Friday, October 4, 2024

ರ‍್ಯಾಲಿ ಆಫ್‌ ನಾಗಾಲ್ಯಾಂಡ್‌: ಕನ್ನಡಿಗ ಕರ್ಣ, ನಿಖಿಲ್‌ ಚಾಂಪಿಯನ್ಸ್‌

ಕೊಹಿಮಾ: ಬೆಂಗಳೂರಿನ ಅರ್ಕಾ ಮೋಟಾರ್ಸ್‌ನ ಕರ್ಣ ಕಡೂರ್‌ ಹಾಗೂ ಸಹಚಾಲಕ ನಿಖಿಲ್‌ ಪೈ ಭಾರತೀಯ ರಾಷ್ಟ್ರೀಯ ರ‍್ಯಾಲಿ ಚಾಂಷ್ಟ್ರೀಯನ್‌ಷಿಪ್‌ನ ನಾಲ್ಕನೇ ಸುತ್ತಿನ ಸ್ಪರ್ಧೆಯನ್ನು ಗೆದ್ದುಕೊಂಡು ಸಮಗ್ರ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.

2:48.4 ನಿಮಿಷಗಳ ಮುನ್ನಡೆಯೊಂದಿಗೆ ಕನ್ನಡಿಗರಾದ ಕರ್ಣ ಹಾಗೂ ನಿಖಿಲ್‌ ಪೈ ಎಂಆರ್‌ಎಫ್‌ಗೆ ಸತತ ಎರಡನೇ ಸಮಗ್ರ ಚಾಂಪಿಯನ್‌ಪಟ್ಟ ತಂದುಕೊಟ್ಟಿದ್ದಾರೆ. ಇಬ್ಬರೂ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿರುವ ಎಂಆರ್‌ಎಫ್‌ ಟಯರ್ಸ್‌ನ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅರುಣ್‌ ಮಮ್ಮೆನ್‌, “ದೇಶದ ಪ್ರತಿಷ್ಠಿತ ಐಎನ್‌ಆರ್‌ಸಿ ಪ್ರಶಸ್ತಿಯನ್ನು ಕರ್ಣ ಹಾಗೂ ನಿಖಿಲ್‌ ಗೆದ್ದಿರುವುದು ಹೆಮ್ಮೆಯ ಸಂಗತಿ. ಚೆನ್ನೈನಲ್ಲಿ ನಡೆದ ಎಪಿಆರ್‌ಸಿ 2022 ಪ್ರಶಸ್ತಿ ಗೆದ್ದ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ನಮ್ಮ ಉತ್ಪನ್ನಗಳು ಮತ್ತೊಮ್ಮೆ ತಮ್ಮ ನೈಜ ಸಾಮರ್ಥ್ಯವನ್ನು ತೋರಿಸಿವೆ. ʼThe Tyres We Race, are The Tyres You Buy’ ಎಂಬುದು ನಿತ್ಯ ಸತ್ಯವಾದುದು. ಇದು ನಮ್ಮ ಪಾಲಿಗೆ ಸತತ ಎರಡನೇ ಸಮಗ್ರ ಪ್ರಶಸ್ತಿ. 2021ರಲ್ಲಿ ಅದಿತ್ಯ ಠಾಕೂರ್‌ ಹಾಗೂ ವಿರೇಂದರ್‌ ಕಶ್ಯಪ್‌ ಪ್ರಶಸ್ತಿ ಗೆದ್ದಿದ್ದರು,” ಎಂದರು.

ನಾಗಲ್ಯಾಂಡ್‌ ಅಡ್ವೆಂಚರ್‌ ಕ್ಲಬ್‌ (ಎನ್‌ಎಸಿ) ಹಾಗೂ ನಾಗಲ್ಯಾಂಡ್‌ ಸರಕಾರ ಜಂಟಿಯಾಗಿ ಕೊಹಿಮಾದಲ್ಲಿ ಈ ಸಾಹಸ ಕ್ರೀಡೆಯನ್ನು ಆಯೋಜಿಸಿತ್ತು.

ಸ್ಯಾಪ್‌ ರೇಸಿಂಗ್‌ನ ಚೇತನ್‌ ಶಿವರಾಮ್‌ ಹಾಗೂ ದಿಲಿಪ್‌ ಶರ್ಮಾ ಮೊದಲ ರನ್ನರ್‌ಅಪ್‌ ಪ್ರಶಸ್ತಿ ಗೆದ್ದರೆ, ಚೆಟ್ಟಿನಾಡ್‌ ಸ್ಪೋರ್ಟಿಂಗ್‌ನ ಆದಿತ್ಯ ಠಾಕೂರ್‌ ಹಾಗೂ ವಿರೇಂದರ್‌ ಕಶ್ಯಪ್‌ ಎರಡನೇ ರನ್ನರ್‌ ಅಪ್‌ ಸ್ಥಾನ ಗಳಿಸಿದರು.

Related Articles