Saturday, July 27, 2024

ಒಡಿಶಾ ದಾಳಿಗೆ ಬೆಂಗಳೂರು ಉಡೀಸ್

Sportsmail 

#ANewDawn ಎಂದೇ ಕರೆಯಿಸಿಕೊಂಡು‌, ಹೊಸ ಉತ್ಸಾಹದೊಂದಿಗೆ ಅಂಗಣಕ್ಕಿಳಿದ ಒಡಿಶಾ ಎಫ್‌ಸಿ ಬಲಿಷ್ಠ ಬೆಂಗಳೂರು ಎಫ್‌ಸಿಗೆ 3-1 ಗೋಲುಗಳ ಅಂತರದಲ್ಲಿ ಸೋಲುಣಿಸಿ ಹೀರೋ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ನಿಬ್ಬೆರಗುಗೊಳಿಸುವ ಫಲಿತಾಂಶ ನೀಡಿದೆ.

ಕಳೆದ ಋತುವಿನಲ್ಲಿ ಸೋಲ ಮೇಲೆ ಸೋಲುಂಡು ಕೊನೆಯ ಸ್ಥಾನದಲ್ಲಿದ್ದ ಒಡಿಶಾ ವಿರುದ್ಧ ಬೆಂಗಳೂರು ತಂಡ ಈ ರೀತಿಯ ಸೋಲನ್ನು ನಿರೀಕ್ಷಿಸಿರಲಿಲ್ಲ. ಜೇವಿ ಹೆರ್ನಾಂಡೀಸ್‌ (3 ಮತ್ತು 51ನೇ ನಿಮಿಷ) ಮತ್ತು ಅರಿಡಾಯ್‌ ಸ್ವಾರೇಜ್‌ (90+4ನೇ ನಿಮಿಷ) ಗಳಿಸಿದ ಗೋಲು ಬೆಂಗಳೂರು ತಂಡಕ್ಕೆಮರೆಯಲಾಗದ ಆಘಾತವನ್ನುಂಟು ಮಾಡಿತು.

ಬೆಂಗಳೂರು ಪರ ಅಲನ್‌ ಕೋಸ್ಟಾ (21ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ನಾಯಕ ಸುನಿಲ್‌ ಛೆಟ್ರಿ ಪೆನಾಲ್ಟಿ ಕಿಕ್‌ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿರುವುದು ತಂಡದ ಮನೋಬಲವನ್ನೇ ಕುಗ್ಗಿಸಿತು.

ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲಿ ಬೆಂಗಳೂರು ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂಧೂ ಮಾಡಿದ ಪ್ರಮಾದದಿಂದಾಗಿ ಒಡಿಶಾದ ಜೇವಿ ಹೆರ್ನಾಂಡೀಸ್‌ ಗೋಲು ಗಳಿಸಿದರು. ಬೆಂಗಳೂರಿಗೆ ಆರಂಭದಲ್ಲೇ ಶಾಕ್‌. ಅಲನ್‌ ಕೋಸ್ಟಾ ಗಳಿಸಿದ ಗೋಲಿನಿಂದ ಪಂದ್ಯ ಪ್ರಥಮಾರ್ಧದಲ್ಲಿ 1-1ರಿಂದ ಸಮಬಲಗೊಂಡಿತು.

ದ್ವಿತಿಯಾರ್ಧ ಆರಂಭಗೊಂಡ ಐದನೇ ನಿಮಿಷದಲ್ಲಿ ಜೇವಿ ಫ್ರೀ ಕಿಕ್‌ ಮೂಲಕ ಗಳಿಸಿದ ಗೋಲು ಒಡಿಶಾ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಬೆಂಗಳೂರು ಆಟಗಾರರು ಬೇರೆ ದಾರಿ ಕಾಣದೆ ಆಕಾಶ ನೋಡುವಂತಾಯಿತು. ಒತ್ತಡಕ್ಕೆ ಸಿಲುಕಿದ ನಾಯಕ ಸುನಿಲ್‌ ಛೆಟ್ರಿ ಸಿಕ್ಕ ಪೆನಾಲ್ಟಿ ಆವಕಾಶವನ್ನೂ ಗೋಲಾಗಿಸುವಲ್ಲಿ ವಿಫಲವಾದರು.

ಪಂದ್ಯ ಮುಗಿಯಲು ಕೊನೆಯ ನಿಮಿಷ ಬಾಕಿ ಇರುವಾಗ ಸ್ಪೇನ್‌ ಮೂಲದ ಆಟಗಾರ ಅರಿಡಾಯ್‌ ಸ್ವಾರೇಜ್‌ ಗಳಿಸಿದ ಗೋಲು ಒಡಿಶಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿತು. ಬೆಂಗಳೂರು ವಿರುದ್ಧ ಇದುವರೆಗೂ ಸೋಲರಿಯದ ಒಡಿಶಾ ಮೊದಲ ಜಯ ಗಳಿಸಿ ಸಂಭ್ರಮಿಸಿತು.

Related Articles