ಚೆನ್ನಾಗಿ ಆಡದೆ ಸೋತ ಚೆನ್ನೈ

0
253
ಸ್ಪೋರ್ಟ್ಸ್ ಮೇಲ್ ವರದಿ

ಎಡು ಬೇಡಿಯ  (12ನೇ ನಿಮಿಷ), ಫರಾನ್ ಕೊರೊಮಿನಾಸ್(53), ಹಾಗೂ ಮೌರ್ಥದ ಫಾಲ್  (80ನೇ ನಿಮಿಷ) ಗಳಿಸಿದ ಗೋಲಿನಿಂದ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ತಂಡವನ್ನು 3-1 ಗೋಲಿನಿಂದ ಮಣಿಸಿದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಜಯ ದಾಖಲಿಸಿದೆ. ಚೆನ್ನೈಯಿನ್ ಪರ ಎಲಿ ಸಾಬಿಯ (90+4)ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಆಕ್ರಮಣಕಾರಿ ಆಟ

೧೨ನೇ ನಿಮಿಷದಲ್ಲಿ ಎಡು ಬೇಡಿಯಾ ಗಳಿಸಿದ ಗೋಲಿನಿಂದ ಗೋವಾ ತಂಡ ಮುನ್ನಡೆ ಕಂಡಿತು. ಆ ನಂತರ ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಚೆನ್ನೈಯಿನ್ ಹೆಚ್ಚಿನ ಕಾಲ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು.  ಗೋವಾದ ಮೂವರು ಆಟಗಾರರು ಯಲ್ಲೋ ಕಾರ್ಡ್ ಪಡೆದರೆ, ಚೆನ್ನೈಯಿನ್ ತಂಡದ ಮೆಲಿಸನ್ ಆಲ್ವೇಸ್ ತಪ್ಪಿನ ಹೆಜ್ಜೆ ಇಟ್ಟರು. ಇತ್ತಂಡಗಳ ಆಟಗಾರರು ಫುಟ್ಬಾಲ್‌ಗೆ ವಿರುದ್ಧವಾದ ಚಟುವಟಿಕೆಯಲ್ಲಿ ಕೆಲ ತೊಡಗಿಕೊಂಡರು. ಇದಕ್ಕೆ ಉತ್ತರವಾಗಿ ಯಲ್ಲೋ ಕಾರ್ಡ್ ಪಡೆಯಬೇಕಾಯಿತು. ಗೋವಾ ಗೋಲಿನ ನಡುವೆ ಪ್ರಮಾದದ ಹೆಜ್ಜೆ ಇಟ್ಟಿದ್ದೇ ಹೆಚ್ಚು.

ಆರಂಭದಲ್ಲೇ ಮುನ್ನಡೆ

ಗೋವಾ ತಂಡ ನಿರೀಕ್ಷೆಯಂತೆ ಆಕ್ರಮಣಕಾರಿ ಆಟ ಪ್ರದರ್ಶಿಸಿ ಆರಂಭದಲ್ಲೇ ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿತು. ಮರಿನಾ ಅರೆನಾದಲ್ಲಿ ಚೆನ್ನೈ  ಪ್ರೇಕ್ಷಕರ ಅಬ್ಬರದ ಸಮ್ಮುಖದಲ್ಲಿ ಮೇಲುಗೈ ಸಾಧಿಸುವುದು ಅಷ್ಟು ಸುಲಭವಲ್ಲ. 12ನೇ ನಿಮಿಷದಲ್ಲಿ ಎಡು ಬೇಡಿಯಾ ಗಳಿಸಿದ ಗೋಲಿನಿಂದ ಗೋವಾ ಮುನ್ನಡೆ ಕಂಡಿತು. ಕಾರ್ನರ್ ಕಿಕ್ ರೋಡ್ರಿಗಸ್ ನಿಯಂತ್ರಣಕ್ಕೆ ಸಿಲುಕಿತು. ಮಿಡ್‌ಫೀಲ್ಡರ್ ರೋಡ್ರಿಗಸ್ ಚೆಂಡನ್ನು ಬಂದ ವೇಗದಲ್ಲೇ ಎಡು ಬೇಡಿಯಾ ಅವರತ್ತ ರವಾನಿಸಿದರು. ಅನಿರುಧ್  ತಾಪಾ ನಿಯಂತ್ರಿಸಲು ಯತ್ನಿಸಿದರೂ ಗೋಲ್ ಬಾಕ್ಸ್‌ನ ಎಡಬದಿಗೆ ಗುರಿ ಇಟ್ಟು ಹೊಡೆದ ಬೇಡಿಯಾ ತಂಡಕ್ಕೆ ಮೊದಲ ಗೋಲು ತಂದಿತ್ತರು.

