Friday, October 4, 2024

ಸಂತೋಷ್‌ ಟ್ರೋಫಿ: ರಾಜ್ಯಕ್ಕೆ ಎರಡನೇ ಜಯ

Sportsmail

ಹೀರೋ ಸಂತೋಷ್‌ ಟ್ರೋಫಿ ಗ್ರೂಪ್‌ ಎ ಎರಡನೇ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಆಂಧ್ರಪ್ರದೇಶದ ವಿರುದ್ಧ 1-0 ಗೋಲಿನಿಂದ ಜಯ ಗಳಿಸುವ ಮೂಲಕ ಸತತ ಎರಡನೇ ಜಯ ಗಳಿಸಿದೆ.

ದಿನದ ಎರಡನೇ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ತಮಿಳುನಾಡು ತಂಡ ತೆಲಂಗಾಣ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿದೆ.

ದಿಟ್ಟ ಹೋರಾಟ ನೀಡಿದ ಆಂಧ್ರಪ್ರದೇಶದ ವಿರುದ್ಧ ಪ್ರಥಮಾರ್ಧದಲ್ಲಿ ಕರ್ನಾಟಕ ತಂಡ ಗೋಲು ಗಳಿಸುವಲ್ಲಿ ವಿಫಲವಾಗಿತ್ತು, ಆದರೆ 90ನೇ ನಿಮಿಷದಲ್ಲಿ ಕಮಲೇಶ್‌ ಪಿ ಗಳಿಸಿದ ಗೋಲಿನಿಂದ ಅಮೂಲ್ಯ ಜಯ ಗಳಿಸಿದ ರಾಜ್ಯ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಆಂಧ್ರಪ್ರದೇಶ ಬಲಿಷ್ಠ ಕರ್ನಾಟಕದ ವಿರುದ್ಧ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ಆದರೆ ಕೊನೆಯ ನಿಮಿಷದಲ್ಲಿ ಕಮಲೇಶ್‌ ಗಳಿಸಿದ ಗೋಲು ಆಂಧ್ರಪ್ರದೇಶವನ್ನು ಸ್ಪರ್ಧೆಯಿಂದ ಹೊರನಡೆಯುವಂತೆ ಮಾಡಿತು.

ಮೊದಲ ಪಂದ್ಯದಲ್ಲಿ ಆಂಧ್ರಪ್ರದೇಶದ ವಿರುದ್ಧ 4-0 ಗೋಲಿನಿಂದ ಜಯ ಗಳಿಸಿದ್ದ ತೆಲಂಗಾಣ ತಮಿಳುನಾಡು ವಿರುದ್ಧ ಅತ್ಯಂತ ಆತ್ಮವಿಶ್ವಾಸದಲ್ಲೇ ಪಂದ್ಯ ಆರಂಭಿಸಿತ್ತು. ಪ್ರಥಮಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದವು, ಆದರೆ 48ನೇ ನಿಮಿಷದಲ್ಲಿ ನಾಯಕ ವಿಜಯ ನಾಗಪ್ಪನ್‌ ಗಳಿಸಿದ ಗೋಲು ತಮಿಳುನಾಡಿಗೆ ಜಯ ತಂದುಕೊಟ್ಟಿತು. ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಕರ್ನಾಟಕ ತಂಡ ಇನ್ನೊಂದು ಡ್ರಾ ಸಾಧಿಸಿದರೆ ಫೈನಲ್‌ ಸುತ್ತು ತಲುಪಲಿದೆ. ಅಂತಿಮ ಪಂದ್ಯದಲ್ಲಿ ಕರ್ನಾಟಕ ಶನಿವಾರ ತೆಲಂಗಾಣ ವಿರುದ್ಧ ಸೆಣಸಲಿದೆ.

ಶನಿವಾರ ತಮಿಳುನಾಡು ತಂಡ ಆಂಧ್ರಪ್ರದೇಶದ ವಿರುದ್ಧ ಜಯ ಗಳಿಸಿ, ಕರ್ನಾಟಕ ತಂಡ ತೆಲಂಗಾಣ ವಿರುದ್ಧ ಸೋತರೆ ಗೋಲುಗಳ ಆಧಾರದ ಮೇಲೆ ಫೈನಲ್‌ ಸುತ್ತು ತಲಪುವ ತಂಡದ ಆಯ್ಕೆ ನಡೆಯಲಿದೆ.

Related Articles