ಇಂಥ ಟೆಸ್ಟ್ ಗಳಿಗಿಂತ ವಿಶ್ರಾಂತಿಯೇ ಉತ್ತಮ

0
297
ಸೋಮಶೇಖರ್ ಪಡುಕರೆ 

ವೆಸ್ಟ್ ಇಂಡಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 272 ರನ್ ಜಯ ಕಂಡಿದೆ. ಏಖ ಮುಖವಾಗಿ ನಡೆದ ಟೆಸ್ಟ್ ಎರಡೂವರೆ ದಿನದಲ್ಲೇ ಅಂತ್ಯ ಕಂಡಿತು. ದಾಖಲೆ ಮಾಡುವವವರಿಗೆ ಉತ್ತಮ ವೇದಿಕೆ ಆಯಿತು. ಕೊಹ್ಲಿ, ಪೃಥ್ವಿ ಶಾ ಹಾಗೂ ಜಡೇಜಾ ಶತಕ ಗಳಿಸಿದರು. ದೇವೇಂದ್ರ ಬಿಶು  217 ರನ್ ನೀಡುವಷ್ಟು ವೆಸ್ಟ್ ಇಂಡಿಸ್ ನೀರಸ ಬೌಲಿಂಗ್ ಪ್ರದರ್ಶಿಸಿತು.

ಇಂಥ ಟೆಸ್ಟ್ ಪಂದ್ಯಗಳು ಅಗತ್ಯ ಇದೆಯಾ? ಎಂಬ ಪ್ರಶ್ನೆ ಕ್ರಿಕೆಟ್ ತಜ್ಞರಿಗೆ ಹುಟ್ಟೋಲ್ಲ ಯಾಕೆಂದರೆ ಇದು ಅವರ ಹೊಟ್ಟೆ ಪಾಡು. ಐಸಿಸಿ ಕೂಡ ಮಾತಾಡೋಲ್ಲ ಏಕೆಂದರೆ ಅದಕ್ಕೂ ಹಣಬೇಕು. ವೆಸ್ಟ್ ಇಂಡೀಸ್ ವಿರೋಧಿಸೋಲ್ಲ ಏಕೆಂದರೆ ಪಾಪ ಅವರಿಗೂ ಬೇರೆ ಗತಿ ಇಲ್ಲ. ಎಲ್ಲಿಯವರೆಗೆ ಈ ಹುಚ್ಚು ಜನ ನೋಡುತ್ತಾರೋ ಅಲ್ಲಿಯವರೆಗೂ ಈ ನೀರಸ ಆಟ ನಡೆಯುತ್ತಿರುತ್ತದೆ.
ನಮ್ಮ ಕ್ರಿಕೆಟಿಗರು ಕಳೆದ ಒಂದು ವರ್ಷದಿಂದ ದೇಶಕ್ಕಾಗಿ ನಿರಂತರವಾಗಿ ಆಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಕ್ರಿಕೆಟ್ ಗಾಗಿ ಸಂಸಾರವನ್ನು ತೊರೆದು ತ್ಯಾಗ ಮಾಡಿದ್ದಾರೆ. ಎಂದೆಲ್ಲ ಯಾಕೆ ಹೇಳಬೇಕು? ಇಂಗ್ಲೆಂಡ್ ಪ್ರವಾಸ ಮುಗಿದ ನಂತರ ಭಾರತ ತಂಡಕ್ಕೆ ವಿಶ್ರಾಂತಿ ನೀಡಿ, ಜನರಿಗೆ  ಫುಟ್ಬಾಲ್, ಕಬಡ್ಡಿ ಹಾಗೂ ಪ್ಯಾರಾ ಏಷ್ಯನ್ ಗೇಮ್ಸ್ ಸೇರಿದಂತೆ ಇತರ ಕ್ರೀಡೆಗಳನ್ನು ನೋಡುವ ಅವಕಾಶ ನೀಡಬಹುದಿತ್ತು.
ಕ್ರಿಕೆಟ್ ಈಗ ವ್ಯಾಪಾರವಾಗಿದೆ. ಅದೊಂದು ಜೆಂಟಲ್ಮನ್ ಗೇಮ್ ಆಗಿ ಉಳಿದಿಲ್ಲ. ಅದೊಂದು ವ್ಯಾಪಾರವಾಗಿರುವುದೇ ಇಂತಹ ಬಿಡುವಿಲ್ಲದ, ಅರ್ಥವಿಲ್ಲದ ಪಂದ್ಯಗಳು ನಡೆಯಲು ಕಾರಣ. ಇಂಗ್ಲೆಂಡ್ ಟೂರ್ ಬೆನ್ನಲ್ಲೇ ಏಷ್ಯನ್ ಚಾಂಪಿಯನ್ ಷಿಪ್, ಮತ್ತೆ ವೆಸ್ಟ್ ಇಂಡೀಸ್ ವಿರುದ್ಧ ನಿರಂತರ ಕ್ರಿಕೆಟ್. ವೆಸ್ಟ್ ಇಂಡೀಸ್ ಹಿಂದಿನ ತಂಡವಲ್ಲ. ಅಫಘಾನಿಸ್ತಾನ ತಂಡದಷ್ಟೂ ಪೈಪೋಟಿ ನೀಡುವುವಲ್ಲಿ ವಿಫಲವಾಯಿತು. ಉತ್ತಮ ಗುಣಮಟ್ಟದ ಬೌಲರ್ ಗಳಿಲ್ಲ, ಬ್ಯಾಟ್ಸ್ ಮನ್ ಗಳಂತೂ ಹೊಸಬರು. ಅನುಭವಿ ಕ್ರಿಕೆಟಿಗರು ಹಾಗೂ ವಿಂಡೀಸ್ ಕ್ರಿಕೆಟ್ ಮಂಡಳಿ ನಡುವಿನ ಸಮಸ್ಯೆ ಕಗ್ಗಂಟಾಗಿ ಉಳಿದಿದೆ.
ಇಂಥ ಸರಣಿಗಳು ಯೋಗ್ಯವಲ್ಲ ಅಂಥ ಕ್ರಿಕೆಟ್ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಸುನಿಲ್ ಗವಾಸ್ಕರ್, ಸಂಜಯ್ ಮಂಜ್ರೆಕರ್  ಅಥವಾ ಪಕ್ಕದಲ್ಲೇ ಕುಳಿತುಕೊಳ್ಳುವ ಬ್ರೆಟ್ ಲೀ ಮಾತನಾಡೋಲ್ಲ ಯಾಕೆಂದರೆ ಸ್ಟಾರ್ ಟಿವಿ ನೀಡುವ ಹಣಕ್ಕೆ ಇವರು ಪದ ಹೇಳಲೇ ಬೇಕು.ಒಟ್ಟಾರೆ ಕ್ರಿಕೆಟ್ ದಂಧೆ ಮುಂದುವರಿದಿದೆ.
ಇತರ ಕ್ರೀಡೆಗಳ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಭಾರತದಲ್ಲಿ ನಿಯಮಿತ ಕ್ರಿಕೆಟ್ ಗೆ ಅವಕಾಶ ಕೊಡಬೇಕು. ಅದನ್ನು ದೇಶಸೇವೆ ಎಂದು ಪರಿಗಣಿಸದೆ ಹಣ ಮಾಡುವ ಆಟ ಎಂದೇ ಪರಿಗಣಿಸಬೇಕು.