Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೆಸರಿನ ಹೊಂಡ ಮುಚ್ಚಿ ಆಡಲು ಅಂಗಣ ಕಟ್ಟಿದ ಸಾಧಕ ದಿನಕರ

ಎಸ್‌ಎಂಎಸ್‌ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರು, ಬೆಳ್ಳಿಪ್ಪಾಟಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿಯ ಪ್ರಧಾನ ಕೋಚ್‌, ಗೆಳೆಯ ವಿಜಯ ಆಳ್ವಾ ಅವರು ಶನಿವಾರ ರಾತ್ರಿ ಒಂದು ಗ್ರಾಫಿಕ್‌ ಡಿಸೈನ್‌ ಕಳುಹಿಸಿ, “ಸರ್‌ ನಾಳೆ ಮ್ಯಾಚ್‌ ಇದೆ ನೀವು ಬರಬೇಕು,” ಎಂದು ಬರೆದಿದ್ದರು. ಆ ಗ್ರಾಫಿಕ್‌ ಡಿಸೈನ್‌ನಲ್ಲಿರುವ ಮಾಹಿತಿಗಳನ್ನು ಓದಿದಾಗ ಅಚ್ಚರಿಯಾಯಿತು. ಉಡುಪಿ ಜಿಲ್ಲೆಯ ಕೋಟ ಸಮೀಪದ ಮಣೂರು ಪೇಟೆ ಹತ್ತಿರದ ಕಂಬಳ ಗದ್ದೆಯಲ್ಲಿರು ಉಪ್ನೀರ್‌ ಜಡ್ಡಿನಲ್ಲಿ ಪಂದ್ಯ, “ಸರ್‌ ಲೆದರ್‌ ಬಾಲ್‌ ಅಥವಾ ಟೆನಿಸ್‌ ಬಾಲ್‌ ಪಂದ್ಯವೋ?” ಅಂತ ಕೇಳಿದೆ. “ಲೆದರ್‌‌ ಬಾಲ್‌ ಸರ್‌” ಅಂದ್ರು. ನನಗೆ ಎಲ್ಲಿಲ್ಲದ ಅಚ್ಚರಿ. ನಮ್ಮಲ್ಲಿ ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜು ಬಿಟ್ಟರೆ ಲೆದರ್‌ ಬಾಲ್‌ ಪಂದ್ಯಗಳನ್ನು ಆಡಿಸುವ ಅಂಗಣ ಬಹಳ ವಿರಳ. ಅದರಲ್ಲೂ ಚಿಕ್ಕ ಊರಾದ ಮಣೂರಿನಲ್ಲಿ ಪಂದ್ಯ ನಡೆಯುತ್ತಿದೆ ಎಂದಾಗ ಮತ್ತಷ್ಟು ಅಚ್ಚರಿಯಾಯಿತು.” ಸರ್‌, ಕಾರವಾರ, ಚಿಕ್ಕಮಗಳೂರು ಮತ್ತು ಬ್ರಹ್ಮಾವರದ ತಂಡಗಳು ಪಾಲ್ಗೊಳ್ಳುತ್ತಿವೆ,” ಎಂದಾಗ ಇನ್ನೂ ಅಚ್ಚರಿ. “ಬರುತ್ತೇನೆ ಸರ್‌” ಎಂದು ಹೇಳಿ, ಭಾನುವಾರ ಬೆಳಿಗ್ಗೆ ಮಣೂರು ರಾಷ್ಟ್ರೀಯ ಹೆದ್ದಾರಿಗೆ ಚಾಚಿಕೊಂಡಿರುವ ರಸ್ತೆಯಲ್ಲಿ ಸಾಗಿ ಹೋದರೆ ಅಲ್ಲೊಂದು ಅದ್ಭುತ ಕಾದಿತ್ತು. Dinakar Poojary who fill the water logging area and built a cricket ground.

