Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಶಾಲೆಗೆ ನಡೆದೇ ಹೋಗುತ್ತಿದ್ದ ದಶರಥ ನಡಿಗೆಯಲ್ಲೇ ಚಿನ್ನ ಗೆದ್ದ

ರಾಯ್ಪುರ: ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳೇ ಬದುಕಿನ ಹಾದಿಯಲ್ಲಿ ಯಶಸ್ಸನ್ನು ತಂದುಕೊಡುತ್ತವೆ ಎಂಬುದಕ್ಕೆ ನಮ್ಮಮುಂದೆ ಹಲವಾರು ನಿದರ್ಶನಗಳಿವೆ. ಅಂಥ ನಿದರ್ಶನಗಳಲ್ಲಿ ಒಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ದಶರಥ ನಿಂಗಪ್ಪ ತಳವಾರ ಅವರ ಬದುಕಿನ ಕತೆ. Dasharatha Talawara, who used to walk to school as a child, is now one of the country’s best race walkers and has won gold at the Kehlo India Tribal Games.

ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಪುರುಷರ 10,000 ಮೀಟರ್‌ ರೇಸ್‌ ವಾಕ್‌ನಲ್ಲಿ ದಶರಥ ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕದವರೇ ಆದ ದರ್ಶನ್‌ ಬರಮಪ್ಪ ಬಗಾಡಿ ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ದಶರಥ ಬಡ ಕುಟುಂಬದಿಂದ ಬಂದ ಕ್ರೀಡಾಪಟು ಎನ್ನುವುದಕ್ಕಿಂತ ಬಡತನವೇ ಅವರನ್ನು ಕ್ರೀಡಾಪಟುವನ್ನಾಗಿ ಮಾಡಿತು ಎನ್ನಬಹುದು. ಕಡಬಗತ್ತಿಯಲ್ಲಿರುವ ದಶರಥ ಅವರ ಮನೆಯಿಂದ ಪ್ರಾಥಮಿಕ ಶಾಲೆಗೆ ಹೋಗಲು ಬಹಳ ದೂರ ನಡೆಯಬೇಕಾಗಿತ್ತು. ನಿತ್ಯವೂ 10 ಕೀಮೀ ನಡೆಯುತ್ತಿದ್ದ ದಶರಥನಲ್ಲಿ ನೋವಿನ ನಡುವೆಯೂ ಒಬ್ಬ ಕ್ರೀಡಾಪಟು ಹುಟ್ಟಿಕೊಂಡಿದ್ದ. ಯಾರೋ ಕ್ರೀಡಾಸಕ್ತರು “ಕ್ರೀಡೆಯಲ್ಲಿ ರೇಸ್‌ವಾಕ್‌ ಇದೆ ಅದರಲ್ಲಿ ಸ್ಪರ್ಧೆ ಮಾಡು” ಎಂದು ಸಲಹೆ ನೀಡಿದರು. ಇದರಿಂದಾಗಿ 9ನೇ ತರಗತಿಯಿಂದಲೇ ರೇಸ್‌ವಾಕ್‌ನಲ್ಲಿ ಸ್ಪರ್ಧಿಸಲು ಆರಂಭಿಸಿದ ದಶರಥ ಮತ್ತೆ ಹಿಂದಿರುಗಿ ನೋಡಲಿಲ್ಲ. ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಪದಕಗಳನ್ನು ಗೆಲ್ಲುತ್ತ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಆತ್ಮವಿಶ್ವಾಸ ಮತ್ತು ಅನುಭವ ಹೊಂದಿದ್ದಾರೆ.

ಕೃಷಿಕರಾದ ನಿಂಗಪ್ಪ ಮತ್ತು ಮಲ್ಲವ್ವ ದಂಪತಿಯ ಮಗನಾಗಿರುವ ದಶರಥ ರೇಸ್‌ವಾಕ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಬುಧವಾರ ನಡೆದ 10000 ಮೀ ರೇಸ್‌ ವಾಕ್‌ನಲ್ಲಿ ದಶರಥ 45 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. 10K ರೇಸ್‌ ವಾಕ್‌ನಲ್ಲಿ 41 ನಿಮಿಷಗಳಲ್ಲಿ ಗುರಿ ತಲುಪಿದ್ದು ದಶರಥ ಅವರ ವೈಯಕ್ತಿಕ ಉತ್ತಮ ಸಾಧನೆ. 20೦೦೦ ಮೀ. ರೇಸ್‌ ವಾಕ್‌ನಲ್ಲಿ ದಶರಥ 1 ಗಂಟೆ 30 ನಿಮಿಷಗಳಲ್ಲಿ ಗುರಿ ತಲುಪಿರುತ್ತಾರೆ.

ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತಿ ಪಡೆಯುತ್ತಿರುವ ದಶರಥ ಅವರಿಗೆ ಅಶೋಕ್‌ ಮಂಟೂರ್‌ ಹಾಗೂ ಜತಿನ್‌ ಅವರು ತರಬೇತಿ ನೀಡಿರುತ್ತಾರೆ. ಮುಂದಿನ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಾಣಬೇಕೆಂಬುದು ದಶರಥ ಅವರ ಗುರಿಯಾಗಿದೆ.

“ಚಿಕ್ಕಂದಿನಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದುದು ರೇಸ್‌ವಾಕ್‌ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ನೆರವಾಯಿತು. ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ ಉತ್ತಮ ವೇದಿಕೆ. ಇಲ್ಲಿ ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ. ನನ್ನ ಕ್ರೀಡಾ ಬದುಕಿಗೆ ಅವಕಾಶ ಕೊಟ್ಟ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳಿಗೆ ನಾನು ಚಿರ ಋಣಿಯಾಗಿರುವೆ. ತರಬೇತುದಾರರು ಉತ್ತಮ ರೀತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಅಂತಾರಾಷ್ಟೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಇದೆ, ಅದಕ್ಕಾಗಿ ನಿರಂತರ ಶ್ರಮವಹಿಸುವೆ,” ಎಂದು ದಶರಥ ಜಯದ ನಂತರ sportsmail ಗೆ ತಿಳಿಸಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.