Saturday, February 24, 2024

ಇಂಡಿಯನ್‌ ಆಯಿಲ್‌ಗೆ ನೆಹರು ಕಪ್‌ ಹಾಕಿ

 Sportsmail           

ದೇಶದ ಬಲಿಷ್ಠ ಹಾಕಿ ತಂಡಗಳಾದ ಇಂಡಿಯನ್‌ ಆಯಿಲ್‌ ಮತ್ತು ಇಂಡಿಯನ್‌ ರೈಲ್ವೆಸ್‌ ನಡುವೆ ನಡೆದ 57ನೇ ನೆಹರು ಕಪ್‌ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್‌ನಲ್ಲಿ ಕರ್ನಾಟಕದ ಖ್ಯಾತ ಆಟಗಾರರಿಂದ ಕೂಡಿರುವ ಇಂಡಿಯನ್‌ ಆಯಿಲ್‌ ತಂಡ 6-4 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಪ್ರತಿಷ್ಠಿತ  ನೆಹರು ಗೋಲ್ಡ್‌ ಕಪ್‌ ಹಾಕಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

 

ಸಿಖಂದರ್‌ಬಾದ್‌ನ ಎಸ್‌ಸಿಆರ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಚಾಂಪಿಯನ್ಷಿಪ್‌ನ ಫೈನಲ್‌ ಪಂದ್ಯದಲ್ಲಿ ಇಂಡಿಯನ್‌ ಆಯಿಲ್‌ ಪರ ಅಗದ್‌ವೀರ್‌ ಸಿಂಗ್‌, ಅರ್ಮಾನ್‌ ಖುರೇಷಿ ಫೀಲ್ಡ್‌ ಗೋಲ್‌ ಗಳಿಸಿದರೆ, ಅಂಗದ್‌ವೀರ್‌ ಸಿಂಗ್‌, ತಲ್ವಿಂದರ್‌ ಸಿಂಗ್‌, ರಾಹೀಲ್‌ ಮೊಹಮ್ಮದ್‌ ಮತ್ತು ವಿಕ್ರಮ್‌ಜಿತ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ ಹಾಕಿ ತಂಡದ ಮಾಜಿ ನಾಯಕ, ಕರ್ನಾಟಕದ ವಿ.ಆರ್.‌ ರಘುನಾಥ್‌, ವಿಕ್ರಮ್‌ಕಾಂತ್‌ ಸೇರಿದಂತೆ ರಾಜ್ಯದ ಪ್ರಮುಖ ಆಟಗಾರರು ಇಂಡಿಯನ್‌ ಆಯಿಲ್‌ ತಂಡದಲ್ಲಿದ್ದಾರೆ.

ಇಂಡಿಯನ್‌ ಆಯಿಲ್‌ ತಂಡ ಆರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಈ ಹಿಂದೆ ನಾಲ್ಕು ಬಾರಿ ಚಾಂಪಿಯನ್‌ ಪಟ್ಟವನ್ನು ಗೆದ್ದರೆ ಒಂದು ಬಾರಿ ಪ್ರಶಸ್ತಿಯನ್ನು ಹಂಚಿಕೊಂಡಿತ್ತು. ಲಾಲ್‌ಬಹದ್ದೂರ್‌ ಶಾಸ್ತ್ರಿ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಇಂಡಿಯನ್‌ ಆಯಿಲ್‌ ಮತ್ತು ರೈಲ್ವೇಸ್‌ ತಂಡಗಳು ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾಗ ರೈಲ್ವೇಸ್‌ ತಂಡ ಇಂಡಿಯನ್‌ ಆಯಿಲ್‌ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಈಗ ಇಂಡಿಯನ್‌ ಆಯಿಲ್‌ ತಂಡ ಸೇಡು ತೀರಿಸಿಕೊಂಡಿದೆ.

Related Articles