Saturday, October 12, 2024

ಹಾಡುಗಾರನಾದ ರಾಷ್ಟ್ರೀಯ ಜಾವೆಲಿನ್‌ ಚಾಂಪಿಯನ್‌ ಶರತ್‌ ರಾಜ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ರಾಜ್ಯ ಮಟ್ಟದಲ್ಲಿ ಡಿಸ್ಕಸ್‌, ಶಾಟ್‌ಪಟ್‌ ಹಾಗೂ ಜಾವೆಲಿನ್‌ ಎಸೆತದಲ್ಲಿ ಮಿಂಚಿ, ನಂತರ ಜಾವೆಲಿನ್‌ನಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಂಚಿನ ಪದಕ ಗೆದ್ದು, ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಮೂಡಬಿದರೆಯ ಶರತ್‌ ರಾಜ್‌ ಅವರೊಳಗೆ ಒಬ್ಬ ಹಾಡುಗಾರನಿದ್ದಾನೆಂದು ಕ್ರೀಡಾ ಜಗತ್ತಿಗೆ ಗೊತ್ತಿರಲಿಲ್ಲ. ಆರ್ಕೆಸ್ಟ್ರಾಗಳಲ್ಲಿ ಹಾಡುಗಳನ್ನು ಹಾಡುತ್ತ, ಹಿರಿಯ ಹಾಡುಗಾರರನ್ನು ಅನುಕರಿಸುತ್ತ ಜಾವೆಲಿನ್‌ ಚಾಂಪಿಯನ್‌ ಈಗ ಉತ್ತಮ ಹಾಡುಗಾರನಾಗಿದ್ದಾರೆ.

ಕ್ರೀಡಾ ಕೋಟಾದಡಿ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ಶರತ್‌ ರಾಜ್‌ ಒಂದು ಕಾಲದಲ್ಲಿ ರಾಜ್ಯ ಮಟ್ಟದಲ್ಲಿ ದಾಖಲೆ ಬರೆದು, ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾಪಟು. ಕ್ರೀಡಾ ಹಾಸ್ಟೆಲ್‌ನಲ್ಲಿ ಪಳಗಿ ಭಾರತೀಯ ಕ್ಯಾಂಪ್‌ನಲ್ಲಿದ್ದ ಶರತ್‌ ರಾಜ್‌ ರೈಲ್ವೆಯಲ್ಲಿ ಉದ್ಯೋಗ ಪಡೆದ ನಂತರ, “ಸೈಕೋ” ಕನ್ನಡ ಸಿನಿಮಾದಲ್ಲಿ ಖ್ಯಾತ ಹಾಡುಗಾರ ರಘು ದೀಕ್ಷಿತ್‌ ಅವರ “ನಿನ್ನ ಪೂಜೆಗೆ ಬಂದೆ ಮಹಾದೇಶ್ವರಾ” ಹಾಡಿನಿಂದ ಪ್ರಭಾವಿತರಾಗಿ ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮೊದಲಿಗೆ ರಘು ದೀಕ್ಷಿತ್‌ ಅವರ ಹಾಡನ್ನೇ ಹಾಡಿ ಜನಪ್ರೀಯತೆ ಪಡೆದರು. ಯಾರಿಗೋ ಮೊಬೈಲ್‌ ಮೂಲಕ ಕರೆ ಮಾಡಿದಾಗ ಅವರ ಮೊಬೈಲ್‌ನಲ್ಲಿ ರಘು ಧೀಕ್ಷಿತ್‌ ಅವರ ಹಾಡು ಧ್ವನಿಸುತ್ತಿತ್ತು, ಇದರಿಂದ ಪ್ರಭಾವಿತರಾದ ಶರತ್‌ ರಾಜ್‌ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡರು.

ನೌಷಾದ್‌ ಗ್ರೂಪ್‌ ಪರಿಚಯ:

ಮಂಗಳೂರು ರೈಲ್ವೆ ವಿಭಾಗದಲ್ಲಿ ಕೆಲಸ ಮಾಡುವಾಗ ಗಣೇಶ ಹಬ್ಬದ ಸಂದರ್ಭದಲ್ಲಿ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು. ಅಲ್ಲಿ ನೌಷಾದ್‌ ಎಂಬ ಆರ್ಕೆಸ್ಟ್ರಾ ತಂಡದ ಪರಿಚಯವಾಗಿ ಸುಮಾರು ಒಂಬತ್ತು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಹಾಡಿ ಜನಮೆಚ್ಚುಗೆ ಪಡೆದರು. ಪ್ರತಿಯೊಂದು ಕಾರ್ಯಕ್ರಮಕ್ಕೂ ಸಂಭಾವನೆ ಸಿಗುತ್ತಿರುವುದರಿಂದ ಅವರಲ್ಲಿ ಉತ್ಸಾಹವೂ ಹೆಚ್ಚತೊಡಗಿತು.  ಸಿನೆಮಾ, ಭಕ್ತಿ ಗೀತೆ, ತಮಿಳು ಮತ್ತು ಮಲಯಾಳಂ ಸಿನೆಮಾಗಳ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಶರತ್‌ ರಾಜ್‌ ಮಂಗಳೂರಿನಿಂದ ಬೆಂಗಳೂರು, ಅಲ್ಲಿಂದ ಮೈಸೂರಿಗೆ ವರ್ಗಾವಣೆಗೊಂಡರೂ ಅವಕಾಶ ಸಿಕ್ಕಲ್ಲೆಲ್ಲ ಹಾಡುವುದನ್ನು ಮುಂದುವರಿಸಿದರು.

ಸಿನೆಮಾ ಸೇರಲು ತೀರ್ಮಾನ:

ಉತ್ತಮ ಮೈಕಟ್ಟು, ಕಾಣಲು ಸ್ಪರದ್ರೂಪಿಯಾಗಿರುವ ಶರತ್‌ ರಾಜ್‌ ಸಿನೆಮಾದ ಕಡೆಗೆ ಒಲವು ತೋರಿದರು. ಗಾಳಿಪಟ ಚಿತ್ರದಲ್ಲಿ ಖ್ಯಾತ ಹಾಡುಗಾರ ರಾಜೇಶ್‌ ಕೃಷ್ಣನ್‌ ಅಭಿನಯಿಸಿದ್ದ ಪಾತ್ರಕ್ಕೆ ಮೊದಲು ಒಪ್ಪಿಕೊಂಡಿದ್ದು ಶರತ್‌ ರಾಜ್‌. ಆದರೆ ತಂದೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಸಿನೆಮಾ ಕ್ಷೇತ್ರದಿಂದ ಹೊರಬಂದು ಹಾಡುವುದನ್ನೇ ಮುಂದುವರಿಸಿದರು.

ನಿಂತಲ್ಲಿಯೇ 65 ಮೀ. ಎಸೆಯಬಲ್ಲ ಶರತ್‌ ರಾಜ್‌!: ಜಾವೆಲಿನ್‌ ಅನ್ನು ಸಾಮಾನ್ಯವಾಗಿ ಓಡಿ ಬಂದು ಎಸೆಯುತ್ತಾರೆ. ಆದರೆ ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರುವ ಶರತ್‌ ರಾಜ್‌ ನಿಂತಲ್ಲಿಯೇ 65 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಚ್ಚರಿ ಮೂಡಿಸುತ್ತಿದ್ದರು. 75 ಮೀ. ಅವರ ಉತ್ತಮ ಸಾಧನೆಯಾಗಿತ್ತು.

ಅವ್ಯವಸ್ಥೆಗಳ ನಡುವೆ ಮಿಂಚಿದ ಚಾಂಪಿಯನ್‌:

ಅಂದಿನ ಕ್ರೀಡಾ ದಿನಗಳ ಬಗ್ಗೆ ಮಾತನಾಡಿದ ಶರತ್‌ ರಾಜ್‌, “ಆಗ ನಮಗೆ ಉತ್ತಮ ಜಾವೆಲಿನ್‌ ಕೂಡ ಇರುತ್ತಿರಲಿಲ್ಲ. ಒಂದು ಜಾವೆಲಿನ್‌ಗೆ ಲಕ್ಷ ರೂಪಾಯಿ ವರೆಗೂ ಇರುತ್ತಿತ್ತು. ಈಗಿರುವಂತೆ ಯೂಟ್ಯೂಬ್‌ ಮೂಲಕ ಯಾವ ರೀತಿ ಎಸೆಯಬಹುದು ಎಂಬುದನ್ನು ನೋಡುವ ಅವಕಾಶ ಇರಲಿಲ್ಲ, ಕೇವಲ ಎಸೆಯುವುದು ಮಾತ್ರ ಗೊತ್ತಿತ್ತು. ಆದರೆ ತಾಂತ್ರಿಕ ಅಂಶಗಳ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ನಿನ್ನಲ್ಲಿ 80 ಮೀ. ಎಸೆಯಬಲ್ಲ ಸಾಮರ್ಥ್ಯ ಇದೆ ಎಂದು ನನ್ನ ಕೋಚ್‌  ಹೇಳಿದ್ದರು. ಆದರೆ ಜಾವೆಲಿನ್‌ನಿಂದ ಬೇಗನೇ ದೂರ ಸರಿದ ಕಾರಣ ಅದು ಸಾಧ್ಯವಾಗಲಿಲ್ಲ. ಸ್ಪೋರ್ಟ್ಸ್‌ ಮೆಡಿಸಿನ್‌ ಮತ್ತು ಫಿಟ್ನೆಸ್‌ ಬಗ್ಗೆ ಪಿಎಚ್‌ಡಿ ಮಾಡಲು ಬಂದವರೊಬ್ಬರು ನೀವೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕಾಗಿದ್ದ ಕ್ರೀಡಾಪಟು, ಕೇವಲ ರಾಷ್ಟ್ರಮಟ್ಟಕ್ಕೆ ಎಸೆತಗಾರರಲ್ಲ ಎಂದಿದ್ದರು. ಕ್ರೀಡಾ ಯಶಸ್ಸಿಗೆ ದೇಹ ಮತ್ತು ಮನಸ್ಸು ಪ್ರಮುಖವಾದುದು. ಇವೆರಡೂ ಸಮತೋಲನದಲ್ಲಿದ್ದರೆ ಆ ದಿನ ಯಶಸ್ಸು ಸಾಧಿಸಲು ಸಾಧ್ಯ. ಹಿಂದೆ 90 ಮೀ. ಎಸೆದಿದ್ದವರು ಸ್ಪರ್ಧೆಯ ದಿನ 86ಕ್ಕೆ ಸೀಮಿತವಾದ ಉದಾಹರಣೆಗಳು ಬಹಳ ಇವೆ,” ಎಂದು ತಮ್ಮ ಕ್ರೀಡಾ ಬದುಕಿನ ಅನುಭವವನ್ನು ಬಿಚ್ಚಿಟ್ಟರು.

ಕ್ರೀಡಾಪಟುಗಳಿಗೆ ಉತ್ತಮ ಹವ್ಯಾಸ ಅಗತ್ಯ:

ಕ್ರೀಡೆಯ ಜೊತೆಯಲ್ಲಿ ಕ್ರೀಡಾಪಟುಗಳು ಬದುಕಿಗೆ ಖುಷಿ ಕೊಡುವ ಹವ್ಯಾಸಗಳನ್ನೂ ಅಳವಡಿಸಿಕೊಂಡಿರಬೇಕು. ಸಂಗೀತಕ್ಕೆ ಉತ್ತಮ ಚಿಕಿತ್ಸಕ ಗುಣ ಇದೆ. ಹೊರಗಿನ ತೊಂದರೆಗಳಿಂದ ಮುಕ್ತಿ ಹೊಂದುವಲ್ಲಿ ಸಂಗೀತ ಬಹಳ ನೆರವಾಗುತ್ತದೆ ಎನ್ನುತ್ತಾರೆ ಶರತ್‌ ರಾಜ್‌. “ಕೆಲವೊಂದು ಉತ್ತಮ ಹವ್ಯಾಸಗಳು ನಮಗೆ ವೃತ್ತಿ ನೀಡುವ ಖುಷಿಗಿಂತ ಹೆಚ್ಚಿನ ಖುಷಿಯನ್ನು ನೀಡುತ್ತವೆ. ಈಗ ರೈಲ್ವೆಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದೇನೆ, ಆದ್ದರಿಂದ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಈಗಲೂ ಕಾರ್ಯಕ್ರಮಗಳಿಗೆ ಕರೆ ಬರುತ್ತದೆ. ಮನೆಯಲ್ಲೇ ಚಿಕ್ಕದಾದ ಸ್ಟುಡಿಯೋ ಇದೆ, ಅಲ್ಲೇ ನಿತ್ಯವೂ ಹಾಡಿಕೊಂಡು, ಜೊತೆಯಲ್ಲಿ ಬ್ಯಾಡ್ಮಿಂಟನ್‌ ಆಡಿಕೊಂಡು ಖುಷಿಯಾಗಿದ್ದೇನೆ,” ಎನ್ನುತ್ತಾರೆ ಶರತ್‌ ರಾಜ್‌.

ಶರತ್‌ ರಾಜ್‌ ಒಬ್ಬ ವೃತ್ತಿಪರ ಗಾಯಕರಲ್ಲ, ಆದರೆ ಹಾಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಗಾಯಕ. ಕ್ರೀಡಯಲ್ಲೂ ಸಾಧನೆ ಮಾಡಿ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಅಪೂರ್ವ ಪ್ರತಿಭೆ,

Related Articles