Saturday, July 27, 2024

ದೇಶೀಯ ಕ್ರಿಕೆಟ್ನಲ್ಲಿ ಸೌಮ್ಯ ಸರ್ಕಾರ್‌ ದಾಖಲೆ

ಢಾಕಾ: ಸೌಮ್ಯ ಸರ್ಕಾರ್‌ ಲಿಸ್ಟ್‌ ‘ಎ’ ಮಾದರಿಯಲ್ಲಿ ದ್ವಿಶತಕ ಸಿಡಿಸಿದ  ಬಾಂಗ್ಲಾದೇಶದ ಮೊದಲ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಢಾಕಾ ಪ್ರೀಮಿಯರ್‌ ಲೀಗ್‌ನ ಶೇಖ್‌ ಜಮಾಲ್‌ ಧಾನ್ಡೊಂಡಿ ಕ್ಲಬ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್‌  208 ರನ್‌ ದಾಖಲಿಸಿ ಅಬಹಾನಿ ಲಿಮಿಟೆಡ್‌ ತಂಡಕ್ಕೆ ಒಂಬತ್ತು ವಿಕೆಟ್‌ ಜಯ ತಂದುಕೊಟ್ಟರು. ಆ ಮೂಲಕ ಅಬಹಾನಿ ಲಿಮಿಟೆಡ್‌ ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಅಮೋಘ ಇನಿಂಗ್ಸ್ ಕಟ್ಟಿದ ಸೌಮ್ಯ ಸರ್ಕಾರ್‌ ಮತ್ತೆರಡು ದಾಖಲೆಗಳನ್ನು ಬರೆಯುವಲ್ಲಿ ಯಶಸ್ವಿಯಾದರು. ಲಿಸ್ಟ್‌ “ಎ”ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಮೊದಲ ಬಾಂಗ್ಲಾ ಬ್ಯಾಟ್ಸ್‌ಮನ್‌ ಹಾಗೂ ಪ್ರಸಕ್ತ ಟೂರ್ನಿಯಲ್ಲಿ ಎಲ್ಲ ಕ್ರಮಾಂಕದಲ್ಲೂ ಅತಿ ಹೆಚ್ಚು ಜತೆಯಾಟವಾಡಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

153 ಎಸೆತಗಳನ್ನು ಎದುರಿಸಿದ ಸೌಮ್ಯ ಸರ್ಕಾರ್‌, 16 ಸಿಕ್ಸರ್ ಹಾಗೂ 14 ಬೌಂಡರಿಯೊಂದಿಗೆ ಒಟ್ಟು 208 ರನ್‌ ದಾಖಲಿಸಿದರು. ಅಲ್ಲದೆ, ಜಾಹುರುಲ್‌ ಇಸ್ಲಾಂ(100) ಅವರೊಂದಿಗೆ ಸೌಮ್ಯ ಸರ್ಕಾರ್‌ ಮೊದಲನೇ ವಿಕೆಟ್‌ಗೆ 312 ರನ್‌ ಜತೆಯಾಟ ವಾಡಿದರು. ಕಳೆದ ಭಾನುವಾರ ಲೆಜೆಂಡ್ಸ್ ಆಫ್‌ ರುಗ್ಪಾಂಜಿ ಅವರ ವಿರುದ್ಧವೂ ಸರ್ಕಾರ್‌(106) ಶತಕ ಗಳಿಸಿದ್ದರು.

2002ರಲ್ಲಿ ಸರ್ರೆ ತಂಡದ ಅಲಿ ಬ್ರೌನ್‌ ಅವರು ಗ್ಲಾಮೋರ್ಗನ್‌ ವಿರುದ್ಧ 150 ಎಸೆತಗಳಲ್ಲಿ 268 ರನ್‌ ದಾಖಲಿಸಿದ್ದರು. ಇದು ಲಿಸ್ಟ್‌ ‘ಎ’ ನಲ್ಲಿ ದಾಖಲಾಗಿರುವ ಅತಿ ಹೆಚ್ಚು ವೈಯಕ್ತಿಕ ಮೊತ್ತವಾಗಿದೆ. ಸೌಮ್ಯ ಸರ್ಕಾರ್‌ ಮುಂಬರುವ ಐಸಿಸಿ ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Related Articles