ನವದೆಹಲಿ: ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ, ಅನುಭವಿ ಚಿಂಗ್ಲೇನ್ಸನಾ ಸಿಂಗ್ ಕಂಗುಜಾಮ್ ಹಾಗೂ ಆಕಾಶ್‌ದೀಪ್ ಸಿಂಗ್ ಮತ್ತು ಮಹಿಳಾ ವಿಭಾಗದಲ್ಲಿ ದೀಪಿಕಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ಶಿಫಾರಸ್ಸು ಮಾಡಿದೆ.
ಆರ್.ಪಿ ಸಿಂಗ್ ಹಾಗೂ ಸಂದೀಪ್ ಕೌರ್ ಅವರ ಹೆಸರನ್ನು ಜೀವಮಾನ ಸಾಧನೆಗೆ ನೀಡುವ ‘ಮೇಜರ್ ಧ್ಯಾನ್‌ಚಂದ್’ ಪ್ರಶಸ್ತಿಗೆ ಮತ್ತು ತರಬೇತುದಾರ ಬಲ್ಜೀತ್ ಸಿಂಗ್, ಬಿ.ಎಸ್ ಚೌವ್ಹಾನ್ ಹಾಗೂ ರೊಮೇಶ್ ಪಠಾನಿಯಾ ಅವರ ಹೆಸರನ್ನು ‘ದ್ರೋಣಾಚಾರ್ಯ’ ಪ್ರಶಸ್ತಿಗೂ ಭಾರತ ಹಾಕಿ ಒಕ್ಕೂಟ ಶಿಫಾರಸ್ಸು ಮಾಡಿದೆ.
“ಕ್ರೀಡಾಪಟುಗಳಿಗೆ ನೀಡುವ ದೇಶದ ಅತ್ಯುನ್ನತ ಪ್ತಶಸ್ತಿಗಳಿಗೆ ಹಾಲಿ ಹಾಗೂ ಮಾಜಿ ಹಾಕಿ ಪಟುಗಳ ಹೆಸರನ್ನು ಶಿಫಾರಸ್ಸು ಮಾಡಿರುವುದು ತೃಪ್ತಿ ತಂದಿದೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ರಾಜೀಂದರ್ ಸಿಂಗ್ ತಿಳಿಸಿದರು.
ವಿಶ್ವಹಾಕಿಯಲ್ಲಿ ಕೇರಳದ ಶ್ರೀಜೇಶ್ ಶ್ರೇಷ್ಠ ಗೋಲ್ ಕೀಪರ್ ಆಗಿದ್ದಾರೆ. 2006ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಬಾರಿ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿನಿಂದ ಇಲ್ಲಿಯವರೆಗೂ ಅವರು ಭಾರತ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಭಾರತದ ಪರ 200ಕ್ಕೂ ಅಧಿಕ ಪಂದ್ಯಗಳಾಡಿದ್ದಾರೆ. 2008ರಲ್ಲಿ ನಡೆದಿದ್ದ ಕಿರಿಯರ ಏಷ್ಯನ್ ಕಪ್ ಟೂರ್ನಿಯಲ್ಲಿ “ಉತ್ತಮ ಗೋಲ್ ಕೀಪರ್” ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಅಲ್ಲದೇ, 2013ರಲ್ಲಿ ನಡೆದಿದ್ದ ಏಷ್ಯಾ ಕಪ್ ಟೂರ್ನಿಯಲ್ಲೂ ” ಅತ್ಯುತ್ತಮ ಗೋಲ್ ಕೀಪರ್” ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಚಿಂಗ್ಲೇನ್ಸನ ಸಿಂಗ್ ಕಾಂಗುಜಾನ್ ಅವರು 2011ರಲ್ಲಿ ಮೊದಲ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದುವರೆಗೂ ಅವರು 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ದೇಶದ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2013ರಲ್ಲಿ ಏಷ್ಯನ್ ಕಪ್ ಬೆಳ್ಳಿ ಪದಕ, 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ, 2017ರ ಏಷ್ಯಾ ಕಪ್ ಚಿನ್ನದ ಪದಕ, 2018ರ ಚಾಂಪಿಯನ್ ಟ್ರೋಫಿಯಲ್ಲಿ ಬೆಳ್ಳಿ ಪದಕ, 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಚಿಂಗ್ಲೇನ್ಸನ ಸಿಂಗ್ ಕಾಂಗುಜಾನ್ ಇದ್ದರು.
ಆಕಾಶ್ ಸಿಂಗ್ ಭಾರತ ತಂಡದ ಮಿಂಚಿನ ಆಟಗಾರ. ಗೋಲು ಗಳಿಸಬಹುದಾದ ಅವಕಾಶಗಳನ್ನು ಸೃಷ್ಟಿಸಬಲ್ಲಿ ಚತುರ ಆಟಗಾರ. 170 ಪಂದ್ಯಗಳಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ್ದಾರೆ. 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವು ಮಹತ್ವದ ಟೂರ್ನಿಯಲ್ಲಿ ಪದಕ ಸಾಧನೆ ಮಾಡಿದ ಭಾರತ ತಂಡದಲ್ಲಿ ಆಕಾಶ್ ಸಿಂಗ್ ಇದ್ದರು.
ಭಾರತ ಹಾಕಿ ಮಹಿಳಾ ತಂಡದಲ್ಲಿ ಡಿಫೆಂಡರ್ ದೀಪಿಕಾ ಒಂದೂವರೆ ದಶಕದಿಂದ ಆಡುತ್ತಿದ್ದಾರೆ. ಹರಿಯಾಣದ ಯಮುನಾ ನಗರದವರಾದ ಅವರು, ಮೂರು ಹಾಕಿ ವಿಶ್ವಕಪ್ ಟೂರ್ನಿ(2006, 2010 ಹಾಗೂ 2018) ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 200 ಪಂದ್ಯಗಳಲ್ಲಿ ಭಾರತದ ಪರ ಆಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.