Friday, October 4, 2024

ಕುಸಿಯುತ್ತಿದೆಯೇ ಆಸೀಸ್‌ ಕ್ರಿಕೆಟ್‌ ಸಾಮ್ರಾಜ್ಯ?

ಪ್ರದೀಪ್‌ ಪಡುಕರೆ

To Win you have to risk loss: Jean Claude Killy

ಅದೊಂದು ಕಾಲವಿದ್ದಿತ್ತು, ಆಸ್ಟ್ರೇಲಿಯಾ ಕ್ರಿಕೆಟ್ Cricket Australia ತಂಡದ ವಿರುದ್ಧ ಆಡುವಾಗ ಎದುರಾಳಿ ತಂಡದ ಎದೆ ನಡುಗುತಿತ್ತು. ಎಂಟು ವಿಕೆಟ್ ಬಿದ್ದರೂ ಸೋಲೊಪ್ಪುತ್ತಿರಲಿಲ್ಲ, ಎದುರಾಳಿ ಮುನ್ನುಗ್ಗಿ ಬಾರಿಸುತ್ತಿದ್ದರೂ ಅಂಜದ ತಂಡ ಅದು.

ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತ ಹಾಕಿ ತಂಡದೆದುರು ಎದುರಾಳಿಗಳು ಹೆದರುತ್ತಿದ್ದ ಹಾಗೆ..

ಟೈಲರ್, ವಾ ಬ್ರದರ್ಸ್, ಪಾಂಟಿಂಗ್, ಹೇಡನ್, ಗಿಲ್‌ಕ್ರಿಸ್ಟ್, ಸೈಮಂಡ್ಸ್, ಬೇವನ್, ಮಾರ್ಟೀನ್, ಹಸ್ಸಿ ಬ್ಯಾಟ್ ಹಿಡಿದು ಬಂದರೆ ಸೋಲುವ ಪಂದ್ಯಗಳ ದಿಕ್ಕು ಬದಲಾಗುತಿತ್ತು.

ಮೆಕ್‌ಗ್ರಾತ್, ಬ್ರೇಟ್ ಲಿ, ಗಿಲೆಸ್ಪೀ, ಬ್ರಾಕೆನ್, ಪ್ಲೆಮಿಂಗ್, ಜಾನ್ಸನ್, ಟೇಟ್ ಬೆಂಕಿಚಂಡಿಗೆ ಎದೆಕೊಟ್ಟಾಡುವುದೆಂದರೆ  ಅಮೆರಿಕದ ಆರ್ಮಿಯ ಗನ್ನೆದುರು ನಿಂತಂತೆ. ಶೇನ್ ವಾರ್ನ್ ಮಾಯಾಜಾಲಕ್ಕೆ ಹೆದರಿ‌ ಎದುರಾಳಿ ಹೈರಾಣಾಗುತ್ತಿದ್ದ ಸಮಯವದು. ಒಂದು ಐಸಿಸಿ ಪ್ರಶಸ್ತಿ ಗೆಲ್ಲಲು ಹಲವು ವರ್ಷಗಳ ಅಚಲ ಪ್ರಯತ್ನ, ಶ್ರಮ ಬೇಕು. ಆಟಗಾರರ ನಡುವೆ  ಹೊಂದಾಣಿಕೆ ( Coordination) ಕೂಡ ಅಷ್ಟೇ ಚೆನ್ನಾಗಿರಬೇಕು. ಒಂದು ಮೇಜರ್ ಟೂರ್ನಿ ಗೆಲ್ಲೋದು ಇತರ ತಂಡಗಳಿಗೆ ಸಾಹಸವಾಗಿದ್ದ ಸಮಯದಲ್ಲಿ ಆ ದೈತ್ಯ ಆಸಿಸ್ ಪಡೆ ಗೆದ್ದದ್ದು ಸತತ ಮೂರು ಏಕದಿನ ವಿಶ್ವಕಪ್, ಅದರ ಬೆನ್ನು ಬೆನ್ನಿಗೆ ಎರಡು ಐಸಿಸಿ ಚಾಂಪಿಯನ್ಸ್ ಟ್ರೋಪಿ.

