Saturday, July 27, 2024

ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌: ಉದ್ಘಾಟನೆಗೆ ಕ್ಷಣಗಣನೆ

ಪಂಚಕುಲ, ಜೂ. 3:

ಶುಕ್ರವಾರದಿಂದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪಂದ್ಯಗಳು ಆರಂಭಗೊಂಡಿದ್ದು, ಅಧಿಕೃತ ಚಾಲನೆ ಶನಿವಾರ ಸಿಗಲಿದೆ. ಹಾಲಿ ಚಾಂಪಿಯನ್‌ ಮಹಾರಾಷ್ಟ್ರ ಮತ್ತು ಆತಿಥೇಯ ಹರಿಯಾಣ ರಾಜ್ಯಗಳು ತಮ್ಮ ಪ್ರಭುತ್ವಕ್ಕಾಗಿ ಹೋರಾಟ ನಡೆಸಲಿವೆ.

ಕೇಂದ್ರ ಗೃಹ ಸಚಿನ ಅಮಿತ್‌ ಶಾ, ಹರಿಯಾಣದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಮತ್ತು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜನಪ್ರೀಯ ರಾಪರ್‌ ರಫ್ತಾರ್‌ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತಾರೆ.

ತಾವ್‌ ದೇವಿ ಲಾಲ್‌ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಕ್ರೀಡಾ ರಾಜ್ಯ ಸಚಿವ ನಿಶಿತ್‌ ಪ್ರಮಾಣಿಕ್‌, ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್‌ ಚೌಟಾಲ ಮತ್ತು ಹರಿಯಾಣದ ಕ್ರೀಡಾ ಸಚಿನ ಎಸ್‌. ಸಂದೀಪ್‌ ಸಿಂಗ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಹಲವಾರು ಒಲಿಂಪಿಕ್ಸ್‌ ಮತ್ತು ಏಷ್ಯನ್‌ ಗೇಮ್ಸ್‌ ಪದಕ ವಿಜೇತರರನ್ನು ಹೊಂದಿರುವ ಹರಿಯಾಣ 2018ರಲ್ಲಿ ನಡೆದ ಮೊದಲ ಆವೃತ್ತಿಯ ಖೇಲೋ ಇಂಡಿಯಾ ಸ್ಕೂಲ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದು, ದೇಶದ ನಂಬರ್‌ ಒನ್‌ ಕ್ರೀಡಾ ರಾಜ್ಯವಾಗಿ ಬೆಳೆದು ನಿಂತಿದೆ.

ಆದರೆ ಎರಡನೇ ಆವೃತ್ತಿಯಲ್ಲಿ ಆತಿಥೇಯ ಮಹಾರಾಷ್ಟ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಪುಣೆಯಲ್ಲಿ ನಡೆದ ಆವೃತ್ತಿಯಲ್ಲಿ ಮಹಾರಾಷ್ಟ್ರ  85 ಚಿನ್ನದ ಪದಕಗಳನ್ನು ಗೆದ್ದು, ಅಗ್ರ ಸ್ಥಾನ ಗಳಿಸಿದರೆ, ಹರಿಯಾಣ 62 ಚಿನ್ನದ ಪದಕಗಳನ್ನು ಗೆದ್ದು, ಎರಡನೇ ಸ್ಥಾನ ತನ್ನದಾಗಿಸಿಕೊಂಡಿತ್ತು.

ಗುವಾಹಟಿಯಲ್ಲಿ ನಡೆದ ಆವೃತ್ತಿಯಲ್ಲೂ ಮಹಾರಾಷ್ಟ್ರ 78 ಚಿನ್ನದ ಪದಕಗಳನ್ನು ಗೆದ್ದು ತನ್ನ ಪ್ರಭುತ್ವ ಸಾಧಿಸಿತ್ತು, ಹರಿಯಾಣ ಹತ್ತು ಚಿನ್ನದ ಪದಕಗಳೊಂದಿಗೆ ಹಿನ್ನಡೆ ಕಂಡಿತ್ತು. ಈ ಬಾರಿ 100 ಚಿನ್ನದ ಪದಕಗಳ ಗುರಿ ಹೊಂದಿರುವ ಆತಿಥೇಯ ಹರಿಯಾಣ ಸೇಡು ತೀರಿಸಿಕೊಳ್ಳಲು ಸನ್ನದ್ಧವಾಗಿದೆ.

ಮೊದಲ ದಿನದ ಫಲಿತಾಂಶ:  ಪುರುಷರ ವಾಲಿಬಾಲ್‌ನಲ್ಲಿ ಉತ್ತರ ಪ್ರದೇಶ ತಂಡ ಛತ್ತೀಸ್‌ಗಢ ವಿರುದ್ಧ 3-0 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿತು. ಆತಿಥೇಯ ಹರಿಯಾಣ ತಂಡ 3-1 ಅಂತರದಲ್ಲಿ ತಮಿಳುನಾಡಿಗೆ ಸೋಲುಣಿಸಿತು.

ವನಿತೆಯರ ವಾಲಿಬಾಲ್‌ ಪಂದ್ಯದಲ್ಲಿ ಕರ್ನಾಟಕ ತಂಡ 3-1 ಅಂತರದಲ್ಲಿ ಹರಿಯಾಣಕ್ಕೆ ಶರಣಾಯಿತು. ಪಶ್ಚಿಮ ಬಂಗಾಳವು 3-0 ಅಂತರದಲ್ಲಿ ಉತ್ತರ ಪ್ರದೇಶದ ವಿರುದ್ಧ ಜಯ ಸಾಧಿಸಿತು. ಕೇರಳವು ಛತ್ತೀಸ್‌ಗಢಕ್ಕೆ 3-2 ಅಂತರದಲ್ಲಿ ಸೋಲುಣಿಸಿತು.

ವನಿತೆಯರ ಕಬಡ್ಡಿಯಲ್ಲಿ ಆತಿಥೇಯ ಹರಿಯಾಣ ತಂಡವು ಪಂಜಾಬ್‌ ವಿರುದ್ಧ 60-24 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿತು. ಆಂಧ್ರಪ್ರದೇಶವು ಚಂಡಿಗಢ ವಿರುದ್ಧ 40-28 ಅಂತರದಲ್ಲಿ ಜಯ ಗಳಿಸಿತು.

ಪುರುಷರ ಕಬಡ್ಡಿಯಲ್ಲಿ ಉತ್ತರ ಪ್ರದೇಶ ತಂಡವು ಪಂಜಾಬ್‌ ವಿರುದ್ಧ 52-36 ಅಂತರದಲ್ಲಿ ಜಯ ಗಳಿಸಿದರೆ, ಹಿಮಾಚಲ ಪ್ರದೇಶ 77-15ಅಂತರದಲ್ಲಿ ಚಂಡೀಗಢ ವಿರುದ್ಧ ಯಶಸ್ಸು ಕಂಡಿತು.

Related Articles