Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಗರಬತ್ತಿ ತಯಾರಿಸುತ್ತಿದ್ದ ಮಣಿಕಂಠ ಡಬಲ್‌ ವಿಶ್ವ ಚಾಂಪಿಯನ್‌!

ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಹೆತ್ತವರನ್ನು ಸಲಹುವುದಕ್ಕಾಗಿ ವಿಶೇಷ ಚೇತನ ಮಣಿಕಂಠನರ್‌ ಕುಮಾರ್‌ ಮನೆಯಲ್ಲಿ ಅಗರಬತ್ತಿ ತಯಾರಿಸುವ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ನಡೆದ ಕೃತಕ ಗೋಡೆ ಏರುವ ಶಿಬಿರದಲ್ಲಿ ಪಾಲ್ಗೊಂಡು ತನ್ನ ಬದುಕನ್ನೇ ಬದಲಾಯಿಸಿಕೊಂಡ. ಈಗ ಎರಡನೇ ಬಾರಿ ವಿಶ್ವ ಕಪ್‌ ಗೆದ್ದು ಲಾಸ್‌ಏಂಜಲೀಸ್‌ ನಲ್ಲಿ 2028ರಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. From making Incense sticks to winning world cup story of Bengaluru sport Climber Manikandan Kumar

ಅದು 2009ನೇ ಇಸವಿ. ಯಾರೋ ಕರೆ ಮಾಡಿ “ಒಬ್ಬ ವಿಶೇಷಚೇತನ ಕ್ರೀಡಾಪಟು ಅಂತಾರಾಷ್ಟ್ರೀಯ ಪ್ಯಾರಾ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ದಯವಿಟ್ಟು ಒಂದು ಸಂದರ್ಶನ ಮಾಡಿ,” ಎಂದು ಕರೆ ಮಾಡಿದರು. ಅದು ಮಣಿಕಂಠನ್‌ ಕುಮಾರ್‌ ಅವರ ಕುರಿತು ಬಂದ ಕರೆ. ಅವರ ಮನೆಯನ್ನು ಹುಡುಕಲು ಒಂದು ದಿನವೇ ಹಿಡಿಯಿತು. ಅದು ಶ್ರೀರಾಂಪುರದ ಯಾವುದೋ ಗಲ್ಲಿ. ಹುಡುಕಿ ಹೊರಟಾಗ ಅಂಬೇಡ್ಕರ್‌ ಗೋಪುರದ ಒಳಗಡೆ ಒಂದು ಚಿಕ್ಕ ಗಲ್ಲಿ. ಗಲ್ಲಿಯಲ್ಲಿ ಸಾಗಿದರೆ ಪುಟ್ಟ ಪುಟ್ಟ ಗುಡಿಸಲುಗಳು. ಅಲ್ಲಿ ಹೋಗಿ “ಮಣಿಕಂಠನ್‌ ಮನೆ ಯಾವುದು?” ಎಂದು ಕೇಳಿದರೆ ಅದೇ ನೋಡಿ” ಎಂದು ತೋರಿಸಿದರು. ಬೆಂಗಳೂರಿನಲ್ಲಿ ಹೀಗೂ ಬದುಕುತ್ತಿದ್ದಾರೆ ಎಂದು ನನಗೆ ಗೊತ್ತಾದದ್ದು ಅವತ್ತೇ, ಒಂದು ಚಿಕ್ಕ ಕೋಣೆಯಲ್ಲಿ ಮೂವರು ವಾಸಿಸುತ್ತಿದ್ದರು. ಎಲ್ಲವೂ ಆ ಚಿಕ್ಕ ಕೋಣೆಯಲ್ಲೇ, ಟಾಯ್ಲೆಟ್‌ಗಿಂತಲೂ ಚಿಕ್ಕದು. “ಸರ್‌ ನನ್ನ ಹೆತ್ತವರನ್ನು ಸಾಕುವುದೇ ನನ್ನ ಗುರಿ, ಬಾಕಿ ಎಲ್ಲ ದೇವರ ಇಚ್ಛೆಯಂತೆ ನಡೆಯುತ್ತದೆ,” ಎಂದು ಮಣಿಕಂಠನ್‌ ಹೇಳಿದಾಗ ಬಹಳ ಬೇಸರವಾದರೂ ದಿವ್ಯಾಂಗ ಮಣಿಕಂಠ ಹೆತ್ತವರ ಬಗ್ಗೆ ಇಟ್ಟುಕೊಂಡ ಕಾಳಜಿ ಆತನಲ್ಲಿ ಒಬ್ಬ ಚಾಂಪಿಯನ್‌ ಇದ್ದಾನೆ ಎಂಬುದನ್ನು ಖಚಿತಪಡಿಸಿತು.

