Saturday, October 12, 2024

ಸಮಬಲ ಸಾಧಿಸಿದ ಗೋವಾ, ಬೆಂಗಳೂರು

ಗೋವಾ, ನವೆಂಬರ್, 23, 2020

ಬೆಂಗಳೂರು ಎಫ್ ಸಿ ಪರ ಕ್ಲೈಟನ್ ಸಿಲ್ವಾ (27ನೇ ನಿಮಿಷ) ಮತ್ತು ಜುವಾನನ್ ಫೆರ್ನಾಂಡೀಸ್ (57ನೇ ನಿಮಿಷ), ಎಫ್ ಸಿ ಗೋವಾ ಪರ ಐಗರ್ ಏಂಗುಲೊ (66 ಮತ್ತು 69ನೇ ನಿಮಿಷ) ಗೋಲು ಗಳಿಸುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೂರನೇ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತು.

ದ್ವಿತಿಯಾರ್ಧದಲ್ಲಿ ಗೋವಾ ತಿರುಗೇಟು!!!

57ನೇ ನಿಮಿಷದಲ್ಲಿ ಜುವಾನನ್ ಫೆರ್ನಾಂಡೀಸ್ ಗಳಿಸಿದ ಗೋಲಿನಿಂದ ಬೆಂಗಳೂರು ತಂಡ 2-0 ಅಂತರದಲ್ಲಿ ಮೇಲುಗೈ ಸಾಧಿಸಿಕೊಂಡಿತು. ಆದರೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದ ಗೋವಾ ತಂಡ ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಎರಡು ಗೋಲುಗಳನ್ನು ಗಳಿಸಿ ಸಮಬಲಗೊಳಿಸಿತು. ಐಗರ್ ಏಂಗುಲೊ ಅಲ್ಬೊನಿಗಾ (66 ಮತ್ತು 69ನೇ ನಿಮಿಷ) ಗಳಿಸಿದ ಎರಡು ಗೋಲು ಬೆಂಗಳೂರು ತಂಡವನ್ನು ಬೆಚ್ಚಿಬೀಳಿಸುವಂತೆ ಮಾಡಿತು. ಪಂದ್ಯ ಕುತೂಹಲದತ್ತ ಸಾಗಿತು.

ಬೆಂಗಳೂರಿಗೆ ಮುನ್ನಡೆ ನೀಡಿದ ಕ್ಲೈಟನ್

ಗೋವಾ ವಿರುದ್ಧ ಬೆಂಗಳೂರು ತಂಡ ಕಳೆದ ಆರು ಪಂದ್ಯಗಳಲ್ಲಿ ಸೋತಿರಲಿಲ್ಲ. ಅದೇ ಆತ್ಮವಿಶ್ವಾಸದಿಂದ ಅಂಗಣಕ್ಕಿಳಿದ ಬೆಂಗಳೂರು ತಂಡ ಚೆಂಡಿನ ಮೇಲೆ ಉತ್ತಮ ರೀತಿಯಲ್ಲಿ ನಿಯಂತ್ರಣ ಸಾಧಸಿತ್ತು. 27ನೇ ನಿಮಿಷದಲ್ಲಿ  ಕ್ಲೈಟನ್ ಸಿಲ್ವಾ ಹೆಡರ್ ಮೂಲಕ ಗಳಿಸಿದ ಗೋಲು ಬೆಂಗಳೂರು ತಂಡಕ್ಕೆ ಮುನ್ನಡೆ ಕಲ್ಪಿಸಿತು. ನಂತರ 43ನೇ ನಿಮಿಷದಲ್ಲಿ ಬೆಂಗಳೂರು ತಂಡಕ್ಕೆ ಎರಡನೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಸುನಿಲ್ ಛೆಟ್ರಿಗೆ ಆ ಅವಕಾಶವನ್ನು ಗೋವಾದ ಡಿಫೆನ್ಸ್ ವಿಭಾಗ ನೀಡಲಿಲ್ಲ. ಗೋವಾದ ನೈಜ ಆಟ ಈ ಬಾರಿ ಕಂಡು ಬಂದಿಲ್ಲ. ಹೊಸ ಕೋಚ್ ಅವರ ರಣತಂತ್ರಕ್ಕೆ ಆಟಗಾರರು ಇನ್ನೂ ಹೊಂದಿಕೊಂಡಂತೆ ಕಾಣುತ್ತಿಲ್ಲ. ಗೋವಾ ವಿರುದ್ಧ ಬೆಂಗೂರು ಇಷ್ಟು ಸುಲಭವಾಗಿ ಇದುವರೆಗೂ ಗೋಲು ಗಳಿಸಿರಲಿಲ್ಲ. ಕ್ಲೈಟನ್ ಗಳಿಸಿದದ ಗೋಲು ಬೆಂಗೂರಿಗೆ ಆರಂಭಿಕ ಮುನ್ನಡೆ ಕಲ್ಪಿಸಿದ್ದು ಮಾತ್ರವಲ್ಲ, ಈ ಋತುವಿನಲ್ಲಿ ಪ್ರಥಮಾರ್ಧದಲ್ಲಿ ಗೋಲು ಗಳಿಸಿದ ಮೊದಲ ತಂಡವೆನಸಿತು.

