Sunday, April 14, 2024

ಮೋರೆ ದಾಳಿಗೆ ಕುಸಿದ ಮುಂಬೈ: ಕರ್ನಾಟಕಕ್ಕೆ ಬೃಹತ್ ಮುನ್ನಡೆ

ಬೆಳಗಾವಿ:

ವೇಗಿ ರೋನಿತ್ ಮೋರೆ(5) ಅವರ ಮಾರಕ ದಾಳಿಗೆ ನಲುಗಿದ ಮುಂಬೈ ತಂಡ ಪ್ರಥಮ ಇನಿಂಗ್ಸ್ ನಲ್ಲಿ ಕೇವಲ 205 ರನ್‍ಗಳಿಗೆ ಕುಸಿಯಿತು. ಇದರೊಂದಿಗೆ ಕರ್ನಾಟಕಕ್ಕೆ ಪ್ರಥಮ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತದ ಮುನ್ನಡೆ ದೊರೆಯಿತು.

ಇಲ್ಲಿನ ಕೆಎಸ್‍ಸಿಎ ಮೈದಾನದಲ್ಲಿ ರಣಜಿ ಟ್ರೋಫಿ ಎಲೈಟ್ ಗುಂಪು(ಎ) ಮೂರನೇ ಸುತ್ತಿನ ಪಂದ್ಯದಲ್ಲಿ ಮೂರನೇ ದಿನ ಪ್ರಥಮ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡ ಕನಾಟಕದ ವೇಗಿ ರೋನಿತ್ ಮೋರೆ ಮಾರಕ ದಾಳಿಗೆ ತತ್ತರಿಸಿತು. ಗುರುವಾರ ಬೆಳಗ್ಗೆ ಎರಡು ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡಿದ ಮುಂಬೈ ಕೇವಲ 205 ರನ್ ಗಳಿಗೆ ಸರ್ವ ಪತನ ಕಂಡಿತು.
ವೇಗಿ ರೋನಿತ್ ಮೋರೆ 21.5 ಓವರ್ ಗಳಿಗೆ 52 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಆ ಮೂಲಕ ಕನಾಟಕಕ್ಕೆ ಬೃಹತ್ ಮುನ್ನಡೆ ಪಡೆಯಲು ಕಾರಣವಾದರು. ಮುಂಬೈ ಪರ ಜೇ ಗೋಕುಲ್ ಬಿಸ್ತಾ(70) ಹಾಗೂ ಶ್ಯಾಮ್ಸ್(34) ಬಿಟ್ಟರೆ ಇನ್ನುಳಿದ ಬ್ಯಾಟ್ಸ್ ಮನ್ ಗಳು ಕನಾಟಕ ಬೌಲರ್ ಗಳ ದಾಳಿ ಎದುರಿಸುವಲ್ಲಿ ವಿಫಲರಾದರು.
ಬಳಿಕ, 195 ರನ್ ಗಳ ಬೃಹತ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರುಮಾಡಿದ ಕರ್ನಾಟಕ ಆರಂಭದಲ್ಲೇ ಡಿ.ನಿಶ್ಚಲ್(11) ಹಾಗೂ ಶಿಶಿರ್ ಭವಾನೆ(5) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಕ್ರೀಸ್ ನಲ್ಲಿ ನೆಲೆನಿಂತ ಕೌನೇನ್ ಅಬ್ಬಾಸ್ (25) ಹಾಗೂ ಕೆ. ಸಿದ್ದಾರ್ಥ್(30*) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು.  ಒಟ್ಟಾರೆ, ಮೂರನೇ ದಿನದ ಮುಕ್ತಾಯಕ್ಕೆ ಕರ್ನಾಟಕ 34 ಓವರ್ ಗಳಿಗೆ  ಮೂರು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಇದರೊಂದಿಗೆ, 276 ರನ್ ಮುನ್ನಡೆ ಸಾಧಿಸಿದೆ.

Related Articles