ಬೆಂಗಳೂರು:
ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸಂದೀಪ್ ಹಲಾದುಕರ್ ಮತ್ತು ದಾರೆಪ್ಪ ಆರ್. ಹೊಸಮನಿ ಅವರು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯದ ಕುಸ್ತಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಭಾರತೀಯ ಕುಸ್ತಿ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಎರಡನೇ ದಿನದಲ್ಲಿ ಕರ್ನಾಟಕದ ಸಂದೀಪ್ ಹಲಾದುಕರ್ 67ಕೆಜಿ ಗ್ರೀಕೋ ರೋಮನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ದಾರೆಪ್ಪ ಆರ್. ಹೊಸಮನಿ 87ಕೆಜಿ ಗ್ರೀಕೋ ರೋಮನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕರ್ನಾಟಕದ ಕುಸ್ತಿಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ. ಸಂದೀಪ್ ಮೊದಲ ಸುತ್ತಿನಲ್ಲಿ ಮಹಾರಾಷ್ಟ್ರದ ಕುಸ್ತಿಪಟು ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದರು. ಸೆಮಿಫೈನಲ್‌ನಲ್ಲಿ ಎಸ್‌ಎಸ್‌ಸಿಬಿ ಕುಸ್ತಿಪಟುವಿನ ವಿರುದ್ಧ ಜಯ ಗಳಿಸಿ ಫೈನಲ್ ತಲುಪಿದರು. ಫೈನಲ್‌ನಲ್ಲಿ ಪಂಜಾಬಿನ ಕುಸ್ತಿಪಟು ವಿರುದ್ಧ ಉತ್ತಮ ಪೈಪೋಟಿ ನೀಡಿದರೂ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಕರ್ನಾಟಕದ ಕುಸ್ತಿಪಟುಗಳ ಈ ಸಾಧನೆಯನ್ನು ಭಾರತೀಯ ಕುಸ್ತಿ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಪ್ರಸೂನ್ ವಿ,ಎನ್. ಹಾಗೂ ಸಹಾಯಕ ಕಾರ್ಯದರ್ಶಿ ವಿನೋದ್ ತೋಮಾರ್ ಗುಣಗಾನ ಮಾಡಿದ್ದಾರೆ. ಕರ್ನಾಟಕ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜೆ. ಶ್ರೀನಿವಾಸ್, ಖಜಾಂಚಿ ಶ್ರೀನಿವಾಸ ಅಂಗರಕೋಡಿ, ಜಂಟಿ ಕಾರ್ಯದರ್ಶಿ ಕುಮಾರ್ ಮತ್ತು ಪ್ರಧಾನ ಕೋಚ್ ವಿನೋದ್ ಕುಮಾರ್ ಕೆ. ಈ ಸಂದರ್ಭದಲ್ಲಿ ಹಾಜರಿದ್ದು ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಬಿ. ಗುಣರಂಜನ್ ಶೆಟ್ಟಿ, “ಇದು ಹೆಮ್ಮೆಯ ಕ್ಷಣ, ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿರುವೆ. ಅವಕಾಶ ಕಲ್ಪಿಸಿದ ಭಾರತೀಯ ಕುಸ್ತಿಫೆಡರೇಷನ್‌ಗೆ ಧನ್ಯವಾದಗಳು. ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ಸಂದರ್ಭ. ಮುಂದಿನ ದಿನಗಳಲ್ಲಿ ನಮ್ಮ ಕುಸ್ತಿಪಟುಗಳಿಗೆ ಇನ್ನೂ ಉತ್ತಮ ರೀತಿಯಲ್ಲಿ ತರಬೇತಿ ನೀಡಿ ಅವರನ್ನು ಒಲಿಂಪಿಕ್ಸ್ ಸೇರಿದಂತೆ ಇತರ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ಧಗೊಳಿಸಲಾಗುವುದು. ಉತ್ತಮ ತರಬೇತಿ, ಉತ್ತಮ ಆಹಾರ ಹಾಗೂ ಇತರ ಸೌಲಭ್ಯಗಳನ್ನು ನಮ್ಮ ಕುಸ್ತಿಪಟುಗಳಿಗೆ ನೀಡಲಿದ್ದೇವೆ. ಭಾರತದಲ್ಲಿ ಕರ್ನಾಟಕವನ್ನು ಕುಸ್ತಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವುದು ನಮ್ಮ ಗುರಿ,” ಎಂದರು.