ಸ್ಪೋರ್ಟ್ಸ್ ಮೇಲ್ ವರದಿ
ಫೈನಲ್ ಪಂದ್ಯದಲ್ಲಿ ಜಾನ್ಸನ್ ಹಂಗಳೂರು ತಂಡವನ್ನು ಸೋಲಿಸಿದ ಅಜಯ್ ಕುಂಜಿಗುಡಿ ತಂಡ ಸಹನಾ ಅಕ್ವೆಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕೋಟೇಶ್ವರ ಆಯೋಜಿಸಿದ ಚೊಚ್ಚಲ ಬಾಕ್ಸ್ ಕ್ರಿಕೆಟ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯವನ್ನು ಹೊಂದಿರುವ ಸಹನಾ ಅಕ್ವೆಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಗೆ ಮಾಜಿ ಸಚಿವ ಮತ್ತು ಪ್ರಸಕ್ತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಚಾಲನೆ ನೀಡಿದರು.
ಕರಾವಳಿ ಜಿಲ್ಲೆಯಲ್ಲೇ ಪ್ರಥಮ ಎನ್ನಬಹುದಾದ ಸಹನಾ ಅಕ್ವೆಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡ್ಮಿಂಟನ್ ಕೋರ್ಟ್, ಈಜು ಕೊಳ ಮತ್ತು ಫುಟ್ಬಾಲ್ ಮತ್ತು ಬಾಕ್ಸ್ ಕ್ರಿಕೆಟ್ ವ್ಯವಸ್ಥೆಯನ್ನು ಹೊಂದಿದೆ. “ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ತಾರೆ ಅನೂಪ್ ಶ್ರೀದರ್ ಮತ್ತು ವಿಜಯ ಲ್ಯಾನ್ಸಿ ಅವರ ಅಕಾಡೆಮಿ ಮೂಲಕ ಇಲ್ಲಿ ಮುಂದಿನ ದಿನಗಳಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡಲಾಗುತ್ತದೆ. ಅಂತಾರಾಷ್ಟ್ರೀಯ ಈಜು ಪಟುಗಳಿಂದ ಇಲ್ಲಿ ಈಜು ತರಬೇತಿ ನೀಡಲಾಗುವುದು, ಅಲ್ಲದೆ ಇಲ್ಲಿ ಯಕ್ಷಗಾನ, ಭರತನಾಟ್ಯ, ಸಂಗೀತ, ವಾದ್ಯಸಂಗೀತ ಮೊದಲಾದ ತರಬೇತಿ ನೀಡಲು ಪ್ರತ್ಯೇಕ ಅಕಾಡೆಮಿ ನಿರ್ಮಿಸಲಾಗಿದೆ,” ಎಂದು ಸಹನಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಅವರು ತಿಳಿಸಿದರು.
ಬಾಕ್ಸ್ ಕ್ರಿಕೆಟ್ ವೈಯಕ್ತಿಕ ಪ್ರಶಸ್ತಿ:
ಅಜಯ್ ಕುಂಜಿಗುಡಿ ತಂಡದ ಕಿಶೋರ್ ಉತ್ತಮ ಬ್ಯಾಟ್ಸ್ಮನ್, ಪ್ರಸಾದ್ ನೇರಳಕಟ್ಟೆ ಉತ್ತಮ ಬೌಲರ್, ಜಾನ್ಸನ್ ಹಂಗ್ಳೂರು ತಂಡದ ಅನಿಲ್ ಖಾರ್ವಿ ಉತ್ತಮ ವಿಕೆಟ್ ಕೀಪರ್, ಅಜಯ್ ಕುಂಜಿಗುಡಿ ತಂಡದ ಮನೀಶ್ ಶೆಟ್ಟಿ ಸರಣಿ ಶ್ರೇಷ್ಠ ಮತ್ತು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೆ ಅಜಯ್ ಕುಂಜಿಗುಡಿ ತಂಡದ ಪ್ರದೀಪ್ ಶೆಟ್ಟಿ ಆಯ್ಕೆಯಾದರು.
ಸಮಾರೋಪ:
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎರಡು ದಿನಗಳ ಕಾಲ ನಡೆದ ಕ್ರೀಡಾ ಹಬ್ಬದಲ್ಲಿ ಪಾಲ್ಗೊಂಡವರಿಗೆ ಮತ್ತು ಯಶಸ್ಸಿಗಾಗಿ ಶ್ರಮಿಸಿದವರಿಗೆ ಸಹನಾ ಗ್ರೂಪ್ ನ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಅವರು ಧನ್ಯವಾದ ಸಲ್ಲಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶೆಟ್ಟಿ ಐಸ್ ಪ್ಲ್ಯಾಂಟ್ ಮಾಲೀಕ ರಂಜಿತ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಗುತ್ತಿಗೆದಾರರಾದ ರಾಜೀವ ಶೆಟ್ಟಿ, ಸೇಂಟ್ ಆಂಥೊನಿ ಕನ್ಸ್ಟ್ರಂಕ್ಷನ್ ನ ರೋವನ್ ಡಿʼಕೋಸ್ಟಾ, ಶ್ರೇಯಾಂಕ್ ಶೆಟ್ಟಿ ಮತ್ತು ನಿಹಾಲ್ ಶೆಟ್ಟಿ ಅವರು ಪಾಲ್ಗೊಂಡಿದ್ದರು.