Thursday, September 12, 2024

ಶೂಟಿಂಗ್‌ ವಿಶ್ವಕಪ್‌: ಅಭಿಷೇಕ್ ವರ್ಮಾಗೆ ಚಿನ್ನ

ಬೀಜಿಂಗ್‌:  ಭಾರತದ ಸ್ಟಾರ್‌ ಶೂಟರ್‌ ಅಭಿಷೇಕ್‌ ವರ್ಮಾ ಅವರು ಶನಿವಾರ ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

29ರ ಪ್ರಾಯದ ವರ್ಮಾ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಪಡೆದ ಎರಡನೇ ಚಿನ್ನದ ಪದಕ ಇದಾಗಿದೆ. ಇಂದು ನಡೆದ ಫೈನಲ್‌ ಸುತ್ತಿನಲ್ಲಿ ಭಾರತದ ಶೂಟರ್‌, 242.7 ಅಂಕಗಳನ್ನು ಪಡೆಯುವ ಮೂಲಕ ಪ್ರಶಸ್ತಿಗೆ ಭಾಜನರಾದರು. ರಷ್ಯಾದ ಆರ್ಟೆಮ್ ಚೆರ್ನೌಸೊವ್(240.4) ಅವರು ಬೆಳ್ಳಿ ಹಾಗೂ ಕೊರಿಯಾದ ಹ್ಯಾನ್ ಸೆಯುಂಗ್ ವೂ (220.0) ಅವರು ಕಂಚಿನ ಪದಕಕ್ಕೆ ತೃಪ್ತರಾದರು. ಪ್ರಸಕ್ತ ವಿಶ್ವಕಪ್‌ನಲ್ಲಿ ಚಿನ್ನದ ಪದಕದೊಂದಿಗೆ 2018ರ ಏಷ್ಯನ್‌ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಅಭಿಷೇಕ್‌ ವರ್ಮಾ ಅವರು 2020ರ ಟೋಕಿಯೋ ಒಲಿಂಪಿಕ್ಸ್‌ ಗೆ ಐದನೇ ಭಾರತದ ಶೂಟರ್‌ ಆದರು.

ಶುಕ್ರವಾರ 17ರ ಪ್ರಾಯದ ದಿವ್ಯಾಂಶ ಸಿಂಗ್‌ ಪನ್ವಾರ್‌ ಅವರು 10 ಮೀ ಏರ್‌ ರೈಫಲ್‌ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿದ್ದರು. ಜತೆಗೆ, ಸೌರಭ್‌ ಚೌಧರಿ ಕೂಡ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು 2020ರ ಒಲಿಂಪಿಕ್‌ಗೆ ಅರ್ಹತೆ ಪಡೆದಿದ್ದರು.
ಮಹಿಳಾ ವಿಭಾಗದಲ್ಲಿ ಅಂಜುಮ್‌ ಮೌದ್ಗಿಲ್‌ ಹಾಗೂ ಅಪೂರ್ವಿ ಚಂದೇಲಾ ಅವರು 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

Related Articles