ಒಬ್ಬ ಆಟಗಾರನನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು?, ಆತನಲ್ಲಿರುವ ಸಾಮರ್ಥ್ಯವನ್ನು ಗುರುತಿಸುವುದು ಹೇಗೆ? ಯಶಸ್ಸಿನ ಹಾದಿಯಲ್ಲಿ ತಂಡದ ಪ್ರತಿಯೊಬ್ಬ ಸದಸ್ಯನ ಅಗತ್ಯವೆಷ್ಟು? ಇದೆಲ್ಲವನ್ನು ಅರಿತಿದ್ದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ Indian Premier Leagueನಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿತು. ಆದರೆ ತಂಡದಲ್ಲಿ ಉತ್ತಮ ಆಟಗಾರರಿದ್ದರೂ ಕೇವಲ ನಾಲ್ಕೈದು ಆಟಗಾರರನ್ನೇ ನಂಬಿಕೊಂಡ, ಉಳಿದವರಿಗೆ ಅವಕಾಶ ನೀಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ತಲಪುವಲ್ಲಿ ವಿಫಲವಾಯಿತು.
ಮುಂಬೈ ತಂಡ ಕಳೆದ ಎರಡು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ಬೌಲರ್ ಆಕಾಶ್ ಮಧ್ವಾಲ್ Akash Madhwal ಅವರ ಪಾತ್ರ ಪ್ರಮುಖವಾಗಿತ್ತು. ಈ ಬೌಲರ್ ಹೆಚ್ಚು ಜನಪ್ರಿಯ ಪಡೆದವರಲ್ಲ. ಆದರೆ ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡವ. 2019ರಲ್ಲಿ ಆರ್‌ಸಿಬಿ ತಂಡಲ್ಲಿ ನೆಟ್ ಬೌಲರ್ ಆಗಿದ್ದ ಆಕಾಶ್ ಮಧ್ವಾಲ್‌ಗೆ ಆರ್‌ಸಿಬಿ ಎಲ್ಲಿಯೂ ಅವಕಾಶ ನೀಡಲಿಲ್ಲ. ಇದರಿಂದ ನಂತರದ ವರ್ಷಗಳಲ್ಲಿ ಅವರು ಮುಂಬಯಿ ಇಂಡಿಯನ್ಸ್ ತಂಡ ಸೇರಿದರು. ಉತ್ತಮ ಪ್ರದರ್ಶನ ನೀಡಿದರು. ಬುಧವಾರ ರಾತ್ರಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ
ಆರ್‌ಸಿಬಿ ತಂಡದಲ್ಲಿ ಈ ಬಾರಿ ಅನೇಕ ಸ್ಟಾರ್ ಆಟಗಾರರೂ ಬೆಂಚ್ ಬಿಸಿ ಮಾಡಿದ್ದಾರೆ. ಇದು ಕಳೆದ 16 ವರ್ಷಗಳಿಂದಲೂ ನಡೆಯುತ್ತಿದೆ. ಚೆನ್ನಾಗಿ ಆಡುತ್ತಿರುವ ನಾಲ್ಕೈದು ಆಟಗಾರರನ್ನು ಹೊರತುಪಡಿಸಿದರೆ ಹೊಸ ಪ್ರಯೋಗಗಳಿಗೆ ಆರ್‌ಸಿಬಿ ಮನಸ್ಸು ಮಾಡಲಿಲ್ಲ. ಅದೆಷ್ಟೋ ಆಟಗಾರರು ಬೆಂಚ್ ಬಿಸಿ ಮಾಡಿ ಮನೆ ಸೇರಿದರು. ಆಕಾಶ್ ಮಧ್ವಾಲ್ ಕಳೆದ ಎರಡು ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಗಳಿಕೆಯ ಸಾಧನೆ ಮಾಡಿದರು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಹಾಗೂ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 5 ರನ್‌ಗೆ 5 ವಿಕೆಟ್ ಗಳಿಸಿ ಎರಡೂ ಪಂದ್ಯಗಳಲ್ಲಿ ಜಯದ ರೂವಾರಿ ಎನಿಸಿದರು. ಇದು ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿಯು ಒಬ್ಬ ಯುವ ಆಟಗಾರನ ಮೇಲಿಟ್ಟ ನಂಬಿಕೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಶ್ರೀಲಂಕಾದ ಮತೀಶ ಪತಿರಣ ಅವರ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿತು. ಅವರು ಹಲವು ಪಂದ್ಯಗಳ ಜಯದ ರೂವಾರಿ ಎನಿಸಿ 16 ವಿಕೆಟ್ ಗಳಿಸಿ ಗಮನಸೆಳೆದರು.
ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಮನೋಜ್ ಭಾಂಡಗೆ ಅವರನ್ನು ಆರ್‌ಸಿಬಿ ಖರೀದಿ ಮಾಡಿದಾಗ ಕನ್ನಡಿಗರಿಗೆ ನಿಜವಾಗಿಯೂ ಖುಷಿಯಾಗಿತ್ತು. ಆದರೆ ಅದ್ಭುತ ಆಲ್ರೌಂಡರ್‌ಗೆ ಆರ್‌ಸಿಬಿ ಅಂಗಣಕ್ಕಿಳಿಯುವ ಅವಕಾಶವನ್ನೂ ನೀಡಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯುವ ಆಟಗಾರರನ್ನು ಈ ರೀತಿಯಲ್ಲಿ ನಡೆಸಿಕೊಂಡರೆ ಯುವ ಪ್ರತಿಭೆಗಳಿಗೆ ಅವಕಾಶ ಸಿಗುವುದಾದರೂ ಹೇಗೆ? ಇಂಡಿಯನ್ ಪ್ರೀಮಿಯರ್ ಲೀಗ್ ಹಣ ಗಳಿಸುವ ಮೆಷಿನ್ ಆಗುತ್ತದೆಯೇ ಹೊರತು ಪ್ರತಿಭೆಗಳನ್ನು ಹುಟ್ಟು ಹಾಕುವ ಲೀಗ್ ಆಗಲಾರದು.
ಎಂಜಿನಿಯರ್ ಆಕಾಶ್ ಮಧ್ವಾಲ್:
ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಆಕಾಶ್ ಮಧ್ವಾಲ್ ಅವರನ್ನು ಗುರುತಿಸಿದ್ದು ಮುಂಬೈನ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್. ಉತ್ತರಾಖಂಡ್ ತಂಡದಲ್ಲಿ ಪ್ರಥಮದರ್ಜೆ ಕ್ರಿಕೆಟ್ ಆಡಿದ್ದ ಮಧ್ವಾಲ್, ಎಂಜಿನಿಯರ್ ಉದ್ಯೋಗಕ್ಕೆ ಸೇರುವ ಬದಲು ಕ್ರಿಕೆಟ್ ಬದುಕಿಗೆ ಕಾಲಿಟ್ಟ. 2019ರಲ್ಲಿ ಆರ್‌ಸಿಬಿಯ ನೆಟ್ ಬೌಲರ್ ಆಗಿದ್ದ ಮಧ್ವಾಲ್‌ಗೆ ಅವಕಾಶ ಸಿಗಲಿಲ್ಲ. ಈ ಹಿಂದಿನ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಮಧ್ವಾಲ್, ತಂಡದ ಆರಂಭಿಕ ಆಟಗಾರ ಸೂರ್ಯ ಕುಮಾರ್ ಯಾದವ್ ಗಾಯಗೊಂಡಿದ್ದಾಗ ತಂಡಕ್ಕೆ ಸೇರ್ಪಡೆಯಾದರು. ಈಗ ಐಪಿಎಲ್ ಇತಿಹಾಸದಲ್ಲೇ ಅನಿಲ್ ಕುಂಬ್ಳೆ ಬಳಿಕ ಅತಿ ಕಡಿಮೆ ರನ್‌ಗೆ 5 ವಿಕೆಟ್ ಗಳಿಕೆಯ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿ ಇತಿಹಾಸ ಬರೆದರು.
ಇದನ್ನೂ ಓದಿ: ಐಪಿಎಲ್ ಬರೇ ಒಂದು ಪಂದ್ಯದ ಬೆಟ್ಟಿಂಗ್ ವ್ಯವಹಾರ 3,500 ಕೋಟಿ ರೂ!!!