Thursday, September 12, 2024

ನಾರ್ತ್ ಈಸ್ಟ್‌ಗೆ ಪ್ರಯೋಗಶೀಲ ಚೆನ್ನೈಯಿನ್ ಎದುರಾಳಿ

ಗುವಾಹಟಿ, ಜನವರಿ 25

ಶನಿವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ ಪ್ರಯೋಗಶೀಲ ಚೆನ್ನೈಯಿನ್ ಎಫ್ಸಿ ವಿರುದ್ಧ ಜಯ ಗಳಿಸಿ ಲೀಗ್‌ನಲ್ಲಿ ಅಂತಿಮ ನಾಲ್ಕರ ಹಂತ ತಲಪುವ ಹಾದಿಯನ್ನು ಸುಗಮಗೊಳಿಸುವ ಗುರಿಯಲ್ಲಿದೆ.

12 ಪಂದ್ಯಗಳನ್ನಾಡಿರುವ ಎಲ್ಕೊ ಷಟೋರಿ ತಂಡ 20 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಆರು ಪಂದ್ಯಗಳು ಬಾಕಿ ಇದ್ದು, ಜೆಮ್ಷೆಡ್ಪುರ ಹಾಗೂ ಎಟಿಕೆ ತಂಡಗಳು ಕೂಡ ನಾಲ್ಕರ ಹಂತ ತಲುಪಲು ದಿಟ್ಟ ಹೋರಾಟ ನೀಡುತ್ತಿವೆ. ಕೊನೆಯ ಸ್ಥಾನದಲ್ಲಿರುವ ತಂಡದ ವಿರುದ್ಧ ಜಯ ಗಳಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಾರ್ತ್ ಈಸ್ಟ್ ತವಕದಲ್ಲಿದೆ.
ಏಷ್ಯನ್ ಕಪ್‌ಗಾಗಿ ವಿಶ್ರಾಂತಿ ಪಡೆಯುವುದಕ್ಕೆ ಮೊದಲು ತಂಡ ಆಡಿದ ಕೆಲವು ಪಂದ್ಯಗಳಲ್ಲಿ ಹಿನ್ನಡೆ ಕಂಡಿರುವುದು ಗಮನಾರ್ಹ. ನಾರ್ತ್ ಈಸ್ಟ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಲವಾಗಿತ್ತು. ಅಲ್ಲದೆ ಗೋವಾ ವಿರುದ್ಧದ ಪಂದ್ಯದಲ್ಲಿ 1-5 ಗೋಲಿನ ಅಂತರದಲ್ಲಿ ಹೀನಾಯ ಸೋಲನುಭವಿಸಿತ್ತು. ಆದರೆ ಬಹಳ ದಿನಗಳ ವಿರಾಮದ ನಂತರ ಆಗಮಿಸಿರುವ ತಂಡ ಜಯದೊಂದಿಗೆ ಆರಂಭ  ಕಾಣಲಿದೆ ಎಂಬ ನಂಬಿಕೆ ಕೋಚ್‌ಗೆ ಇದೆ. ಏಕೆಂದರೆ ಗ್ರೀಸ್‌ನ ಫಾರ್ವರ್ಡ್ ಆಟಗಾರ ಪನಾಗಿಯೋಟಿಸ್ ಟ್ರಿಯಾಡಿಸ್ ಹಾಗೂ ಶೌವಿಕ್ ಘೋಷ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
‘ನಾವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಇದಕ್ಕಾಗಿ ಕಠಿಣ ಹೋರಾಟ ನಡೆಸಿದ್ದೇವೆ. ಆ ನಂತರ ನಮಗೆ ವಿಶ್ರಾಂತಿ ಸಿಕ್ಕಿದೆ. ಮುಂದಿನ ಭಾಗದ ಆಟಕ್ಕಾಗಿ ನಾವು ವಿಶ್ರಾಂತಿಯ ವೇಳೆ ಹೊಸ ಯೋಜನೆಗಳನ್ನು ರೂಪಿಸಿದ್ದೇವೆ. ಕೊನೆಯ ಎರಡು ವಾರಗಳಲ್ಲಿ ನಾವು ಸಾಕಷ್ಟು ಅಭ್ಯಾಸ ನಡೆಸಿದ್ದೇವೆ. ಸಿದ್ಥತೆಯೂ ನಡೆದಿದೆ. ಬೇಸರದ ಸಂಗತಿ ಎಂದರೆ ನಾವು ಎರಡು ಅಭ್ಯಾಸ ಪಂದ್ಯಗಳನ್ನು ನಮಗಿಂತ ದುರ್ಬಲ ತಂಡದ ವಿರುದ್ಧ ಆಡಿದ್ದೇವೆ, ಇದರಿಂದಾಗಿ ತಂಡದ ಮಟ್ಟವನ್ನು ಅರಿಯಲು ಕಷ್ಟವಾಗುತ್ತದೆ,‘ ಎಂದು ಷೆಟೋರಿ ಹೇಳಿದ್ದಾರೆ.
ಗುವಾಹಟಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾರ್ತ್ ಈಸ್ಟ್ ಕೇವಲ ಒಂದು ಪಂದ್ಯದಲ್ಲಿ ಗೆದ್ದಿತ್ತು. ನಾಲ್ಕು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಒಂದು ಪಂದ್ಯದಲ್ಲಿ ಸೋಲನುಭವಿಸಿತ್ತು. ತಂಡದ ಪರ ಒಂಬತ್ತು ಗೋಲುಗಳನ್ನು ಗಳಿಸಿರುವ ಬಾರ್ತಲೋಮ್ಯೊ ಒಗ್ವಚೆ ಅವರ ಮೇಲೆ ತಂಡ ಹೆಚ್ಚು ಆ‘ರಿಸಿರುವುದು ಸ್ಪಷ್ಟ. ಚೆನ್ನೈಯಿನ್ ತಂಡ ಈ ಋತುವಿನಲ್ಲಿ ಎದುರಾಳಿ ತಂಡಕ್ಕೆ ಅತಿ ಹೆಚ್ಚು ಗೋಲುಗಳನ್ನು ನೀಡಿದ ದಾಖಲೆ ಹೊಂದಿದೆ. (12 ಪಂದ್ಯಗಳಿಂದ 24 ಗೋಲುಗಳನ್ನು ನೀಡಿದೆ.).
ಹಾಲಿ ಚಾಂಪಿಯನ್ ಚೆನ್ನೈಯಿನ್ ತಂಡ ಇದುವರೆಗೂ ಗೆದ್ದಿರುವುದು ಕೇವಲ ಒಂದು ಪಂದ್ಯ, ಆದ್ದರಿಂದ ನಾಕೌಟ್ ಹಂತ ದೂರವಾಗಿದ್ದು, ಕೇವಲ ಗೌರವಕ್ಕಾಗಿ ಆಡಬೇಕಾಗಿದೆ. ಎಎಫ್ಸಿ ಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿರುವ ಕೋಚ್ ಜಾನ್ ಗ್ರೆಗೋರಿ ಉಳಿದಿರುವ ಪಂದ್ಯಗಳಲ್ಲಿ ಉತ್ತಮ ಆಟವಾಡುವ ಆಶಯ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಸಿಕೆ ವಿನೀತ್ ಹಾಗೂ ಹಾಲಿಚರಣ್ ನಾರ್ಜಿ ಕೇರಳ ಬ್ಲಾಸ್ಟರ್ಸ್‌ನಿಂದ ಲೋನ್ ಆಟಗಾರರಾಗಿ ಚೆನ್ನೈ  ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದಾಗಿ ತಂಡದ ಬಲ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಅಲ್ಲದೆ ನಾಲ್ವರು ವಿದೇಶಿ ಆಟಗಾರರು ನಾಳೆಯ ಪಂದ್ಯದಲ್ಲಿ ಆಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
‘ಐಎಸ್‌ಎಲ್‌ನಲ್ಲಿ ಉಳಿದಿರುವ ಪಂದ್ಯಗಳಲ್ಲಿ ನಾವು ನಾಲ್ವರು ವಿದೇಶಿ ಆಟಗಾರರನ್ನು ಆಡಿಸುವ ಪ್ರಯೋಗ ಮಾಡಲಿದ್ದೇವೆ. ಕೇರಳ ತಂಡದಿಂದ ಬಂದಿರುವ ಇಬ್ಬರು ಹುಡುಗರು ದೇಶೀಯ ಆಟಗಾರರರು. ಆದ್ದರಿಂದ ಅವರು ವಿದೇಶಿ ಕೋಟಾಕ್ಕೆ ಸೇರುವುದಿಲ್ಲ. ಅವರ ಶಕ್ತಿ ಸಾಮರ್ಥ್ಯವನ್ನು ಅರಿಯುವುದು ಅಷ್ಟು ಕಷ್ಟವಾಗದು, ಏಕೆಂದರೆ. ಅವರು ಈಗಾಗಲೇ ಲೀಗ್‌ನಲ್ಲಿ ಆಡಿದ್ದಾರೆ. ಅಲ್ಲದೆ ಇಲ್ಲಿಯ ಪರಿಸ್ಥಿತಿಗೆ ಅವರು ಸುಲಭವಾಗಿ ಹೊಂದಿಕೊಳ್ಳಬಲ್ಲರು,‘ ಎಂದು ಗ್ರೆಗೋರಿ ಹೇಳಿದ್ದಾರೆ.

Related Articles