Thursday, October 10, 2024

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌: ರಾಯಲ್‌

Sportsmail Desk:  ನೂತನವಾಗಿ ಆರಂಭಗೊಂಡಿರುವ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ Costa Badminton Centre ನಿಂದ ಕುಂದಾಪುರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ಯುವಕರಿಗೆ ಹೆಚ್ಚಿನ ಅನುಕೂಲವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದು ಅಥ್ಲೀಟ್‌ ರಾಯಲ್‌ ಡಿʼಸಿಲ್ವಾ ಅವರು ಅಭಿಪ್ರಾಯಪಟ್ಟರು. Costa Badminton Centre Kundapura felicitates former athletes Royal D’Silva.

ಅವರು ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಸ್ಥಾಪಕರು ಮಾಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. “ಅಜಿತ್‌ ಡಿʼಕೋಸ್ಟಾ ಅವರು ಚಿಕ್ಕಂದಿನಲ್ಲಿ ಕಂಡ ಕನಸನ್ನು, ಕಷ್ಟಪಟ್ಟು ದುಡಿದು ನನಸಾಗಿಸಿದ್ದಾರೆ. ತನ್ನಂತೆ ಗ್ರಾಮೀಣ ಪ್ರದೇಶದ ಮಕ್ಕಳು ಕ್ರೀಡೆಯಿಂದ ವಂಚಿತರಾಗಬಾರದು ಎಂದು ಬ್ಯಾಡ್ಮಿಂಟನ್‌ನಂಥ ಒಲಿಂಪಿಕ್ಸ್‌ ಕ್ರೀಡೆಗೆ ಒತ್ತುಕೊಟ್ಟು ಅದಕ್ಕಾಗಿ ಉತ್ತಮ ಅಕಾಡೆಮಿಯನ್ನು ಅತ್ಯಂತ ಶ್ರದ್ಧೆಯಿಂದ ಸ್ಥಾಪಿಸಿದ್ದಾರೆ. ಇಂದು ಇಂಥ ಸುಸಜ್ಜಿತ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅಗತ್ಯವಿದೆ. ಇದಕ್ಕಾಗಿಯೇ ಸ್ಥಳೀಯ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಅದರ ಸದುಪಯೋಗ ಪಡೆದುಕೊಳ್ಳಿ,” ಎಂದು ರಾಯಲ್‌ ಸಲಹೆ ನೀಡಿದರು.

ಅತ್ಯಂತ ವೇಗದ ಓಟಗಾರರಾಗಿರುವ ರಾಯಲ್‌ ಡಿʼಸಿಲ್ವಾ, ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (SGFI) ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದವರು, ನಂತರ ಫಿಟ್ನೆಸ್‌ ಕೋಚ್‌ ಮತ್ತು ಡಿಸೈನರ್‌ ಆಗಿ ಕಾರ್ಯನಿರ್ವಹಿಸಿದವರು. ಅವರನ್ನು ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ಆಡಳಿತ ನಿರ್ದೇಶಕರು ಹಾಗೂ ಅಜಿತ್‌ ಡಿʼಕೋಸ್ಟಾ ಅವರ ತಾಯಿ ಕೊಸೆಸ್‌ ಡಿʼಕೋಸ್ಟಾ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಜಿತ್‌ ಡಿʼಕೋಸ್ಟಾ ಅವರು, “ರಾಯಲ್‌ ಉತ್ತಮ ಕ್ರೀಡಾಪಟುವಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ಅಂಗಣದಿಂದ ಹೊರಗುಳಿಯಬೇಕಾಯಿತು. ಆದರೆ ಫಿಟ್ನೆಸ್‌ ಟ್ರೈನರ್‌ ಹಾಗೂ ಗ್ರಾಫಿಕ್‌ ಡಿಸೈನರ್‌ ಆಗಿ ಅವರು ಕ್ರೀಡಾ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ವಿನ್ಯಾಸ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾದುದು. ಇಲ್ಲಿರುವ ಪ್ರತಿಯೊಂದು ಯೋಜನೆಗಳನ್ನು ರೂಪಿಸಿದ್ದು ಮತ್ತು ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ರಾಯಲ್‌ ಅವರ ಪಾತ್ರ ಪ್ರಮುಖವಾಗಿದೆ. ಒಬ್ಬ ಉತ್ತಮ ಕ್ರೀಡಾಪಟುವಾಗಿ ಅವರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ,” ಎಂದರು.

“ಈ ಬ್ಯಾಡ್ಮಿಂಟನ್‌ ಸೆಂಟರ್‌ ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಬೇಕೆಂದುಬು ನಮ್ಮ ಗುರಿಯಾಗಿದೆ. ಕುಂದಾಪುರದಂಥ ಗ್ರಾಮೀಣ ಪ್ರದೇಶದಿಂದ ಕೆಲವು ವಿದ್ಯಾರ್ಥಿಗಳಾದರೂ ರಾಷ್ಟ್ರ ಮಟ್ಟದಲ್ಲಿ ಆಡಬೇಕೆಂಬುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಸದ್ಯದಲ್ಲಿಯೇ ಅವುಗಳನ್ನು ಕಾರ್ಯರೂಪಕ್ಕೆ ತರಲಿದ್ದೇವೆ,” ಎಂದು ಅಜಿತ್‌ ಡಿʼಕೋಸ್ಟಾ ಹೇಳಿದರು.

ಯುವ ಪ್ರತಿಭೆ ಪ್ರಮಿಳಾ ಕರ್ವಾಲೋ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಹಂಗಳೂರಿನ ಪಿಯೂಸ್‌ ನಗರ ಚರ್ಚ್‌ನ ಧರ್ಮಗುರು ರೆವೆರೆಂಡ್‌ ಅಲ್ಬರ್ಟ್‌ ಕ್ರಾಸ್ತಾ ಅವರು ಹಾಜರಿದ್ದು ಆಶೀರ್ವಚನ ನೀಡಿದರು.

Related Articles