Thursday, April 25, 2024

ಈ ಓಟಗಾರನಿಗೆ ಈಗ ಗಾರೆ ಕೆಲಸವೇ ಗತಿ!

ಸ್ಪೋರ್ಟ್ಸ್ ಮೇಲ್ ವರದಿ:
ಆತ ಶಾಲಾ ದಿನಗಳಲ್ಲಿ ಓಟದಲ್ಲಿ ಚಾಂಪಿಯನ್, ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗೆದ್ದು ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು. ಕಂಬಳದಲ್ಲಿ ಕೋಣದ ಜೊತೆ ಓಡಿ ಎಲ್ಲರ ಪ್ರೀತಿಗೆ ಪಾತ್ರರಾದರು. ಆದರೆ ಯಾವುದೇ ಪ್ರೋತ್ಸಾಹ ಸಿಗಲಿಲ್ಲ. ಏಕೆಂದರೆ ಆತ ಗ್ರಾಮೀಣ ಪ್ರತಿಭೆ. ಈಗ ಮೀನು ಹಿಡಿಯುವುದು ಮತ್ತು ಗಾರೆ ಕೆಲಸ ಮಾಡಿಕೊಂಡಿರುವುದು ಅನಿವಾರ್ಯವಾಗಿದೆ.

ನಾವು ಹೇಳ ಹೊರಟಿದ್ದು ಉಡುಪಿ ಜಿಲ್ಲೆಯ ಸಾಸ್ತಾನದ ಗಣೇಶ್ ಪಾಂಡೇಶ್ವರ ಅವರ ಬದುಕಿನ ಬಗ್ಗೆ. ಹಳ್ಳಿಯಲ್ಲಿದ್ದರೂ ಗಣೇಶ್ ಪಾಂಡೇಶ್ವರ ಭಾರತದ ಸೇನೆಗೆ ಸೇರುವ ಆಸಕ್ತರಿಗೆ ಉಚಿತವಾಗಿ ಅಥ್ಲೆಟಿಕ್ಸ್ ತರಬೇತಿ ನೀಡುತ್ತಿದ್ದಾರೆ. ಇದು ಈ ದೇಶವೇ ಹೆಮ್ಮೆ ಪಡುವ ಸಂಗತಿ.

೧೦೦, ೨೦೦ ಹಾಗೂ ೪೦೦ ಮೀ. ಓಟದಲ್ಲಿ ಚಿಕ್ಕಂದಿನಿಂದಲೂ ಪ್ರಭುತ್ವ ಸಾಧಿಸುತ್ತಿರುವ ಗಣೇಶ್ ಓದಿದ್ದು, ಹಂಗಾರಕಟ್ಟೆಯ ಚೇತನಾ ಪ್ರೌಢ ಶಾಲೆಯಲ್ಲಿ. ದಸರಾ ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಪದಕಗಳನ್ನು ಗೆದ್ದು ಮಿಂಚಿದರು. ಆದರೆ ಗ್ರಾಮೀಣ ಪ್ರತಿಭೆಯಾದ ಅವರಿಗೆ ತಕ್ಕ ಪ್ರೋತ್ಸಾಹ ಸಿಗಲಿಲ್ಲ. ಗಣೇಶ್ ಈ ಕಾರಣಕ್ಕಾಗಿ ಓಡುವುದನ್ನು ನಿಲ್ಲಿಸಿಲ್ಲ. ದೇಹದ ಸ್ಥಿತಿಗೆ ಅನುಕೂಲವಾಗಿ ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡರು. ನೂರಾರು ಪದಕಗಳು ಅವರ ಮನೆಯನ್ನು ತುಂಬಿದವು. ಬೇಸಿಗೆಯಲ್ಲಿ ಕರಾವಳಿಯಲ್ಲಿ ಕಂಬಳ ಕ್ರೀಡೆ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಸಂದರ್ಭದಲ್ಲಿ ಗಣೇಶ್ ಕಂಬಳದಲ್ಲಿ ಕೋಣವನ್ನು ಗುರಿ ತಲುಪಿಸುವ ಕೆಲಸದಲ್ಲೂ ತೊಡಗಿಕೊಳ್ಳುತ್ತಾರೆ. ಗಣೇಶ್ ಅವರ ಮಿಂಚಿನ ಓಟ ಕೆಲವೊಮ್ಮೆ ಕೋಣದ ಓಟಕ್ಕಿಂತಲೂ ವೇಗವಾಗಿರುತ್ತಿತ್ತು. ಕಂಬಳ ಮುಗಿದ ನಂತರವೂ ಮೇಳಗಾರರಿಗಾಗಿ ನಡೆಯುವ ಓಟದಲ್ಲಿ ಗಣೇಶ್ ಪಾಂಡೇಶ್ವರ್ ಹಲವು ಬಾರಿ ಪದಕ ಗೆದ್ದಿದ್ದಾರೆ.

