ಆ ಪ್ರೀತಿಯ ನಾಯಿಯ ಹೆಸರಿನಲ್ಲಿ ಹುಟ್ಟಿಕೊಂಡ ಕ್ರೀಡೆ ಪಿಕಲ್ ಬಾಲ್

0
386
ಸೋಮಶೇಖರ್ ಪಡುಕರೆ ಬೆಂಗಳೂರು 

ಅಮೆರಿಕದಲ್ಲಿ ಜೋಲ್ ಪ್ರಿಚರ್ಡ್, ಬಾರ್ನಿ ಮೆಕಲಮ್ ಮತ್ತು ಬಿಲ್ ಬೆಲ್ ತಮ್ಮ ಕುಟಂಬದ ಸದಸ್ಯರೊಂದಿಗೆ ಟೇಬಲ್ ಟೆನಿಸ್ ಆಟಕ್ಕೆ ಬಳಸುವ ರೀತಿಯ ಬ್ಯಾಟ್ ಹಿಡಿದು ಪ್ಲಾಸ್ಟಿಕ್ ರೂಪದ ಚೆಂಡನ್ನು ಬಳಸಿ ಆಡುತ್ತಿದ್ದರು. ಚೆಂಡು ಮನೆಯ ಸಮೀಪದ ಪೊದೆಯೊಳಗೆ ಸೇರುತ್ತಿತ್ತು. ಸಾಕು ನಾಯಿ ’ಪಿಕಲ್’ ಚೆಂಡನ್ನು ಕಚ್ಚಿಕೊಂಡು ಬಂದು ನೀಡುತ್ತಿತ್ತು. ಪ್ರೀತಿಯ ಸಾಕು ನಾಯಿಯ ಸವಿ ನೆನಪಿಗಾಗಿ ಆ ಕ್ರೀಡೆಗೆ ಪಿಕಲ್‌ಬಾಲ್ ಎಂದು ಹೆಸರಿಡಲಾಯಿತು.

ಈಗ ಅಮೆರಿಕದಲ್ಲಿ ಜನಪ್ರಿಯವಾಗಿರುವ ಈ ಕ್ರೀಡೆ ಭಾರತಕ್ಕೆ, ಅದರಲ್ಲೂ ಬೆಂಗಳೂರಿಗೆ ಕಾಲಿಟ್ಟಿದೆ.

ಭಾರತಕ್ಕೆ ಆಗಮನ

ಸುನಿಲ್ ವಾಲ್ವಾಲ್ಕರ್ 1999ರಲ್ಲಿ ಅಮೆರಿಕದಲ್ಲಿ ವೃತ್ತಿಪರ ಪಿಕಲ್‌ಬಾಲ್ ಕ್ರೀಡೆಯನ್ನು ಆಡಿದವರು. ಆಗ  ಈ ಕ್ರೀಡೆ ಕೆನಡಾದಲ್ಲಿ ಜನಪ್ರಿಯಗೊಂಡಿತ್ತು. ವಾಲ್ವಾಲ್ಕರ್ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದಕ್ಕಾಗಿ ಮತ್ತೊಮ್ಮೆ ಕೆನಡಾಕ್ಕೆ ಭೇಟಿ ನೀಡಿದರು. ಅಲ್ಲಿಂದ ಹಿಂದಿರುಗುವಾರ ಪೆಡಲ್ ಹಾಗೂ ಚೆಂಡುಗಳನ್ನು ಭಾರತಕ್ಕೆ ತಂದು ಇಲ್ಲಿ ಅಭ್ಯಸ ಪಂದ್ಯಗಳನ್ನು ಆಡಿಸಲಾರಂಭಿಸಿದರು. ಇದರೊಂದಿಗೆ ಈ ಕ್ರೀಡೆ ಭಾರತದಲ್ಲೂ ಜನಪ್ರಿಯಗೊಳ್ಳುತ್ತಿದೆ. ಕುಟುಂಬದ ಸದಸ್ಯರ ಮನರಂಜನೆಗಾಗಿ ಆರಂಭಗೊಂಡ ಪಿಕಲ್‌ಬಾಲ್ ಈಗ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಜನಪ್ರಿಯಗೊಳ್ಳುತ್ತಿದೆ.

ಕರ್ನಾಟಕಕ್ಕೆ ಪಿಕಲ್ ಬಾಲ್ ಬಂದ ಬಗೆ

ರಾಷ್ಟ್ರೀಯ ಕ್ರೀಡಾಪಟು ಹಾಗೂ ಕ್ರೀಡಾ ಪ್ರೋತ್ಸಾಹಕ ರಜತ್ ಶಂಕರ್  2016ರಲ್ಲಿ  ಸನಿಲ್ ವಾಲ್‌ವಾಲ್ಕರ್ ಅವರನ್ನು ಭೇಟಿಯಾದರು. ಈ ಭೇಟಿಯು ಕರ್ನಾಟಕಕ್ಕೆ ಒಂದು ಹೊಸ ಅಂತಾರಾಷ್ಟ್ರೀಯ ಕ್ರೀಡೆಯನ್ನು ಪರಿಚಯಿಸುವಂತೆ ಮಾಡಿತು. ಇದೇ ವರ್ಷ ಬೆಂಗಳೂರಿನ ವಿವೇಕಾನಂದ ತಾಂತ್ರಿಕ ಕಾಲೇಜಿನಲ್ಲಿ ಕ್ರೀಡೆಯನ್ನು ಪರಿಚಯಿಸುವ ಹಾಗೂ ಪ್ರದರ್ಶನ ಪಂದ್ಯವನ್ನು ಆಯೋಜಿಸುವ ಕಾರ್ಯಕ್ರಮ ನಡೆಯಿತು. ಸುನಿಲ್ ವಾಲ್‌ವಾಲ್ಕರ್ ಅವರ ಆತಿಥ್ಯದಲ್ಲಿ ಕರ್ನಾಟಕದಲ್ಲಿ ಪಿಕಲ್‌ಬಾಲ್ ಕ್ರೀಡೆ ಪದಾರ್ಪಣೆ ಮಾಡಿತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲದೆ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬಗ್ಗೆ ಆಸಕ್ತಿವಹಿಸಿದರರು.
ಟೇಬಲ್ ಟೆನಿಸ್ ರೀತಿಯ ಪೆಡಲ್, ಬೇಸ್ ಬಾಲ್ ಗಾತ್ರದ ಹಗುರವಾದ ವಿಫೆಲ್ ಬಾಲ್, ಬ್ಯಾಡ್ಮಿಂಟನ್ ಕೋರ್ಟ್ ಗಾತ್ರದ ಅಂಗಣ, ಟೆನಿಸ್ ಆಟಕ್ಕೆ ಬಳಸುವ ನೆಟ್ ಇವು ಈ ಕ್ರೀಡೆಗೆ ಅಗತ್ಯವಿದೆ. ಅಂತಾರಾಷ್ಟ್ರೀಯ ಫೆಡರೇಷನ್ಕೂ, ಭಾರತೀಯ ಫೆಡರೇಷನ್ ಕೂಡ ಹುಟ್ಟಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ  ಸ್ಪರ್ಧೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ 8 ಶಾಲೆಗಳಲ್ಲಿ, 7 ಕಾಲೇಜುಗಳಲ್ಲಿ,  4 ಜಿಲ್ಲೆ ಹಾಗೂ 4 ಸೋರ್ಟ್ಸ್ ಅಕಾಡೆಮಿಗಳಲ್ಲಿ  ಪಿಕಲ್‌ಬಾಲ್ ಪಂದ್ಯಗಳು ನಡೆಯುತ್ತಿವೆ.