Thursday, December 12, 2024

ಕೆಲಸ ನೀಡಲಾಗಲಿಲ್ಲ…. ಓಟನ್ನಾದರೂ ನೀಡೋಣ

ಸ್ಪೋರ್ಟ್ಸ್ ಮೇಲ್ ವರದಿ

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ನಲ್ಲಿ ಮಿಂಚಿ, ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿ, ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಮಾರುತ್ತಿರುವ ಪವರ್ ಲ್ಟಿರ್ ಗೀತಾ ಬಾಯಿ ಮಂಗಳೂರಿನ ಉಳ್ಳಾಲ ನಗರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಬದುಕಿಗೆ ನೆರವಾಗದ ನಾವು, ಈಗ ಓಟನ್ನಾದರೂ ಹಾಕಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಲಿದೆ.

ಸದಾ ಕಾಲ ಗೀತಾ ಬಾಯಿ ಅವರ ಪ್ರೋತ್ಸಾಹಕ್ಕೆ ನಿಲ್ಲುವ ಉಳ್ಳಾಲ, ತೊಕ್ಕೊಟ್ಟು ಪರಿಸರದ ಯುವಕರು ನಗರಸಭೆಯ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವಂತೆ ಪ್ರೋತ್ಸಾಹಿಸಿದ್ದಾರೆ. ಉತ್ತಮ ನಾಯಕತ್ವದ ಗುಣ, ಹಾಗೂ ಕಷ್ಟಗಳಿಗೆ ಸ್ಪಂದಿಸುವ ಕ್ರೀಡಾಪಟು ಗೀತಾ ಬಾಯಿ ಬಿಜೆಪಿಯ ಅಭ್ಯರ್ಥಿಯಾಗಿ ೨೨ನೇ ವಾರ್ಡ್ ಭಟ್‌ನಗರದಿಂದ ಗೀತಾ ಬಾಯಿ ಸ್ಪರ್ಧಿಸಲಿದ್ದಾರೆ.
ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು
ಬುದ್ಧಿವಂತರ ಜಿಲ್ಲೆ, ಸುಶಿಕ್ಷಿತರ ಜಿಲ್ಲೆ, ಮುಂದುವರಿದ ಜಿಲ್ಲೆ ಎಂದೆಲ್ಲ ಹೇಳಿಕೊಂಡು ಹೋದಲ್ಲಿ ಬಂದಲ್ಲಿ ಚಪ್ಪಾಳೆ  ಗಿಟ್ಟಿಸಿಕೊಳ್ಳುವ ನಮಗೆ ನಮ್ಮ ಮನೆಯ ಅನಾಥ ಹೆಣ್ಣು ಮಗಳೊಬ್ಬಳಿಗೆ  ಸ್ಪೋರ್ಟ್ಸ್ ಕೋಟಾದಡಿ ಒಂದು ಕಾಯಂ ಕೆಲಸ ಕೊಡಲಾಗಲಿಲ್ಲ. ಗೀತಾ ಬಾಯಿ ಮನವಿ ಮಾಡಿಕೊಂಡ ನಂತರ ಅದೆಷ್ಟೋ ಮಂದಿ ಕ್ರೀಡಾ ಕೋಟಾದಡಿ ಕೆಲಸ ಪಡೆದಿದ್ದಾರೆ. ಅನೇಕ ರಾಜಕಾರಣಿಗಳು ಅವರ ಕಣ್ಣೊರೆಸುವ ಕೆಲಸ ಮಾಡಿದ್ದಾರೆಯೇ ವಿನಃ ಬದುಕಿಗೆ ನೆರವಾಗಲಿಲ್ಲ.
ರಾಷ್ಟ್ರಪತಿಯ ಪತ್ರಕ್ಕೂ ಬೆಲೆ ಇಲ್ಲ