ಕೆಸರಿನ ಹೊಂಡದಲ್ಲಿ ಅರಳಿ ಅಂಗಣ: ಉಪ್ನೀರ್‌ ಜಡ್ಡಿನ ಕೆಸರಿನ ಹೊಂಡದಲ್ಲಿ ಅರಳಿದ ಅಂಗಣದ ಸುತ್ತಲಿನ ಪ್ರದೇಶವನ್ನು ಕಂಡಾಗ ಈ ಕ್ರೀಡಾಂಗಣವನ್ನು ಹೇಗೆ ಮಾಡಿರಬಹುದು ಎಂದು ಯೋಚಿಸುವಂತಾಗುತ್ತದೆ, ಉಪ್ಪು ನೀರಿನ ಹೊಂಡಗಳು, ಕೆಸರಿನ ರಾಡಿ, ಮುಳ್ಳಿನ ಪೊದೆಗಳು, ಕಾಲಿಟ್ಟರೆ ಹುಗಿದು ಹೋಗುವ ಅಪಾಯ ಇದನ್ನು ಕ್ರೀಡಾಂಗಣವನ್ನಾಗಿ ರೂಪಸಿದ್ದು ಸ್ಥಳೀಯ ಯುವಕ ದಿನಕರ ಪೂಜಾರಿ. ದಿನಕರ ಪೂಜಾರಿ 2008ರ ವರೆಗೂ ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಿಕೊಂಡಿದ್ದರು. ಆದರೆ ಅಣ್ಣ ಉದಯ ಪೂಜಾರಿ ಅವರ ದುರಂತ ಸಾವಿನ ಬಳಿಕ ಕ್ರಿಕೆಟ್‌ ಆಟದಿಂದ ದೂರವಾಗಿ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಊರಿನ ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡಬೇಕು, ಈ ಊರಿನ ಬಡ ಮಕ್ಕಳು ಇಲ್ಲಿಯೇ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಡಬೇಕೆಂಬುದು ಅವರ ಉದ್ದೇಶವಾಗಿತ್ತು.

1500 ಲೋಡ್‌ ಮಣ್ಣಿನಿಂದ ಹೊಂಡ ಮುಚ್ಚಿದರು!: ಉಪ್ನೀರ್‌ ಜೆಡ್ಡಿನ ಮಣ್ಣನ್ನು ಜನ ಬೇಕೆಂದ ಹಾಗೆ ತಮ್ಮ ಮನೆಗೆ ಕೊಂಡೊಯ್ದರು. ಇದರಿಂದಾಗಿ ಅಲ್ಲಿ ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣಗೊಂಡವು. ಅಲ್ಲಿದ್ದ ಸುಮಾರು ಎರಡು ಎಕರೆ ಜಾಗ ಯಾವುದೇ ಪ್ರಯೋಜನಕ್ಕೆ ಬಾರದಾಯಿತು. ದಿನಕರ ಅವರು 2018ರಲ್ಲಿ ಈ ಹೊಂಡವನ್ನು ಮುಚ್ಚಿ ಕ್ರಿಕೆಟ್‌ ಆಡಲು ಬಳಸಿದರೆ ಹೇಗೆ? ಎಂದು ಮನದಲ್ಲೇ ಯೋಚಿಸಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸುವ ದಿನಕರ ಅವರ ಯೋಚನೆಗೆ ಪ್ರಜ್ವಲ್‌, ಸುದೀಪ್‌ ಪೂಜಾರಿ ಹಾಗೂ ಕಾರ್ತಿಕ್‌ ಸೇರಿದಂತೆ ಊರಿನ ಇತರ ಯುಕವರು ಬೆಂಬಲ ನೀಡಿದರು. ಬಿಡುವಿದ್ದಾಗಲೆಲ್ಲ ಒಂದೆರಡು ಲೋಡ್‌ ಮಣ್ಣನ್ನು ತಂದು ಹೊಂಡ ಮುಚ್ಚುತ್ತಿದ್ದರೂ ಮಳೆಗಾಲದಲ್ಲಿ ಅದು ನೀರಿನಿಂದ ಆವೃತವಾಗುತ್ತಿತ್ತು. ಆದರೆ ದಿನಕರ ಅವರು ಹೊಂಡ ಮುಚ್ಚುವ ಕಾರ್ಯವನ್ನು ನಿಲ್ಲಿಸಲಿಲ್ಲ. ಕಳೆದ ಆರು ವರ್ಷಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ಲೋಡ್‌ ಮಣ್ಣನ್ನು ಹೊಂಡಕ್ಕೆ ಸುರಿದರು. 2025ರ ಜನವರಿ 11 ಅಂದರೆ ಪಂದ್ಯ ನಡೆಯುವ ಹಿಂದಿನ ದಿನವೂ ಅಂಗಣಕ್ಕೆ ಮಣ್ಣನ್ನು ತುಂಬಿಸುವ ಕೆಲಸ ಮಾಡಿದ್ದಾರೆ.

ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೆರವು: ಯಾವಾಗಲೂ ಸಮಾಜಮುಖಿ ಕೆಲಸಗಳಿಗೆ ನೆರವಾಗು ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ 5 ಲಕ್ಷ ರೂ. ಈ ಅಂಗಣಕ್ಕಾಗಿ ಸರಕಾರದಿಂದ ಬಿಡುಗಡೆ ಮಾಡಿದ್ದಾರೆ. ಅದು ರಾಯಧನ ಎಂದು 2.5 ಲಕ್ಷ ರೂ, ಕಡಿತವಾಗಿ ದಿನಕರ ಅವರ ಕೈಗೆ 2.5 ಲಕ್ಷ ರೂ ಸಿಕ್ಕಿತ್ತು. ಆದರೆ ದಿನಕರ್‌ ಅವರ ಕೈಯಿಂದ ವ್ಯಯವಾದ ಮೊತ್ತ 25 ಲಕ್ಷ ರೂ,ಗಳಿಗೂ ಹೆಚ್ಚು. “ಇದು ಊರ ಯುವಕರ ನೆರವಿಗೆ ಸಿಗಲಿ ಎಂಬುದೇ ನನ್ನ ಉದ್ದೇಶವಾಗಿತ್ತು. ಸ್ವಾರ್ಥ ಎಂಬುದಿಲ್ಲ.” ಎನ್ನುವ ದಿನಕರ್‌‌ ಅವರ ಮಾತಿನಲ್ಲಿ ಪ್ರಾಮಾಣಿಕತೆ ಸ್ಪಷ್ಟವಾಗಿತ್ತು.

ಸ್ಥಳೀಯ ಯುವಕರಿಗೆ ಉಚಿತ ತರಬೇತಿ: ಈ ಅಂಗಣದಲ್ಲಿ ಸ್ಥಳೀಯ ಯುವಕರಿಗೆ ಉಚಿತವಾಗಿ ತರಬೇತಿ ನೀಡುವ ಗುರಿ ಹೊಂದಿರುವುದಾಗಿ ದಿನಕರ್‌ ಅವರು ಹೇಳಿದ್ದಾರೆ, “ಇಲ್ಲಿ ಸುತ್ತಮುತ್ತ ಆಡಲು ಯಾವುದೇ ಕ್ರೀಡಾಂಗಣವಿಲ್ಲ. ತರಬೇತಿ ಪಡೆಯಲು ದೂರ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಈ ಕಾರಣದಿಂದ ಒಬ್ಬರು ತರಬೇತುದಾರರನ್ನು ನೇಮಿಸಿ ಉಚಿತ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದ್ದೇವೆ,” ಎಂದು ದಿನಕರ್‌ ಪೂಜಾರಿ ಹೇಳಿದ್ದಾರೆ, “ನಾಳೆಯ ದಿನ ಯಾವುದೇ ತಕರಾರು ಬರಬಾರದು. ನಾನು ಈ ಅಂಗಣವನ್ನು ನಿರ್ಮಾಣ ಮಾಡಿರುವುದು ಸದುದ್ದೇಶದಿಂದ. ಇದರ ಮೂಲ ಸ್ವರೂಪ ನೋಡಿದರೆ ಇಲ್ಲಿ ಆಡುವುದು ಬಿಡಿ ನೋಡಲೂ ಆಗುತ್ತಿರಲಿಲ್ಲ. ಹೊಳೆ ಹೂಳೆತ್ತದೆ ಈ ಪ್ರದೇಶವೆಲ್ಲ ಕುರುಚಲು ಗಿಡ, ಮುಳ್ಳು ಮತ್ತು ಹೊಂಡದಿಂದ ಕೂಡಿತ್ತು. ಈಗ ಒಂದು ರೂಪ ಬಂದಿದೆ. ಇದನ್ನು ಭೋಗ್ಯಕ್ಕೆ ಪಡೆಯುವುದೋ, ಅಥವಾ ಇನ್ನಾದರೂ ಬೇರೆ ರೀತಿಯಲ್ಲಿ ಕಾನೂನು ಪ್ರಕಾರ ಬಳಕೆ ಮಾಡುವುದೋ ಎನ್ನುವುದರ ಬಗ್ಗೆ ಸಂಸದರೊಂದಿಗೆ ಚರ್ಚಿಸಲಾಗುವುದು,” ಎಂದು ದಿನಕರ್‌ ಸ್ಪಷ್ಟಪಡಿಸಿದ್ದಾರೆ.