ಗೋವಾಕ್ಕೆ ಡಿಫೆನ್ಸ್ ಸಮಸ್ಯೆ

ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಅಂಕ ಹಂಚಿಕೊಂಡಿರುವ  ಗೋವಾ ತಂಡಕ್ಕೆ ಡಿಫೆನ್ಸ್ ವಿಭಾಗದ ಸಮಸ್ಯೆ ಇದೆ. ಕಳೆದ ವರ್ಷ ಆಡಿರು ಹದಿನೆಂಟು ಪಂದ್ಯಗಳಲ್ಲಿ ಗೋವಾ ಕ್ಲೀನ್ ಶೀಟ್ ಸಾಧನೆ ಮಾಡಿರುವುದು ಎರಡು ಬಾರಿ ಮಾತ್ರ. ಅಲ್ಲದೆ 28 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಪ್ಲೇ ಆಫ್  ಹಂತಕ್ಕೆ ತಲುಪಿದ ತಂಡವೊಂದು ಎದುರಾಳಿ ತಂಡಕ್ಕೆ ನೀಡಿರುವ ಅತಿ ಹೆಚ್ಚು ಗೋಲು ಇದಾಗಿದೆ.
ಅನುಭವಿ ಗೋಲ್‌ಕೀಪರ್ ಲಕ್ಷ್ಮೀಕಾಂತ್ ಕಟ್ಟಿಮನಿ ಅವರು ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರದ ಕಾರಣ ಈ ಬಾರಿ ಯುವ ಗೋಲ್‌ಕೀಪರ್ ಮೊಹಮ್ಮದ್ ನವಾಜ್‌ಗೆ ಅವಕಾಶ ಕಲ್ಪಿಸಲಾಗಿದೆ. ಅನುಭವದ ಕೊರತೆಯ ಕಾರಣ ನವಾಜ್ ಮೊದಲ ಪಂದ್ಯದಲ್ಲೇ ಪ್ರಮಾದ ಎಸಗಿದ್ದರು. ಆದರೆ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಗೋವಾ ತಂಡ ಹಾಲಿ ಚಾಂಪಿಯನ್ ವಿರುದ್ಧ  ಹೋರಾಟಕ್ಕೆ ಸಜ್ಜಾಯಿತು.

ಫೇವರಿಟ್ ಚೆನ್ನೈ ಆದರೆ?

ಇತ್ತಂಡಗಳು ಜಯ ದಾಖಲಿಸದೇ ಇದ್ದ ಕಾರಣ ಶನಿವಾರದ ಪಂದ್ಯ ಪ್ರಮುಖವಾಯಿತು. ಮನೆಯಂಗಣದಲ್ಲಿ ಚೆನ್ನೈಯಿನ್ ಎಫ್ಸಿ ಗೆಲ್ಲುವ ಫೇವರಿಟ್. ಗೋವಾ ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಡ್ರಾ ಕಂಡಿತ್ತು. ಚೆನ್ನೈಯಿನ್ ತಂಡ ಬೆಂಗಳೂರು ವಿರುದ್ಧ ಸೋಲನುಭವಿಸಿತ್ತು. ಚೆನ್ನೈಯಿನ್ ತಂಡಕ್ಕೆ ಮನೆಯಂಗಣದಲ್ಲಿ ಇದುವರೆಗೂ 63 ಗೋಲುಗಳನ್ನು ಗಳಿಸಿದೆ. ಗೋವಾ 62 ಗೋಲುಗಳನ್ನು ಗಳಿಸಿದೆ. ಚೆನ್ನೈನಲ್ಲಿ ಗೋವಾ ತಂಡ ಪ್ರಭುತ್ವ ಸಾಧಿಸಿರುವುದು ವಿಶೇಷ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಗಳಿಸಿದೆ. ಆದರೆ ಈ ಬಾರಿಯ ಲೆಕ್ಕಾಚಾರವೇ ಬೇರೆ ಎಂಬಂತೆ ಇತ್ತಂಡಗಳು ಅಂಗಣಕ್ಕಿಳಿದವು.