Saturday, July 27, 2024

ರಾಷ್ಟ್ರೀಯ ಹಾಕಿ: ಕರ್ನಾಟಕ, ಹರಿಯಾಣಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ

ಮಂಗಳವಾರ ಆರಂಭ ಗೊಂಡ ಮೂರನೇ ಹಾಕಿ ಇಂಡಿಯಾ 5 ಎ ಸೈಡ್ ಹಿರಿಯ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಹಾಕಿ ಕರ್ನಾಟಕ, ಹಾಕಿ ಹರಿಯಾಣ ಮತ್ತು ಹಾಕಿ ಒಡಿಶಾ ತಂಡಗಳು ಶುಭಾರಂಭ ಕಂಡಿವೆ. ಹಾಕಿ ಮಹಾರಾಷ್ಟ್ರ ಹಾಗೂ ಹಾಕಿ ಜಾರ್ಖಂಡ್ ತಂಡಗಳು 3-3 ಗೋಲುಗಳಲ್ಲಿ ಸಮಬಲ ಸಾಧಿಸಿವೆ.

ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮನೆಯಂಗಣದ ಪ್ರೇಕ್ಷಕರಿಗೆ ಸಂಭ್ರಮವನ್ನುಂಟು ಮಾಡಿತು.
ಮಿಂಚಿನ ಹಾಕಿ ಆಟದಲ್ಲಿ ಸ್ಥಳೀಯ ಆಟಗಾರ್ತಿ ಲೀಲಾವತಿ ಮಲ್ಲಮಂಡ ಎಂಜೆ 4ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಐದನೇ ನಿಮಿಷದಲ್ಲಿ ಅಂಜಲಿ ಹೊಡೆದ ಗೋಲಿನಿಂದ ಕರ್ನಾಟಕ 2-0 ಅಂತರದಲ್ಲಿ ಮನ್ನಡೆಯಿತು. ಭಾರತ ಕಿರಿಯರ ತಂಡದಲ್ಲಿ ಆಡುತ್ತಿರುವ ಲೀಲಾವತಿ 10ನೇ ನಿಮಿಷದಲ್ಲಿ ವೈಯಕ್ತಿಕ ಎರಡನೇ ಗೋಲು ಗಳಿಸಿದರು. 14ನೇ ನಿಮಿಷದಲ್ಲಿ ಕರ್ನಾಟಕದ ಪರ ಪವಿತ್ರಾ ಜಯದ ಗೋಲು ಗಳಿಸಿದರು. ಉತ್ತರ ಪ್ರದೇಶದ ಪರ ಶಿವಾನಿ ಸಿಂಗ್ ಸೈನಿ 15ನೇ ನಿಮಿಷದಲ್ಲಿ ಗಳಿಸಿದ ಗೋಲು ಪ್ರವಾಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತು.
ದಿನದ ಆರಂಭಿಕ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಹರಿಯಾಣ ತಮಿಳುನಾಡು ತಂಡದ ವಿರುದ್ಧ 15-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.  ಪೂನಂ ರಾಣಿ, ಗಗನ್‌ದೀಪ್ ಕೌರ್ ಹಾಗೂ ಸೋನಿಕಾ ಹ್ಯಾಟ್ರಿಕ್ ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ದಿನದ ಎರಡನೇ ಪಂದ್ಯದಲ್ಲಿ ಹಾಕಿ ಪಂಜಾಬ್ ತಂಡ ಹಾಕಿ ಒಡಿಶಾ ವಿರುದ್ಧ 3-6 ಗೋಲುಗಳ ಅಂತರದಲ್ಲಿ ಸೋನುಭವಿಸಿತು. ಹಾಕಿ ಮಹಾರಾಷ್ಟ್ರ ಹಾಗೂ ಹಾಕಿ ಜಾರ್ಖಂಡ್ ತಂಡಗಳು 3-3 ಗೋಲುಗಳಿಂದ ಸಮಬಲ ಸಾಧಿಸಿದವು.

Related Articles