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋವಾ ಹಾಗೂ ಬೆಂಗಳೂರು ತಂಡಗಳ ನಡುವಿನ ಪಂದ್ಯವೆಂದರೆ ಅಲ್ಲಿ ಕುತೂಹಲ ಮನೆ ಮಾಡಿರುತ್ತದೆ. ಕಳೆದ ಋತುವಿನಲ್ಲಿ ಇತ್ತಂಡಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದು, ಫುಟ್ಬಾಲ್ ಅಭಿಮಾನಿಗಳಿಗೆ ಸಂಭ್ರಮವನ್ನುಂಟುಮಾಡಿತ್ತು. ಈ ಬಾರಿ ಇತ್ತಂಡಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಬ್ಲೂಸ್ ಕಳೆದ ವರ್ಷ ಡಿಫೆನ್ಸ್ ವಿಭಾಗದಲ್ಲಿ ಬಲಿಷ್ಠವಾಗಿತ್ತು. ಆದರೆ ಫಾರ್ವರ್ಡ್ ವಿಭಾಗದ ಬಗ್ಗೆ ಯೋಚಿಸಬೇಕಾಗಿದೆ. ನಾಯಕ ಮತ್ತು ಸ್ಟಾರ್ ಸ್ಟ್ರೈಕರ್ ಸುನಿಲ್ ಛೆಟ್ರಿ ಅವರಿಗೆ ಕ್ರಿಸ್ಟಿಯನ್ ಒಪ್ಸೆತ್ ಮತ್ತು ಉದಾಂತ್ ಸಿಂಗ್ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದರೆ ಬೆಂಗಳೂರು ತಂಡವನ್ನು ನಿಯಂತ್ರಿಸುವುದು ಕಷ್ಟ. ಬ್ಯಾಕ್ ಲೈನ್ ನಲ್ಲಿ ಜುವಾನನ್, ರಾಹುಲ್ ಭಿಕೆ,  ಮತ್ತು ಫ್ರಾನ್ಸಿಸ್ಕೊ ಗೊನ್ಸಾಲಿಸ್ ಆಧಾರವಾಗಿದ್ದಾರೆ. ದಿಮಾಸ್ ಡೆಲ್ಗಾಡೊ, ಎರಿಕ್ ಪಾರ್ಥಲು,  ಮತ್ತು ಥೋಯಿ ಸಿಂಗ್ ಅವರಿಂದ ಮಿಡ್ ಬಲಿಷ್ಠವಾಗಿದೆ. ಕೋಚ್ ಬದಲಾವಣೆ ಹಾಗೂ ಪ್ರಮುಖ ಆಟಗಾರರ ನಿರ್ಗಮನ ಗೋವಾ ತಂಡದಲ್ಲಿ ಮೇಲ್ನೋಟಕ್ಕೆ ಒತ್ತಡವನ್ನು ತಂದಿರಬಹುದು. ಆದರೆ ಗೋವಾ ಅತ್ಯಂತ ಬಲಿಷ್ಠ ತಂಡ ಎಂಬುದನ್ನು ಮರೆಯುವಂತಿಲ್ಲ. ಬ್ರೆಂಡಾನ್ ಫೆರ್ನಾಂಡಿಸ್, ಲೆನ್ನಿ ರೊಡ್ರಿಗಸ್, ಸೈಮಿನ್ಲಿನ್ ಡೌಂಗಲ್ ಮತ್ತು ಎಡು ಬೆಡಿಯಾ ಅವರಿಂದ ಗೋವಾದ ಆಕ್ರಮಣ ಆಟಕ್ಕೆ ಯಾವುದೇ ಅಡ್ಡಿಯಾಗದು. ಫೆರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ರಿಡೀಮ್ ತಾಂಗ್ ಅವರನ್ನು ತಂಡ ಆಧರಿಸಿದೆ. ಇಗರ್ ಆಂಗುಲೊ ಮತ್ತು ಇಶಾನ್ ಪಂಡಿತ್ ತಂಡದ ಹೊಸ ಮುಖ. ಹಿಂದಿನ ಆರು ಪಂದ್ಯಗಳನ್ನು ಗಮನಿಸಿದಾಗ ಸೋಲು ಕಾಣದ ಬೆಂಗಳೂರು ಇಲ್ಲಿ ಫೇವರಿಟ್ ಎನಿಸಿದೆ.

Related Articles