ಜಮೈಕಾ ತಲ್ಲವಾಹ್ಸ್‌ ತಂಡ ಸೇರಿದ ಗೇಲ್‌

0
253

ಜಮೈಕಾ: ವೆಸ್ಟ್ ಇಡೀಸ್‌ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌ ಅವರು ಸತತ ಎರಡು ವರ್ಷಗಳ ಬಳಿಕ 2019ರ ಆವೃತ್ತಿಯ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಜಮೈಕಾ ತಲ್ಲವಾಹ್ಸ್‌ ತಂಡದ ಪರವಾಗಿ ಆಡಲಿದ್ದಾರೆ.

” 2019ರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ತವರು ತಂಡಕ್ಕೆ ಕ್ರಿಸ್‌ ಗೇಲ್‌ ಆಡುತ್ತಿರುವುದು ತುಂಬಾ ಸಂತಸ ತಂದಿದೆ. ಟಿ-20 ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಅವರನ್ನು ಜಮೈಕಾ ತಂಡಕ್ಕೆ ಬರಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಜತೆಗೆ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ” ಎಂದು ಜಮೈಕಾ ತಲ್ಲವಾಹ್ಸ್‌ ತಂಡದ ಸಿಓಓ ಜೇಪರ್ಸನ್‌ ಮಿಲ್ಲರ್ ತಿಳಿಸಿದರು.

ಕ್ರಿಸ್‌ ಗೇಲ್‌ ತಂಡದಲ್ಲಿದ್ದಾಗ 2013 ಹಾಗೂ 2016ರಲ್ಲಿ ಜಮೈಕಾ ತಲ್ಲವಾಹ್ಸ್‌ ಚಾಂಪಿಯನ್‌ ಆಗಿತ್ತು. 2016ರ ಆವೃತ್ತಿಯ ಬಳಿಕ ಕ್ರಿಸ್‌ ಗೇಲ್‌ ಸೇಂಟ್‌ ಕಿಟ್ಸ್‌ ಹಾಗೂ ನೆವೀಸ್‌ ಪ್ಯಾಟ್ರಿಯಟ್ಸ್‌ ತಂಡಗಳಲ್ಲಿ ಆಡಿದ್ದರು. ಇವರ ನಾಯಕತ್ವದಲ್ಲಿ 2017ರಲ್ಲಿ ಫೈನಲ್‌ ಹಾಗೂ 2018ರಲ್ಲಿ ಪ್ಲೇ-ಆಫ್‌ ತಲುಪಿತ್ತು.

ಸಿಪಿಎಲ್‌ನಲ್ಲಿ ಗೇಲ್‌ ಒಟ್ಟು 2,111 ರನ್‌ ಗಳಿಸಿದ್ದು, ಜಮೈಕಾ ಪರ ಒಟ್ಟು ಮೂರು ಶತಕ ಸಿಡಿಸಿದ್ದಾರೆ. 2019ರ ಆವೃತ್ತಿಯಲ್ಲಿ ಜಮೈಕಾ ತಲ್ಲವಾಹ್ಸ್‌ ತವರು ನೆಲದಲ್ಲಿ ಐದು ಪಂದ್ಯಗಳಾಡಲಿದೆ. ಪ್ರಸಕ್ತ ವರ್ಷದ ಸೆಪ್ಟಂಬರ್‌ 4 ರಿಂದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಪ್ರಾರಂಭವಾಗಿ ಅಕ್ಟೋಬರ್‌ 12 ರಂದು ಮುಕ್ತಾಯವಾಗಲಿದೆ.