ಬಿಡುವಿನ ವೇಳೆ ಕೂಲಿ, ಮೀನುಗಾರಿಕೆ
ಮಳೆಗಾಲದಲ್ಲಿ ಗಾರೆ ಕೆಲಸ ವಿರಳವಾಗಿರುತ್ತದೆ. ಈ ಕಾರಣಕ್ಕಾಗಿ ಗಣೇಶ್ ಇಲ್ಲಿ ಸಮೀಪದ ಕೋಡಿ, ಹಂಗಾರಕಟ್ಟೆ ಹೊಳೆಯಲ್ಲಿ ಮೀನು ಹಿಡಿಯುವ ಕೆಲಸವನ್ನು ಮಾಡುತ್ತಾರೆ. ಒಟ್ಟಾರೆ ಈ ಚಾಂಪಿಯನ್ ಯಾರ ನೆರವಿಗೂ ಕಾಯದೆ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ.

 

ಸ್ಪರ್ಧಿಸಲು ಹಣವಿಲ್ಲ
ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಗಣೇಶ್ ಆಯ್ಕೆಯಾಗಿದ್ದಾರೆ. ಆದರೆ ಭಾಗವಹಿಸಲು ಹಣವಿಲ್ಲದಂತಾಗಿದೆ. ಕಳೆದ ಬಾರಿ ಶ್ರೀಲಂಕಾಕ್ಕೆ ಹೋಗುವಾಗ ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ಹಾಗೆಯೇ ಇದೆ. ಸ್ಪೇನ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೂ ಗಣೇಶ್ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಯಾರಾದರೂ ನೆರವು ಮಾಡಿದರೆ ಪಾಲ್ಗೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ.

ದೇಶ ಮೆಚ್ಚುವ ಕೆಲಸ
ಗಣೇಶ್ ಅವರು ಚಿಕ್ಕಂದಿನಲ್ಲಿ ಓಡುವಾಗ ಯಾರು ಕೂಡ ಅವರ ಪ್ರೋತ್ಸಾಹಕ್ಕೆ ಬರಲಿಲ್ಲ. ಇದರಿಂದಾಗಿ ಚಾಂಪಿಯನ್ ಆಗಿದ್ದರೂ ಬದುಕಿನ ಕಷ್ಟದ ಓಟ ಮುಂದುವರಿಯಿತು. ಆದರೆ ಉಳಿದ ಕ್ರೀಡಾಪಟುಗಳು ತನ್ನಂತೆ ಕಷ್ಟಕ್ಕೆ ಸಿಲುಕಬಾರದು ಎಂದು ಅರಿತ ಗಣೇಶ್, ಕಳೆದ ಐದಾರು ವರ್ಷಗಳಿಂದ ಸೇನೆಗೆ ಸೇರುವ ಗ್ರಾಮೀಣ ಕ್ರೀಡಾಪಟುಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಇದರ ಫಲ ಎಂಬಂತೆ ಪಕ್ಕದ ಗ್ರಾಮ ಬನ್ನಾಡಿಯ ಯುವಕ ಆದರ್ಶ ಭಾರತೀಯ ಸೇನೆಗೆ ಆಯ್ಕೆಗೊಂಡು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇನ್ನಿಬ್ಬರು ಯುವಕರು ಸೇನೆಗೆ ಸೇರಲು ೧೬೦೦ ಮೀ. ಓಟವನ್ನು ೫ ನಿಮಿಷ ೧೫ ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ ಆಯ್ಕೆಯಾಗಲಿದ್ದಾರೆ. ಚೇತನ ಪ್ರೌಢ ಶಾಲೆಯ ಆಡಳಿತ ಮಂಡಳಿ ಗಣೇಶ್ ಅವರಿಗೆ ತರಬೇತಿಯ ನೆರವನ್ನು ನೀಡುತ್ತಿದೆ.

ಅಪ್ಪನಂತೆ ಮಗ
ಗಣೇಶ್ ಅವರ ಮಗ ಚರಣ್ ತಂದೆಯಂತೆ ಓಟದಲ್ಲಿ ನಿಪುಣ. ೫ ಕಿ.ಮೀ. ಓಟದಲ್ಲಿ ಬೆಳ್ಳಿ ಗೆದ್ದು ಊರಿಗೆ ಕೀರ್ತಿ ತಂದಿದ್ದಾನೆ. ನನಗೆ ಚಿಕ್ಕಂದಿನಲ್ಲಿ ಯಾರೂ ಪ್ರೋತ್ಸಾಹ ನೀಡಲಿಲ್ಲ. ಇದರಿಂದಾಗಿ ನನ್ನ ಓಟಕ್ಕೆ ಬೆಲೆ ಸಿಗಲಿಲ್ಲ. ಆದರೆ ಮಕ್ಕಳನ್ನು ಉತ್ತಮ ಅಥ್ಲೀಟ್‌ಗಳನ್ನಾಗಿ ಮಾಡಬೇಕೆಂಬುದು ಆಸೆ. ಅದಕ್ಕಾಗಿ ಶ್ರಮಿಸುವೆ ಎಂದು ಗಣೇಶ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ. ಪತ್ನಿ ಸುಶೀಲ ಅವರೊಂದಿಗೆ ಸರಳ ಬದುಕನ್ನು ನಡೆಸುತ್ತಿರುವ ಗಣೇಶ್‌ಗೆ ಚರಣ್, ಅಹಾನ್ ಹಾಗೂ ನಿಶ್ಚಲ್ ಮೂವರು ಗಂಡು ಮಕ್ಕಳು.

Related Articles