ಸಾಮಾನ್ಯವಾಗಿ  ಭಾರತದಲ್ಲಿರುವ ಎಲ್ಲ ಇಂಗ್ಲಿಷ್ ಪತ್ರಿಕೆಗಳು, ನಿಯತಕಾಲಿಕಗಳು ಹಾಗೂ ಪ್ರಮಖ ಚಾನೆಲ್‌ಗಳು ಗೀತಾ ಬಾಯಿ ಅವರ ಬದುಕಿನ ಬಗ್ಗೆ ವರದಿ ಮಾಡಿವೆ. ನಾವು ನೋಡಿ ಕೊಂಡು ಸುಮ್ಮನಾದೆವು. ಆದರೆ ಹಿಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದು  ಈ ಕ್ರೀಡಾಪಟುವಿನ ಬದುಕಿಗೆ ಸ್ಪಂದಿಸಿ ಎಂದು ಹೇಳಿದ್ದರು. ನಾವು ಅದನ್ನೂ  ಓದಿಕೊಂಡು ಸುಮ್ಮನಾದೆವು. ಕರ್ನಾಟಕದ ಹೆಣ್ಣು ಮಗಳ ಸಾಧನೆ ಹಾಗೂ ಕಷ್ಟವನ್ನು ಗಮನಿಸಿ ದಿಲ್ಲಿಯಲ್ಲಿ ಕುಳಿತ ರಾಷ್ಟ್ರಪತಿಗಳ ಮನಸ್ಸು ಕರಗಿತು. ಆದರೆ ಇಲ್ಲೇ ಕುಳಿತ ಸಚಿವ ಹಾಗೂ ಸಂಸದರ ಮನಸ್ಸು ಸೋಮೇಶ್ವರದ ಬಂಡೆಯಂತೆ ಹಾಗೆಯೇ ಉಳಿಯಿತು.
ಸಮಾಜ ಸೇವೆಗೆ ಸಿದ್ಧ
ಇದುವರೆಗೂ ಎಲ್ಲರಿಗೆ ಹೇಳಿಕೊಳ್ಳುವ ಅನುಕಂಪದ ಕತೆಯಾಗಿದ್ದೆ. ಇನ್ನು ನನ್ನ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಎರಡು ಹೊತ್ತು ಊಟಕ್ಕೆ ದುಡಿಯುವಷ್ಟು ತಾಕತ್ತು ಇದೆ. ಸಮಾಜ ಸೇವೆಗಾಗಿ ನನ್ನನ್ನು  ತೊಡಗಿಸಿಕೊಳ್ಳುವೆ. ಬದುಕುವಷ್ಟು ದಿನ ನನ್ನನ್ನು ಇದುವರೆಗೂ ಪ್ರೀತಿಯಿಂದ ಕಂಡ ಜನರಿಗಾಗಿ ದುಡಿಯುವೆ. ಇಲ್ಲಿನ ಜನ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಪ್ರೋತ್ಸಾಹಿಸಿದ್ದಾರೆ. ಅವರ ಪ್ರೀತಿಗೆ ನಾನು ಚಿರಋಣಿ. ಕೆಲವರ ಮಾತು ಕೇವಲ ಸಭಾ  ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಕಿಳಗಿಳಿದ ಮೇಲೆ ನಮ್ಮನ್ನು ಮರೆಯುತ್ತಾರೆ. ನಾನು ಇದುವರೆಗೂ ಬೇರೆಯವರ ಭಾಷಣದ ವಸ್ತುವಾಗಿದ್ದೆ.  ಹೊರತು ಅದರಿಂದ ಯಾವುದೇ ಪ್ರಯೋಜನ ಆಗಲಿಲಿಲ್ಲ ಎಂದು ಗೀತಾ ಬಾಯಿ ಅತ್ಯಂತ ಬೇಸರದಿಂದ ಹೇಳಿಕೊಂಡರು.
ಗೆಲ್ಲುವ ಆತ್ಮವಿಶ್ವಾಸ
ಜನರ ಪ್ರೋತ್ಸಾಹದಿಂದ, ಅವರ ಪ್ರೀತಿಯ ಹಾರೈಕೆಯಿಂದ ಸ್ಪರ್ದಿಸುತ್ತಿರುವ ನನಗೆ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿದೆ. ನಾನೊಬ್ಬ ಕ್ರೀಡಾಪಟು. ಇದುವರೆಗೂ ನೂರಾರು ಪದಕಗಳನ್ನು ಗೆದ್ದು ರಾಜ್ಯಕ್ಕೆ ಹಾಗೂ ನಮ್ಮೂರಿಗೆ ಕೀರ್ತಿ ತಂದಿದ್ದೇನೆ. ನಾಲ್ಕು ಜನರಿಂದ ಒಳ್ಳೆಯವಳೆನಿಸಿಕೊಂಡಿದ್ದೇನೆ. ಆ ಒಳ್ಳೆತನ ನನ್ನನ್ನು ಕಾಪಾಡಲಿದೆ. ನನ್ನ ಬದುಕು ಇಲ್ಲಿಯವರೆಗೂ ಹೋರಾಟದಿಂದ ಕೂಡಿತ್ತು, ಬದುಕಿನಲ್ಲಿ ಇದೂ ಒಂದು ಹೋರಾಟವಾಗಲಿ. ಎಲ್ಲರ ಹಾರೈಕೆಯಲ್ಲಿ ಗೆದ್ದೇ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿದೆ ಎಂದರು.

Related Articles