Friday, December 13, 2024

ರಣಜಿ ಟ್ರೋಫಿ: ಕರ್ನಾಟಕಕ್ಕೆ ಮೊದಲ ಜಯ

ಮೈಸೂರು, ಡಿ 1 :

ದೇವ್‌ದತ್ತ್ ಪಡಿಕಲ್‌(77) ಹಾಗೂ ಡಿ.ನಿಶ್ಚಲ್‌(61) ಅವರ ಅಮೋಘ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ತಂಡ, ರಣಜಿ ಟ್ರೋಫಿ ಎಲೈಟ್‌ ಗುಂಪು”ಎ” ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಇಂದು ಮಹಾರಾಷ್ಟ್ರವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

ಇದರೊಂದಿಗೆ, ಪ್ರಸಕ್ತ ಆವೃತ್ತಿಯಲ್ಲಿ ಕರ್ನಾಟಕಕ್ಕೆ ಮೊದಲ ಜಯ ಇದಾಗಿದೆ. ಈ ಗೆಲುವಿನೊಂದಿಗೆ ನೆರೆದಿದ್ದ ಅಪಾರ ತವರು ಅಭಿಮಾನಿಗಳ ಪ್ರೀತಿಗೆ ವಿನಯ್‌ ಪಡೆ ಪಾತ್ರವಾಯಿತು.

ಸಾಂಸ್ಕೃತಿಕ ನಗರಿಯ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ 54 ರನ್‌ ಗಳಿಂದ ನಾಲ್ಕನೇ ಹಾಗೂ ಅಂತಿಮ ದಿನ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ, ನಿರೀಕ್ಷೆಯಂತೆ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಇಂದು ಬ್ಯಾಟಿಂಗ್‌ ಮುಂದುವರಿಸಿದ ದೇವ್‌ದತ್ತ್ ಪಡಿಕಲ್‌ ಹಾಗೂ ಡಿ.ನಿಶ್ಚಲ್‌ ಜೋಡಿ ಮಹಾರಾಷ್ಟ್ರ ಬೌಲರ್‌ಗಳನ್ನು ಬಲವಾಗಿ ಕಾಡಿತು. ಮೊದಲನೇ ವಿಕೆಟ್‌ಗೆ ಈ ಜೋಡಿ ತಲಾ ಅರ್ಧ ಶತಕಗಳೊಂದಿಗೆ 121 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೂಯಿತು.

ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ ದೇವ್‌ದತ್ತ್‌ ಪಡಿಕಲ್‌, ಪ್ರಥಮ ಇನಿಂಗ್ಸ್‌ನಲ್ಲಿ ಮಾಡಿದ ತಪ್ಪನ್ನು ದ್ವಿತೀಯ ಇನಿಂಗ್ಸ್ ನಲ್ಲಿ  ಪುನರಾವರ್ತಿಸಲಿಲ್ಲ. ಆಡಿದ 128 ಎಸೆತಗಳಲ್ಲಿ ಅವರು ಒಂದು ಸಿಕ್ಸರ್‌ ಹಾಗೂ 11 ಬೌಂಡರಿಯೊಂದಿಗೆ ಒಟ್ಟು 77 ರನ್‌ ಗಳಿಸಿದರು. ಬಳಿಕ, ಸತ್ಯಜೀತ್‌ ಬಚಾವ್‌ ಎಸೆತದಲ್ಲಿ ಖುರಾನಗೆ ಕ್ಯಾಚ್‌ ನಿಡಿ ನಿರ್ಗಮಿಸಿದರು.

ಮತ್ತೊಂದು ತುದಿಯಲ್ಲಿ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟುತ್ತಿದ್ದ ಡಿ.ನಿಶ್ಚಲ್‌ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್‌ ಮಾಡಿದರು. ಎದುರಿಸಿದ 212 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ ಒಟ್ಟು 61 ರನ್‌ ಗಳಿಸಿದರು. ಆ ಮೂಲಕ ತಂಡದ ಮೊತ್ತದ ಏರಿಕೆಗೆ ಅಮೂಲ್ಯ ಕೊಡುಗೆ ನೀಡಿದರು. ನಂತರ,  ಖುರಾನ ಎಸೆತದಲ್ಲಿ ಕ್ಲೀನ್ ಬೌಲ್ಡ್‌ ಆದರು.

ಇವರ ಹಿಂದೆಯೇ ಕೃಷ್ಣಮೂರ್ತಿ ಕೇವಲ ನಾಲ್ಕು ರನ್ ಗಳಿಸಿ ನಿರ್ಗಮಿಸಿದರು. ನಂತರ, ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್‌ ಮಾಡಿದ ಮೀರ್‌ ಕೌನೇನ್‌ ಅಬ್ಬಾಸ್‌, 62 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿ
ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಸಫಲರಾದರು. ಮತ್ತೊಂದು ತುದಿಯಲ್ಲಿ ಪವನ್‌ ದೇಶ್‌ಪಾಂಡೆ ಆರು ರನ್ ಗಳಿಸಿ ಅಜೇಯರಾಗಿ ಉಳಿದರು.
ಒಟ್ಟಾರೆ, ಕರ್ನಾಟಕ 70.2 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು 184 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ದ್ವಿತೀಯ ಇನಿಂಗ್ಸ್‌ನಲ್ಲಿ ತೀವ್ರ ಪೈಪೋಟಿ ನೀಡಿದ್ದ ಮಹಾರಾಷ್ಟ್ರ, ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಸೋಲು ಅನುಭವಿಸಿತು.

Related Articles