Saturday, February 24, 2024

ಭಾನುವಾರ ಬೆಂಗಳೂರಿನಲ್ಲಿ ರೈಡ್‌ ವಿದ್‌ ರೋಲರ್ಸ್‌

ಬೆಂಗಳೂರು, 27, ಆಗಸ್ಟ್‌, 2022:  ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯು ರೈಡ್‌ ವಿದ್‌ ರೋಲರ್ಸ್‌ ಎಂಬ ಕಾರ್ಯಕ್ರಮವನ್ನು ಇದೇ ಭಾನುವಾರ  ಹಮ್ಮಿಕೊಂಡಿದೆ ಎಂದು ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಕಾರ್ಯದರ್ಶಿ ಇಂದೂಧರ ಸೀತರಾಮ್‌ ಅವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ 500ಕ್ಕೂ ಹೆಚ್ಚು ಸ್ಕೇಟರ್‌ಗಳು ಹಾಗೂ 200ಕ್ಕೂ ಹೆಚ್ಚು ಬೈಕ್‌ ರೈಡರ್‌ಗಳು ಈ ರಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ರಾಲಿಗೆ ಚಾಲನೆ ದೊರೆಯಲಿದೆ. 5-6 ಕಿಮೀ ವ್ಯಾಪ್ತಿಯಲ್ಲಿ ರಾಲಿ ನಡೆಯಲಿದೆ. ರಾಲಿಯು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಯುವಜನಸೇವಾ ಕ್ರೀಡಾ ಇಲಾಖೆಯ ಅಪರ ಕಾರ್ಯದರ್ಶಿ ಡಾ, ಶಾಲಿನಿ ರಜನೀಶ್‌ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಸಚಿವರಾದ ಆರ್‌. ಅಶೋಕ್‌, ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ, ಎಂಎಲ್‌ಸಿ ರವಿಸುಬ್ರಹ್ಮಣ್ಯಂ, ಮಾಜಿ ಕಾರ್ಪೊರೇಟರ್‌ ಸಂಗಾತಿ ವೆಂಕಟೇಶ್‌, ಫಿಟ್‌ ಇಂಡಿಯಾ ಅಂಬಾಸಿಡರ್‌ ವನಿತಾ ಅಶೋಕ್‌, ಬಸವನಗುಡಿ ಬಿಜೆಪಿ ಮಂಡಲದ ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ, ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ ಐಎಎಸ್‌, ನಟ ಶ್ರೀನಗರ ಕಿಟ್ಟಿ, ಮಾಜಿ ಮೇಯರ್‌ ಎಸ್‌,ಕೆ, ನಟರಾಜ್‌, ನಟ ಪ್ರಜ್ವಲ್‌ ದೇವರಾಜ್‌, ಯುವಜನ ಸೇವಾ ಕ್ರೀಡಾ ಇಲಾಖೆಯ ಆಯುಕ್ತರಾದ ಡಾ. ಎಚ್‌.ಎನ್‌. ಗೋಪಾಲಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ, ಅಲ್ಲದೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಕೇಟರ್‌ಗಳು ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ.

ಜಿಲ್ಲೆಗೊಂದು ಸ್ಕೇಟಿಂಗ್‌ ರಿಂಕ್‌: ಸ್ಕೇಟಿಂಗ್‌ ಕ್ರೀಡೆ ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದೆ, ರಾಜ್ಯದ ಅನೇಕ ಸ್ಕೇಟರ್‌ಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗರು ದೇಶವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ರೀಡೆಗೆ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿಯೂ ಒಂದು ಸ್ಕೇಟಿಂಗ್‌ ರಿಂಕ್‌ ನಿರ್ಮಾಣವಾಗಬೇಕೆಂಬುದು ನಮ್ಮ ಬೇಡಿಕೆಯಾಗಿದೆ, ಎಂದು ಇಂದುಧರ ಸೀತಾರಾಮ್‌ ಅವರು ಹೇಳಿದ್ದಾರೆ.

Related Articles