ಹಾಲಿ ಮತ್ತು ಮಾಜಿ ಸಂಸದರ ಮೆಚ್ಚುಗೆ: ಭಾನುವಾರ ಚಿಕ್ಕಮಗಳೂರು, ಕಾರವಾರ ಹಾಗೂ ಬ್ರಹ್ಮಾವರ ತಂಡಗಳ ನಡುವೆ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ತ್ರಿಕೋನ ಸರಣಿ ಪಂದ್ಯ ನಡೆದಿತ್ತು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಕ್ರೀಡಾಂಗಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲ, ದಿನಕರ ಅವರ ಸಾಹಸದ ಬಗ್ಗೆ ಗುಣಗಾನ ಮಾಡಿದ್ದಾರೆ. “ಇದೊಂದು ಅದ್ಭುತವಾದ ಯೋಜನೆ. 13 ವರ್ಷ ವಯೋಮಿತಿಯ ಮಕ್ಕಳಿಗೆ ಟೂರ್ನಿಯನ್ನು ಈ ಹೊಸ ಅಂಗಣದಲ್ಲಿ ಆಯೋಜಿಸಿರುವುದು ಖುಷಿಯ ಸಂಗತಿ. ಚಿಕ್ಕಮಗಳೂರು ಮತ್ತು ಕಾರವಾರ ಮಕ್ಕಳು ಬಂದು ಈ ಪುಟ್ಟ ಊರಿನಲ್ಲಿ ಲೆದರ್‌ ಬಾಲ್‌ ಕ್ರಿಕೆಟ್‌ ಆಡುತ್ತಿರುವುದು ಭವಿಷ್ಯದ ದೃಷ್ಟಯಿಂದ ಉತ್ತಮವಾದುದು. ಗೆದ್ದಾಗ ಕಾಲೆಳೆಯುವವರು ಬಹಳ ಜನ ಇರುತ್ತಾರೆ, ಆದರೆ ನಾವು ನಮ್ಮ ಸಾಧನೆಯ ಹಾದಿಯಲ್ಲಿ ನಿರಂತರವಾಗಿ ಸಾಗಬೇಕು. ಸೋಲ-ಗೆಲುವುದ ಎರಡನ್ನೂ  ಗೌರವದಿಂದ ಸ್ವೀಕರಿಸಬೇಕು. ಇಲ್ಲಿ ಆಡಿದ ಮಕ್ಕಳು ಭವಿಷ್ಯದಲ್ಲಿ ರಾಜ್ಯ ಹಾಗೂ ಭಾರತ ತಂಡದಲ್ಲಿ ಆಡುವ ಪ್ರತಿಭಾವಂತರಾಗಿ ಬೆಳೆಯಲಿ,” ಎಂದರು.

ಮಾಜಿ ಶಾಸಕ ಜಯಪ್ರಕಾಶ್‌ ಹೆಗ್ಡೆ ಅವರು ಕ್ರೀಡಾಂಗಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, “ಇಂದಿನ ಶ್ರೇಷ್ಠ ಆಟಗಾರರು ನಿಮಗೆ ಮಾದರಿಯಾಗಲಿ. ವಿರಾಟ್‌ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಈಗ ಫರ್ಮ್‌ನಲ್ಲಿ ಇಲ್ಲದೇ ಇರಬಹುದು, ಆದರೆ ಅವರ ಹಿಂದಿನ ಸಾಧನೆಗಳು ನಿಮಗೆ ಆದರ್ಶವಾಗಬೇಕು.,” ಎಂದು ಯುವ ಕ್ರಿಕೆಟಿಗರಿಗೆ ಕರೆ ನೀಡಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.