ಏನಾಯ್ತು ಆಸೀಸ್‌ಗೆ?

ಎಂಟೊಂಭತ್ತು ವರ್ಷಗಳ ನಡುವಲ್ಲಿ ಐದು ಐಸಿಸಿ ಪ್ರಶಸ್ತಿಗಳನ್ನ ಲೂಟಿ ಮಾಡಿತ್ತು ಆ  ಭಯಾನಕ ತಂಡ. ಒಂದಲ್ಲ ಎರಡಲ್ಲ ವಿಶ್ವಕಪ್ ನಲ್ಲಿ ಸತತ ಇಪ್ಪತ್ತೊಂಭತ್ತು ಪಂದ್ಯಗಳನ್ನು ಜಯಬೇರಿ ಮೊಳಗಿಸಿದ್ದ ಕಾಂಗೂರುಗಳೆದುರು ಉಳಿದ ಐಸಿಸಿ ರಾಷ್ಟ್ರಗಳಿಗೆ ಒಂದು ಪಂದ್ಯ ಗೆಲ್ಲುವುದೆಂದರೆ ಅಶ್ವಮೇಧ ತಡದಂತೆ… 1996ರ ಫೈನಲ್ ಸೋಲಿನ ನಂತರ  1999, 2003, 2007 ಮೂರಕ್ಕೆ ಮೂರು ಸತತವಾಗಿ ಕ್ರಿಕೆಟ್ ವಿಶ್ವಕಪ್ಪನ್ನ ಆ ದೇಶ ಒಟ್ಟು ಐದು ವಿಶ್ವಕಪ್‌ಗಳನ್ನು ಗೆಲ್ಲುವಾಗ, ಅಂಗಳದಲ್ಲಿ ಅವರ ವ್ಯೂಹ ರಚನೆ ನೋಡಿ ಬೇಸತ್ತು ವರ್ಲ್ಡ್‌ಕಪ್ ನಡೆಸುವುದೇ ಬೇಡ, ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಕೊಟ್ಟು ಬಿಡಿ ಅಂತ ಕ್ರಿಕೆಟ್ ಪಂಡಿತರು ಹೇಳುತ್ತಿದ್ದರೆಂದರೆ. ಆಗಿನ ಕಾಂಗೂರು ಪಡೆಯ ಪಾರುಪತ್ಯ ಊಹಿಸಿ…

ಎರಡು ದಶಕಗಳ ಕಾಲ ಕ್ರಿಕೆಟನ್ನ ಏಕಾಚಕ್ರಾಧಿಪತಿಯಾಗಿ ಆಳಿದ ಅದೆ ಬಲಾಡ್ಯ ಆಸಿಸ್ ತಂಡದ  ಪರಿಸ್ಥಿತಿ ಸಂಕಷ್ಟದಲ್ಲಿದೆ. ತನ್ನ ಕೆಟ್ಟ ಪ್ರದರ್ಶನದಿಂದ ನಗೆಪಾಟಲಿಗೀಡಾಗಿದೆ ಕ್ರಿಕೆಟ್ ಆಸ್ಟ್ರೇಲಿಯಾ. ಭಾರತ ವಿರುದ್ಧ ಇನ್ನೂರರ ಗಡಿ ದಾಟಲು ಹೆಣಗಾಡಿದ ಆಸಿಸ್, ನಂತರ ಸೌತ್ ಆಫ್ರಿಕಾ ಮೇಲು ಇನ್ನೂರು ಮುಟ್ಟಲಿಲ್ಲ.

