸಿಯೇಷನ್‌ನ ಸಲಹೆಗಾರರು, ಮುಂಬಯಿಯ ಫೋರ್ಟ್‌ನಲ್ಲಿರುವ ನ್ಯಾಷನಲ್‌ ಹೆಲ್ತ್‌ ಲೀಗ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ವೃತ್ತಿಯಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಸಹೋದರಿಯರಿಗೆ ಮಾದರಿ:

ಶೆಟ್ಟಿಬೆಟ್ಟು ಪರಾಡಿ ಮನೆತನವು ಕ್ರೀಡಾ ಸಾಧಕರಿಂದ ತುಂಬಿದೆ, ಸರಳಾ ಶೆಟ್ಟಿ ಅವರ ಸಹೋದರಿ ಶ್ಯಾಮಲಾ ಶೆಟ್ಟಿ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್‌,‌ ಕೋಚ್‌ ಹಾಗೂ ಅಂತಾರಾಷ್ಟ್ರೀಯ ತೀರ್ಪುಗಾರರು. ಸರಳಾ ಶೆಟ್ಟಿ ಮುಂಬೈಯಲ್ಲಿದ್ದಕೊಂಡು ದೇಶಕ್ಕೆ ಕೀರ್ತಿ ತಂದರೆ, ಶ್ಯಾಮಲಾ ಶೆಟ್ಟಿಯವರು ಬೆಂಗಳೂರಿನಲ್ಲಿದ್ದುಕೊಂಡು ಜಾಗತಿಕ ಮಟ್ಟದಲ್ಲಿ ಮಿಂಚಿದವರು. ದೇಶ ಕಂಡ ಉತ್ತಮ ತರಬೇತುದಾರರಲ್ಲಿ ಒಬ್ಬರಾಗಿರುವ ಶ್ಯಾಮಲಾ ಶೆಟ್ಟಿಯವರು ಅಕ್ಕನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ತನ್ನೆಲ್ಲ ಸಾಧನೆಗೆ ಅಕ್ಕನೇ ಪ್ರೇರಣೆ ಎಂದಿದ್ದಾರೆ, “ಇಂದು ನಾನು ಕ್ರೀಡಾಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದು ನನ್ನಕ್ಕ ಸರಳಾ ಕಾರಣ. ಅವಳು ಹಾಕಿಕೊಟ್ಟ ಹಾದಿಯಲ್ಲಿಯೇ ನಾವು ಮುನ್ನಡೆದೆವು. ದೇವರು ನಮಗೆ ಯಶಸ್ಸಿನ ಹಾದಿ ತೋರಿಸಿದ. ಅಕ್ಕನ ಅಗಲುವಿಕೆ ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಕ್ರೀಡಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ,” ಎಂದು ಅಂತಾರಾಷ್ಟ್ರೀಯ ವೇಟ್ ಲಿಫ್ಟರ್‌, ಬಾರತ ಕ್ರೀಡಾ ಪ್ರಾಧಿಕಾರದ ಮಾಜಿ ಕೋಚ್‌ ಶ್ಯಾಮಲಾ ಶೆಟ್ಟಿ ಅವರು ತಿಳಿಸಿದ್ದಾರೆ.‌

ಇನ್ನೋರ್ವ ಸಹೋದರಿ ಜಯಲಕ್ಷ್ಮೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಅಥ್ಲೀಟ್.‌ ಸಹೋದರಿ ಶಾರದಾ ಕೂಡ ಕ್ರೀಡಾಸಕ್ತೆ.

ಸರಳಾ ಬಿ, ಶೆಟ್ಟಿ ಅವರ ಮಗ ಸೌಮಿಲ್‌ ಶೆಟ್ಟಿ ಖಾಸಗಿ ವಿಮಾನ ಸಂಸ್ಥೆಯಲ್ಲಿ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸರಳಾ ಬಿ. ಶೆಟ್ಟಿ ಅವರ ನಿಧನಕ್ಕೆ ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಅಧ್ಯಕ್ಷ ಸಹದೇವ ಯಾದವ್‌, ಕಾರ್ಯದರ್ಶಿ ಎಚ್ ಎಸ್‌ ಆನಂದೇ ಗೌಡ, ದ್ರೋಣಾಚಾರ್ಯ ಪಿಎಸ್‌ ಸಂಧೂ ಮತ್ತು ದ್ರೋಣಾಚಾರ್ಯ ಧವನ್‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹಾಗೂ ದೇಶದ ವಿವಿಧ ಭಾಗಗಳಲ್ಲಿರುವ ಬಂಟರ ಸಂಘಗಗಳು ಸಂತಾಪ ಸೂಚಿಸಿವೆ.

 


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.