Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

KIUG2025: ಕಷ್ಟಗಳ ಮೆಟ್ಟಿ ನಿಂತು ಕುಸ್ತಿಯಲ್ಲಿ ಚಿನ್ನ ಗೆದ್ದ ಗಾಯತ್ರಿ

Sportsmail: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪುಟ್ಟ ಗ್ರಾಮ ಯಡೊಗ. ಇಲ್ಲಿನ ಕುಸ್ತಿಪಟು ಗಾಯತ್ರಿ ರಮೇಶ್‌ ಸುತಾರ್‌ ಜೈಪುರದಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸನ್ ವನಿತೆಯ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Gayatri, who overcame hardships and won gold in wrestling at Khelo India University Games Jaipur.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕುಸ್ತಿ ತರಬೇತುದಾರರಾದ ತುಕರಾಮ್‌ ಗೌಡ ಅವರಲ್ಲಿ ತರಬೇತಿ ಪಡೆಯುತ್ತಿರುವ ಗಾಯತ್ರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ 59ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಚಿನ್ನದ ಸಾಧನೆ ಮಾಡಿದರು.

ಯಡೊಗ ಗ್ರಾಮದ ರಮೇಶ್‌ ಸುತಾರ್‌ ಹಾಗೂ ತಳಸ ದಂಪತಿಯ ಪುತ್ರಿ ಗಾಯತ್ರಿ ಜೂನಿಯರ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿರುತ್ತಾರೆ. ನ್ಯಾಷನಲ್‌ ಕಾಲೇಜ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುತ್ತಾರೆ. ಗಾಯತ್ರಿ ಅವರ ಅಣ್ಣ ಶೈಲೇಶ್‌ ಕೂಡ ರಾಷ್ಟ್ರೀಯ ಕುಸ್ತಿಪಟುವಾಗಿದ್ದು, ಭರವಸೆಯ ಕುಸ್ತಿಪಟು ಎನಿಸಿದ್ದಾರೆ. ಊರಿನವರೇ ಆದ ಸಂದೀಪ್‌ ಹಾಗೂ ದೀಪಕ್‌ ರಾಷ್ಟ್ರೀಯ ಕುಸ್ತಿಯಲ್ಲಿ ಮಿಂಚಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಯಡೊಗ ಗ್ರಾಮದ ಯುವಕರಿಗೆ ಕುಸ್ತಿಯಲ್ಲಿ ಪಾಲ್ಗೊಳ್ಳಲು ಸ್ಫೂರ್ತಿಯಾಗಿದ್ದಾರೆ. ಗಾಯತ್ರಿ ಅವರು ಬಡ ಕುಟುಂದಿಂದ ಬಂದಿದ್ದು, ತಂದೆ ರಮೇಶ್‌ ಎಲೆಕ್ಟ್ರೀಷಿಯನ್‌ ವೃತ್ತಿ ಮಾಡುತ್ತಿದ್ದಾರೆ.

ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವ ಗಾಯತ್ರಿ, “ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಚಿನ್ನ ಗೆದ್ದಿರುವುಕ್ಕೆ ಖುಷಿ ಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಹಂಬಲವಿದೆ. ಉತ್ತಮ ಉದ್ಯೋಗ ಪಡೆದು ಬದುಕನ್ನು ಕಟ್ಟಿಕೊಳ್ಳಬೇಕು. ಅದಕ್ಕಾಗಿ ಕಠಿಣ ಶ್ರಮಪಡುವೆ. ನಮ್ಮ ಕುಸ್ತಿ ಗುರುಗಳಾದ ತುಕರಾಮ ಗೌಡ ಅವರ ಉತ್ತಮ ತರಬೇತಿಯಿಂದಾಗಿ ಇದೆಲ್ಲ ಸಾಧ್ಯವಾಯಿತು,” ಎಂದಿದ್ದಾರೆ.

ಕುಸ್ತಿಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಒಂದು ಚಿನ್ನ ಹಾಗೂ ಇನ್ನೊಂದು ಕಂಚಿನ ಪದಕ ದಕ್ಕಿದೆ. ವನಿತೆಯರ 57 ಕೆಜಿ ಫ್ರೀಸ್ಟೈಲ್‌ನಲ್ಲಿ ತುಕರಾಮ್‌ ಗೌಡ ಅವರ ವಿದ್ಯಾರ್ಥಿನಿ ಶಾಲಿನ ಸಯರ್‌ ಸಿದ್ದಿ ಅವರು ಕಂಚಿನ ಪದಕ ಗೆದ್ದಿರುತ್ತಾರೆ. ಇವರು ದಾಂಡೇಲಿಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು.

ಸಾರಿಗೆ ಸೌಲಭ್ಯ ಉತ್ತಮವಾಗಬೇಕು: ಹಳಿಯಾಳದಲ್ಲಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕುಸ್ತಿ ಕೋಚ್‌ ತುಕರಾಮ್‌ ಗೌಡ ಅವರು ಕುಸ್ತಿಪಟುಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಕುಸ್ತಿಪಟುಗಳ ಪ್ರಯಾಣಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ. “ಕುಸ್ತಿಪಟುಗಳ ಸಾಧನೆ ಖುಷಿಕೊಟ್ಟಿದೆ. ಇವರೆಲ್ಲ ಬಡ ಕುಟುಂಬದಿಂದ ಬಂದವರು. ಕ್ರೀಡೆಯ ಮೂಲಕವೇ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹಂಬಲಿಸುವವರು. ಕುಸ್ತಿಪಟುಗಳಾದ ಇವರು ರೈಲಿನಲ್ಲಿ ಪ್ರಯಾಣಿಸುವಾಗ ತ್ರಿ ಟಯರ್‌ AC ಯಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಬೇಕು. ಮೂರು ದಿನಗಳ ಕಾಲ ಸಾಮಾನ್ಯ ಸ್ಲೀಪರ್‌ನಲ್ಲಿ ಪ್ರಯಾಣ ಮಾಡಿ ಜೈಪುರ ತಲುಪಿ, ಮರು ದಿನ ಕುಸ್ತಿ ಆಡುವಾಗ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ಪದಕ ವಂಚಿತರಾಗಲು ಈ ಪ್ರಯಾಣವೂ ಒಂದು ಪ್ರಮುಖ ಕಾರಣವಾಗಿರುತ್ತದೆ. ಹಳಿಯಾಳದಲ್ಲಿ ಉತ್ತಮ ಕುಸ್ತಿಪಟುಗಳಿದ್ದಾರೆ. ಶಾಲಿನ ಹಾಗೂ ಗಾಯತ್ರಿ ಅವರ ಸಾಧನೆ ಒಂದು ಗ್ರಾಮಕ್ಕೆ ಸಿಕ್ಕ ಯಶಸ್ಸಾಗಿದೆ,” ಎಂದು ತುಕರಾಮ್‌ ಗೌಡ ಅವರು ಹೇಳಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.