Friday, October 4, 2024

ದಸರಾದಲ್ಲಿ ಚಿನ್ನ ಗೆದ್ದ ಗಾರ್ಡ್‌ ಕೆಲಸಗಾರ ಉಡುಪಿಯ ಯಮನೂರಪ್ಪ

ಇತ್ತೀಚೆಗೆ ಮುಕ್ತಾಯಗೊಂಡ ದಸರಾ ಕ್ರೀಡಾಕೂಟದಲ್ಲಿ ಉಡುಪಿಯಲ್ಲಿ ವಾಸಿಸುವ ಗದಗ ಮೂಲದ ಯಮನೂರಪ್ಪ ಪೂಜಾರ ಅವರು ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದರು. ಈ ಕ್ರೀಡಾಕೂಟದಲ್ಲಿ ರಾಜ್ಯದ ಅನೇಕ ಕ್ರೀಡಾಪಟುಗಳು ಚಿನ್ನದ ಸಾಧನೆ ಮಾಡಿರುತ್ತಾರೆ. ಆದರೆ ಯಮನೂರಪ್ಪ ಅವರ ಸಾಧನೆ ಕ್ರೀಡಾ ಜಗತ್ತಿಗೆ ಮಾದರಿಯಾದುದು. Guard worker who won the medal in Dasara Boxing.

ಯಮನೂರಪ್ಪ ಪೂಜಾರ ಕೆಲಸ ಹುಡುಕಿಕೊಂಡು ಉಡುಪಿ ಬಂದವರು. ಅಲ್ಲಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿದ್ದರು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ದಿನಗೂಲಿ ನೌಕರನಾಗಿ ಕೆಸಲ ಮಾಡುತ್ತಿದ್ದರು. ಈ ನಡುವೆ ಕೊರೋನ ಲಾಕ್‌ಡೌನ್‌ ಮುಗಿದ ನಂತರ ಬದುಕಿಗಾಗಿ ಇನ್ನೇನಾದರೂ ಮಾಡಬೇಕೆಂದೆನಿಸಿದಾಗ ಅವರಿಗೆ ಕಂಡಿದ್ದು ಬಾಕ್ಸಿಂಗ್‌. ಬಾಕ್ಸಿಂಗ್‌ ಕೋಚ್‌ ಶಿವಪ್ರಸಾದ ಆಚಾರ್ಯ ಅವರಲ್ಲಿ ತರಬೇತಿ ಪಡೆದರು. ರಾಜ್ಯ ಮಟ್ಟದಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಸಾಧನೆ ಮಾಡಿ ಈಗ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಗದುಗಿನ ಶಾಂತಿಗಿರಿಯ ನಾರಾಯಣಪ್ಪ ಹಾಗೂ ಕೆಂಚಮ್ಮ ಅವರ ಕಿರಿಯ ಮಗನಾಗಿ ಜನಿಸಿದ ಯಮನೂರಪ್ಪ ಮನೆಯಲ್ಲಿ ಬಡತನ ಇದ್ದ ಕಾರಣ ಐದನೇ ತರಗತಿಗೇ ಶಿಕ್ಷಣಕ್ಕೆ ವಿದಾಯ ಹೇಳಬೇಕಾಯಿತು. ಅಲ್ಲಿಲ್ಲಿ ಕುರಿಗಾಯಿ ಕೆಲಸ ಮಾಡಿಕೊಂಡು ದಿನ ಕಳೆಯುತ್ತಿದ್ದ ಯಮನೂರಪ್ಪಗೆ ಉಡುಪಿಗೆ ಬಂದು ಏನಾದರೂ ಕೆಲಸ ಮಾಡಬೇಕೆಂದೆನಿಸಿತು. ಉಡುಪಿಗೆ ಬಂದ ಮೇಲೂ ಸಿಕ್ಕಿದ್ದು ಕೂಲಿ ಕೆಲಸ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಗಿಡಗಳಿಗೆ ನೀರು ಹಾಕುವುದು ಹಾಗೂ ಇತರ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದ ಯಮನೂರಪ್ಪನ ಕ್ರೀಡಾ ಸಾಧನೆ ನೋಡಿ ಕಾಲೇಜಿನ ಆಡಳಿತ ಮಂಡಳಿ ಈಗ ಗಾರ್ಡ್‌ ಕೆಲಸ ನೀಡಿದೆ.

“ಉಡುಪಿಗೆ ಬಂದಾಗ ಅಲ್ಲಿಲ್ಲಿ ಕೂಲಿ ಕೆಸಲ ಮಾಡಿಕೊಂಡಿದ್ದೆ. ಬಾಕ್ಸಿಂಗ್‌ನಲ್ಲಿಯ ಯಶಸ್ಸು ಕಂಡು ಕಾಲೇಜಿನವರು ಗಾರ್ಡ್‌ ಹುದ್ದೆ ನೀಡಿದ್ದಾರೆ. ಇದಕ್ಕೆ ನಾನು ಎಂಜಿಎಂ ಕಾಲೇಜಿನ ಆಡಳಿತ ಮಂಡಳಿಗೆ ಚಿರಋಣಿಯಾಗಿದ್ದೇನೆ. ಶಿವಪ್ರಸಾದ್‌ ಸರ್‌ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿದರು. ಇದರಿಂದಾಗಿ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಯಿತು. ದಸರಾದಲ್ಲಿ ಚಿನ್ನದ ಪದಕ ಗೆದ್ದಿರುವುದು ನನ್ನಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ. ಮುಂದೆ ರಾಷ್ಟ್ರ ಮಟ್ಟದಲ್ಲಿ ಪದಕ ಗೆಲ್ಲಬೇಕೆಂಬ ಹಂಬಲವಿದೆ. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ,” ಎನ್ನುತ್ತಾರೆ ಯಮನೂರಪ್ಪ ಪೂಜಾರ. 29 ವರ್ಷ ಪ್ರಾಯದ ಯಮನೂರಪ್ಪ 86 ಕೆಜಿ ತೂಕ ಹೊಂದಿದ್ದರೂ ಮೈಸೂರಿನಲ್ಲಿ 92 ಕೆಜಿ ವಿಭಾಗದೊಂದಿಗೆ ಸ್ಪರ್ಧಿಸಿರುವುದು ವಿಶೇಷ. ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆದ್ದಿದ್ದಾರೆ. ಕರಾವಳಿಯಲ್ಲಿ ಅಪೂರ್ವ ಎನಿಸಿರುವ ಬಾಕ್ಸಿಂಗ್‌ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಬಂದಿರುವುದು ವಿಶೇಷ. ಇಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ನೆರವು ನೀಡಬೇಕಾದ ಅಗತ್ಯ ಇದೆ. ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಭೆ ಸಮಾರಂಭಗಳಲ್ಲಿ ಮಾತನಾಡುವವರು ಇಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

Related Articles