ತಂಡದಲ್ಲಿ ವಿಶ್ವದರ್ಜೆ ಆಟಗಾರರಿದ್ದರು ಕೂಡ ಪರಿಸ್ಥಿತಿ ಮಾತ್ರ ವಿಷಮ. ಎರಡು ವರ್ಷದ ಹಿಂದೆ ಬಾಂಗ್ಲಾ ವಿರುದ್ಧ ಕೇವಲ ಅರವತ್ತು ಚಿಲ್ಲರೆ ರನ್ನಿಗೆ ಆಲ್‌ಔಟ್ ಆಗಿ ಹೀನಾಯವಾಗಿ ಸರಣಿ ಸೋತಿತ್ತು ಕಾಂಗರೂ ಪಡೆ. ಸದ್ಯದ ವಿಶ್ವಕಪ್‌ನಲ್ಲಿ ಪುಟಿದೇಳಬೇಕಿದೆ ಆಸ್ಟ್ರೇಲಿಯಾ ಹಳೆ ಇತಿಹಾಸದ ಬಲ ಪಡೆದುಕೊಂಡು.

ಕಣ್ಣಲ್ಲೆ ಎದುರಾಳಿಯ ಹೆದರಸಿ ಸ್ಲೆಡ್ಜಿಂಗಿನಲ್ಲೆ ಪಂದ್ಯ ಗೆಲ್ಲುತಿದ್ದ ಆಸ್ಟ್ರೇಲಿಯಾ ಹೋರಾಟವಿಲ್ಲದೆ ಸೋಲುತ್ತಿರುವುದು ನೋಡುತ್ತಿದ್ದರೆ ಮ್ಯಾಚು ಕೂಡ ಬೋರು ಹೊಡೆಯುದಲ್ಲದೆ ಒಂದು ಕಾಲದ ಕ್ರಿಕೆಟ್ ಸೈತಾನ್ ಕಾಂಗೂರು ಪಾಳೆಯದ ಮೇಲೆ ಅಯ್ಯೋ ಅನಿಸುವ ಭಾವ ಮೂಡುತ್ತಿದೆ.

ಇದು ಕಾಲಚಕ್ರ, ಇಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಆಸ್ಟ್ರೇಲಿಯಾವೆಂದರೆ ಜಗತ್ತಿನ ಇತರ ತಂಡಗಳ ಹಾಗಲ್ಲ. ಪುಟಿದೇಳುವ ತಂಡವದು. ಒಂದು ವೇಳೆ ಆಸ್ಟ್ರೇಲಿಯಾ ಬೇಗನೇ ವಿಶ್ವಕಪ್‌ನಿಂದ ನಿರ್ಗಮಿಸಿತೆಂದರೆ ಆ ವಿಶ್ವಕಪ್‌ ಕಳೆ ಕಳೆದುಕೊಳ್ಳುವುದಂತೂ ಸತ್ಯ. ಕ್ರಿಕೆಟ್‌ ಜಗತ್ತಿನಲ್ಲಿ ಒಬ್ಬ ಆಟಗಾರನಿಗೆ ಬೇರೆ ಯಾವುದೇ ತಂಡದ ವಿರುದ್ಧ ಶತಕ ಗಳಿಸಿದಾಗ ಸಿಗುವ ಸಂಭ್ರಮ ಬೇರೆ, ಆಸ್ಟ್ರೇಲಿಯಾ ವಿರುದ್ಧ ಅರ್ಧ ಶತಕ ಗಳಿಸಿದಾಗ ಸಿಗುವ ಖುಷಿಯೇ ಬೇರೆ. ಈಗ ಆಸ್ಟ್ರೇಲಿಯಾಕ್ಕೆ ಧೈರ್ಯ ತುಂಬುವ ಅಗತ್ಯವಿದೆ. ವೆಸ್ಟ್‌ ಇಂಡೀಸ್‌ ಒಂದು ಕಾಲದಲ್ಲಿ ಕ್ರಿಕೆಟ್‌ ಜಗತ್ತನ್ನು ಆಳಿದ ತಂಡ, ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳನ್ನು ಸೋತಿದೆ ಎಂಬ ಕಾರಣಕ್ಕೆ ಆ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮುಂದೊಂದು ದಿನ ಆಸ್ಟ್ರೇಲಿಯಾ ತಂಡ ಪುಟಿದೇಳುವುದು ಖಚಿತ.

Related Articles