Thursday, March 28, 2024

ಕ್ರಿಕೆಟ್‌ಗೆ ಗಂಭೀರ ವಿದಾಯ

ಸ್ಪೋರ್ಟ್ಸ್ ಮೇಲ್ ವರದಿ

2011 ರ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಭಾರತ ಕ್ರಿಕೆಟ್‌ನ ಗಂಭೀರ ಆಟಗಾರ ಗೌತಮ್ ಗಂಭೀರ್ ಮಂಗಳವಾರ ಕ್ರಿಕೆಟ್‌ನ ಎಲ್ಲ ಮಾದರಿಗೆ ವಿದಾಯ ಹೇಳಿದ್ದಾರೆ.

2016ರಲ್ಲಿ ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನಂತರ ಗಂಭೀರ್ ಮತ್ತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಗುರುವಾರ ಆಂಧ್ರಪ್ರದೇಶ  ವಿರುದ್ಧದ ರಣಜಿ ಪಂದ್ಯ ಆರಂಭಗೊಳ್ಳುತ್ತಿದ್ದು, ಆ ಪಂದ್ಯದ ನಂತರ ಗೌತಮ್ ಗಂಭೀರ್ ವಿದಾಯ ಹೇಳಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮೂಲಕ ಗಂಭೀರ್ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ‘ಸುಮಾರು 15 ವರ್ಷಕ್ಕೂ ಹೆಚ್ಚು ಕಾಲ ದೇಶಕ್ಕಾಗಿ ಆಡಿದ ನಂತರ  ಈ ಸುಂದರ ಕ್ರೀಡೆಯಿಂದ ನಿವೃತ್ತಿ ಹೇಳುತ್ತಿದ್ದೇನೆ,‘ ಎಂದು ಗಂಭೀರ್ ವೀಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಗಂಭೀರ್, ಭಾರತಕ್ಕಾಗಿ ಗಂಭೀರ್ 58 ಟೆಸ್ಟ್, 147 ಏಕದಿನ ಹಾಗೂ 37 ಟಿ20 ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ತನ್ನ ಕ್ರಿಕೆಟ್ ಬದುಕಿನಲ್ಲಿ ಗಂಭೀರ್ 20 ಶತಕಗಳನು ಸಿಡಿಸಿದ್ದಾರೆ. ಆರಂಭಿಕ ಆಟಗಾರರಾಗಿದ್ದ ಗಂಭೀರ್ 2009ರಲ್ಲಿ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದರು. 2007 ಐಸಿಸಿ ಟಿ20 ಹಾಗೂ 2011ರ ಐಸಿಸಿ ವಿಶ್ವಕಪ್‌ನಲ್ಲಿ ಗಂಭೀರ್ ಆಡಿದ ಆಟವನ್ನು ಕ್ರಿಕೆಟ್ ಆಸಕ್ತರು ಎಂದಿಗೂ ಮರೆಯುವಂತಿಲ್ಲ.
2007ರಲ್ಲಿ ನಡೆದ ಟಿ20 ವಿಶ್ವಕಪ್  ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗಂಭೀರ್ 75 ರನ್ ಗಳಿಸಿದುದರ ಪರಿಣಾಮ ಭಾರತ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ನಾಲ್ಕು ವರ್ಷಗಳ ನಂತರ ಶ್ರೀಲಂಕಾ ವಿರುದ್ಧದ 50 ಓವರ್‌ಗಳ ವಿಶ್ವಕಪ್‌ನಲ್ಲಿ 97 ರನ್ ಸಿಡಿಸಿ ದೇಶಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

Related Articles