ಮೊನ್ನೆ ಇಟಲಿಯ ಆರ್ಕೋನಲ್ಲಿದ್ದ ಮಣಿಕಂಠನ್‌ಗೆ ವಾಟ್ಸಾಪ್‌ ಕರೆ ಮಾಡಿದಾಗ ಆತ ಹೇಳಿದ ಮಾತು ನಿಜವಾಗಿಯೂ ಖುಷಿಯಾಯಿತು. “ಸರ್‌, ನೀವು ಅವತ್ತು ನಮ್ಮ ಮನೆಗೆ ಬಂದು ಬರೆದ ಕತೆ ಈಗ ಬಹಳ ಬದಲಾಗಿದೆ. ನಾವೀಗ ಶ್ರೀರಾಂಪುರದಲ್ಲಿಲ್ಲ. ಒಳ್ಳೆ ಮನೆಯಲ್ಲಿ ಇದ್ದೇವೆ. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಇದು ನನ್ನ ಎರಡನೇ ವಿಶ್ವಕಪ್‌. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಪ್ರಾಯೋಜಕರು ಸಹಾಯ ಮಾಡುತ್ತಿದ್ದಾರೆ. ಎಲ್ಲವೂ ದೇವರ ದಯೆಯಿಂದ ನಡೆಯುತ್ತಿದೆ,” ಎಂದರು.

“ಉದ್ಯೋಗದ ಬಗ್ಗೆ ಯೋಚನೆ ಮಾಡಲಿಲ್ಲವೇ?” ಎಂದು ಕೇಳಿದಾಗ, “ಸರ್‌ ಸಾಧನೆ ಮಾಡಿದರೆ ಕೆಲಸ ಸಹಜವಾಗಿಯೇ ಸಿಗುತ್ತದೆ. ನನ್ನ ಗುರಿ ಲಾಸ್‌ಏಂಜಲೀಸ್‌ ಪ್ಯಾರಾಲಿಂಪಿಕ್ಸ್‌, ಅಲ್ಲಿ ಪದಕ ಗೆದ್ದರೆ ಸಹಜವಾಗಿಯೇ ಉದ್ಯೋಗ ಸಿಗುತ್ತದೆ. ಅಲ್ಲಿಯ ತನಕ ನಿರಂತರ ಹೋರಾಟ ಇದ್ದೇ ಇರುತ್ತದೆ.” ಎಂದರು.

ಕಳೆದ 15 ವರ್ಷಗಳಲ್ಲಿ ಮಣಿಕಂಠನ್‌ ಗೆದ್ದ ಪಕದಗಳಿಗೆ ಲೆಕ್ಕವಿಲ್ಲ. ಜಾಗತಿಕ ಮಟ್ಟದಲ್ಲಿ ಏಳು ಪದಕಗಳಿವೆ. ವಿಶ್ವಕಪ್‌ನಲ್ಲಿ ಎರಡು ಸತತ ಎರಡು ವರ್ಷಗಳಲ್ಲಿ ಎರಡು ಚಿನ್ನ. ಒಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ 28ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಮಣಿಕಂಠನ್‌ ಈಗ ಭಾರತದ ನಂಬರ್‌ ಒನ್‌ ಪ್ಯಾರಾ ಸ್ಪೋರ್ಟ್‌ ಕ್ಲೈಂಬರ್‌. IFSC Para Climbing World Cup ನ್ನು ಈ ಬಾರಿ ಇಟಲಿಯ ಆರ್ಕೋದಲ್ಲಿ ಆಯೋಜಿಸಿತ್ತು. ಮಣಿಕಂಠನ್‌ ಅತ್ಯಂರ ಕಠಿಣವೆನಿಸುವ RP2 ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇಲ್ಲಿ ಸಾಕಷ್ಟು ಸವಾಲುಗಳಿರುತ್ತವೆ. ಉತ್ತಮ ಕ್ಲೈಂಬರ್‌ಗಳು ಪಾಲ್ಗೊಳ್ಳುತ್ತಾರೆ. ಅವರ ನಡುವೆ ಸದ್ದಿಲ್ಲದೆ ಮಣಿಕಂಠನ್‌ ಚಿನ್ನದ ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.