Friday, October 4, 2024

ಅಬ್ಬರಿಸಿದ ರೋಹಿತ್, ಚಹಾಲ್: ಭಾರತದ ಜಯದ ಆರಂಭ

ಸೌತಾಂಪ್ಟನ್:-

ಆರಂಭಿಕ ರೋಹಿತ್ ಶರ್ಮಾ (ಅಜೇಯ 122) ಅವರ  ಭರ್ಜರಿ ಶತಕ ಹಾಗೂ ಯಜುವೇಂದ್ರ ಚಹಾಲ್ (51ಕ್ಕೆ 4) ಉತ್ತಮ ಬೌಲಿಂಗ್ ನೆರವಿನಿಂದ ಭಾರತ ಆರು ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇಲ್ಲಿ ನಡೆದಿರುವ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಗೆದ್ದು, ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಗೆ 227 ರನ್ ಕಲೆ ಹಾಕಿತು. ಸಾಧಾರಣ ಮೊತ್ತ ಹಿಂಬಾಲಿಸಿದ ಭಾರತ 47.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ ಕಲೆ ಹಾಕಿ ಜಯದ ನಗೆ ಬೀರಿತು.
ಸಾಧಾರಣ ಮೊತ್ತ ಹಿಂಬಾಲಿಸಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶಿಖರ್ ಧವನ್ (8), ವಿರಾಟ್ ಕೊಹ್ಲಿ (18) ರನ್ ಕಲೆ ಹಾಕುವಲ್ಲಿ ವಿಫಲರಾದರು.


ಮೂರನೇ ವಿಕೆಟ್ ಗೆ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಹೊಣೆಯನ್ನು ಹೊತ್ತುಕೊಂಡರು. ಈ ಜೋಡಿ ವೇಗಿಗಳು ಎಸೆದ ಎಸೆತವನ್ನು ಎಚ್ಚರಿಕೆಯಿಂದ ಎದುರಿಸಿ ಇನ್ನಿಂಗ್ಸ್ ಕಟ್ಟಿದರು. ಮೂರನೇ ವಿಕೆಟ್ ಗೆ ರೋಹಿತ್ ಹಾಗೂ ರಾಹುಲ್ 85 ರನ್ ಸೇರಿಸಿದರು. ರಾಹುಲ್ 34 ರನ್ ಬಾರಿಸಿ ರಬಾಡಾಗೆ ವಿಕೆಟ್ ಒಪ್ಪಿಸಿದರು.
ನಾಲ್ಕನೇ ವಿಕೆಟ್ ಗೆ ಮಾಜಿ ನಾಯಕ ಧೋನಿ ಹಾಗೂ ರೋಹಿತ್ ಶರ್ಮಾ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಈ ಜೋಡಿ 74 ರನ್ ಕಲೆ ಹಾಕಿತು.
ರೋಹಿತ್ ಶರ್ಮಾ 144 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ನೆರವಿನಿಂದ 122 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಭರವಸೆಯ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್ ಹಾಗೂ ಹಾಶೀಮ್ ಆಮ್ಲಾ ಅವರನ್ನು ಯಾರ್ಕರ್ ಸ್ಪೆಷಲಿಸ್ಟ್ ಬೂಮ್ರಾ ಖೆಡ್ಡಾಗೆ ಕೆಡವಿದರು.
ಆರಂಭಿಕ ಆಘಾತದಿಂದ ತಂಡವನ್ನು ಮೇಲೆತ್ತುವ ಜವಾಬ್ದಾರಿಯನ್ನು ಫಾಫ್ ಡುಪ್ಲೇಸಿಸ್ ಹಾಗೂ ವ್ಯಾನ್ ಡರ್ ಡಸೆನ್ ತಂಡಕ್ಕೆ ಕೊಂಚ ಆಧಾರವಾದರು. 54 ರನ್ ಗಳಿಸಿ ಮುನ್ನುಗುತ್ತಿದ್ದ ಜೋಡಿಯನ್ನು ಬೇರ್ಪಡಿಸುವಲ್ಲಿ ಚಹಾಲ್ ಸಫಲರಾದರು. ವ್ಯಾನ್ ಡರ್ ಡಸೆನ್ 22 ರನ್ ಗಳಿಗೆ ಔಟ್ ಆದರು. ಇದೇ ಓವರ್ ನ ಕೊನೆಯ ಎಸೆತದಲ್ಲಿ ಪ್ಲೇಸಿಸ್ ಔಟಾದರು.

ಡುಮಿನಿ ಬಂದಷ್ಟೇ ವೇಗದಲ್ಲಿ ಪೇವಿಲಿಯನ್ ಸೇರಿದರು. ಡೇವಿಡ್ ಮಿಲ್ಲರ್ ತಮ್ಮ ನೈಜ ಆಟ ಆಡುವ ಸೂಚನೆ ನೀಡಿದರು. ಆದರೆ ಚಹಾಲ್ ಸ್ಪಿನ್ ಕಮಾಲ್ ಅರಿಯುವಲ್ಲಿ ವಿಫಲರಾದರು.
8ನೇ ವಿಕೆಟ್ ಗೆ ಫೆಹ್ಲುಕ್ವೇವೊ ಹಾಗೂ ಕ್ರಿಸ್ ಮೋರಿಸ್ ಅವರ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಈ ಜೋಡಿ ತಂಡಕ್ಕೆ 46 ರನ್ ಕಾಣಿಕೆ ನೀಡಿತು.
9ನೇ ವಿಕೆಟ್ ಗೆ ಮೋರಿಸ್ ಹಾಗೂ ಕಗಿಸೊ ರಬಾಡ ಸಹ ಉತ್ತಮ ಬ್ಯಾಟಿಂಗ್ ನಡೆಸಿದರು. 59 ಎಸೆತಗಳಲ್ಲಿ ಈ ಜೋಡಿ 66 ರನ್ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿತು.
ಭಾರತದ ಪರ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್ 51 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರಿತ್ ಬೂಮ್ರಾ ತಲಾ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಗೆ 227
(ಫಾಫ್ ಡುಪ್ಲೇಸಿಸ್ 38, ಡೇವಿಡ್ ಮಿಲ್ಲರ್ 31, ಫೆಹ್ಲುಕ್ವೇವೊ 34, ಕ್ರಿಸ್ ಮೋರಿಸ್ 42, ಕಗಿಸೊ ರಬಾಡ ಅಜೇಯ 31, ಚಹಾಲ್ 51ಕ್ಕೆ 4, ಬೂಮ್ರಾ 44ಕ್ಕೆ 2, ಭುವನೇಶ್ವರ್ ಕುಮಾರ್ 35ಕ್ಕೆ 2)
ಭಾರತ 47.3 ಓವರ್ ಗಳಲ್ಲಿ 4 ವಿಕೆಟ್ ಗೆ 230
(ರೋಹಿತ್ ಶರ್ಮಾ ಅಜೇಯ 122, ಕೆ.ಎಲ್ ರಾಹುಲ್ 26, ಮಹೇಂದ್ರ ಸಿಂಗ್ ಧೋನಿ 34, ಕಗಿಸೊ ರಬಾಡ 39ಕ್ಕೆ 2)

Related Articles