ಸ್ಪೋರ್ಟ್ಸ್ ಮೇಲ್ ವರದಿ:ಬಾಕ್ಸಿಂಗ್ ಕೇಳಿದ್ದೇವೆ, ಚೇಸ್ ಆಟದ ಬಗ್ಗೆಯೂ ಗೊತ್ತು. ಆದರೆ ಏನಿದು ಚೆಸ್ ಬಾಕ್ಸಿಂಗ್? ಅಚ್ಚರಿಯಾಗುವುದು ಸಹಜ. ಚೆಸ್‌ನಲ್ಲಿ ಮನಸ್ಸು ಕೇಂದ್ರೀಕೃತವಾಗಿದ್ದರೆ, ಬಾಕ್ಸಿಂಗ್‌ನಲ್ಲಿ ದೈಹಿಕ ಸಾಮರ್ಥ್ಯ ಪ್ರಮುಖವಾಗಿದೆ. ಹೊಸ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಮೈಸೂರಿನಲ್ಲಿ ಚೆಸ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿದೆ.
ಚೆಸ್ ಬಾಕ್ಸಿಂಗ್ ಇತಿಹಾಸ
೧೯೯೨ರಲ್ಲಿ ಫ್ರಾನ್ಸ್ನ ಕಾಮಿಕ್ ಬುಕ್ ಬರಹಗಾರ ಎನ್ಕಿ ಬಿಲಾಲ್ ಕಾಲ್ಪನಿಕ ವಿಷಯದಿಂದ ಕೂಡಿದ ಗ್ರಾಫಿಕ್ ಚಿತ್ರಗಳ ಕಾದಂಬರಿಯೊಂದನ್ನು ಪ್ರಕಟಿಸಿದರು. ಎನ್ಕಿ ಕಾರ್ಟನಿಷ್ಟ್ ಹಾಗೂ ಕತೆ ಹೇಳುವವರಾಗಿದ್ದರು. ಅವರ ನಿಕೊಪೊಲ್ ಟ್ರಿಯಾಲಜಿಯ ಮೂರನೇ ಸಂಚಿಕೆ ಅಂದಿನ ಕಾಲದಲ್ಲಿ ಪ್ರಸಿದ್ಧಿ ಪಡೆದಿತ್ತು. ಫ್ರಾಯ್ಡ್ ಇಏಟರ್ (ಫ್ರೆಂಚ್ ಭಾಷೆಯಲ್ಲಿ ಇಕ್ವೇಟರ್ ಕೋಲ್ಡ್) ಇದರ ಸಂಚಿಕೆಯೊಂದು ಪ್ರಕಟವಾಗಿತ್ತು, ಲೈರ್ ಮ್ಯಾಗಜಿನ್ ನೀಡುವ ವರ್ಷದ ಕೃತಿ ಗೌರವಕ್ಕೂ ಫ್ರಾಯ್ಡ್ ಇಏಟರ್ ಭಾಜನವಾಗಿತ್ತು. ಈ ಗ್ರಾಫಿಕ್ ಕಾಮಿಕ್‌ನಲ್ಲಿ ಚೆಸ್ ಹಾಗೂ ಬಾಕ್ಸಿಂಗ್ ಬಗ್ಗೆ ಸಾಕಷ್ಟು ಮಾಹಿತಿ ಇದ್ದಿತ್ತು. ಇದರ ಮುಂದುವರಿದ ಭಾಗವೇ ಚೆಸ್ ಬಾಕ್ಸಿಂಗ್. ೨೦೦೩ರಲ್ಲಿ ಚೆಸ್ ಬಾಕ್ಸಿಂಗ್ ಜನಪ್ರಿಯ ಕ್ರೀಡೆಯಾಗಿ ರೂಪುಗೊಂಡಿತು.
ಇಂದಿನ ಚೆಸ್ ಬಾಕ್ಸಿಂಗ್
ಕಾಮಿಕ್ ಪುಸ್ತಕದ ಪ್ರಕಾರ ಸ್ಪರ್ಧಿಗಳಿಬ್ಬರು ಚೆಸ್ ಆಡುವುದಕ್ಕೆ ಮುನ್ನ ಬಾಕ್ಸಿಂಗ್‌ನಲ್ಲಿ ಮುಖಾಮುಖಿಯಾಗುತ್ತಾರೆ. ಆರಂಭದಲ್ಲಿ ಇದು ಕಾರ್ಯರೂಪಕ್ಕೆ ತರುವುದು ಕಷ್ಟವೆಂದು ಕಂಡುಬಂದಿತ್ತು. ಆದರೆ ವೃತ್ತಿಪರ ಕ್ರೀಡೆಯಾಗಿ ರೂಪುಗೊಂಡ ನಂತರ ಚೆಸ್ ಬಾಕ್ಸಿಂಗ್ ಜನಪ್ರಿಯಗೊಳ್ಳಲಾರಂಭಿಸಿದೆ. ಈ ಕ್ರೀಡೆ ಬಾಕ್ಸಿಂಗ್ ಹಾಗೂ ಚೆಸ್‌ಗೆ ಪರ್ಯಾಯ ಕ್ರೀಡೆಯಾಗುವಷ್ಟು ಬೆಳೆದು ನಿಂತಿದೆ. ಅದಕ್ಕೆ ಅಗತ್ಯವಿರುವ ರೀತಿ ನೀತಿಗಳನ್ನು ರೂಪಿಸಲಾಗಿದೆ. ೧೯೭೦ರಲ್ಲಿ ಲಂಡನ್‌ನ ಬಾಕ್ಸಿಂಗ್ ಕ್ಲಬ್‌ನ ಹೊರ ಭಾಗದಲ್ಲಿ ಮೊದಲ ಸ್ಪರ್ಧೆ ನಡೆಯಿತು. ರಾಬಿನ್ಸನ್ ಸಹೋದರರು ಆರಂಭ‘ದಲ್ಲಿ ಬಾಕ್ಸಿಂಗ್ ಅಭ್ಯಾಸ ನಡೆಸಿದ ನಂತರ ಪರಸ್ಪರ ಚೆಸ್ ಸ್ಪರ್ಧೆರ್ಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
೧೯೭೯ರಲ್ಲಿ ಬಿಡುಗಡೆಗೊಂಡ ಕುಂಗ್ ಫು ಸಿನಿಮಾ ಮೈಸ್ಟ್ರೀ ಆಫ್ ಚೆಸ್ ಬಾಕ್ಸಿಂಗ್‌ನಲ್ಲಿ ಇದೇ ರೀತಿಯ ಹಿನ್ನೆಲೆಯ ಪರಿಕರಗಳನ್ನು ಬಳಸಲಾಯಿತು. ೧೯೯೩ರಲ್ಲಿ ವು-ತಾಂಗ್ ಅವರ ಆಲ್ಬಂ ದ ಮೈಸ್ಟ್ರಿ ಆಫ್ ಚೆಸ್‌ಬಾಕ್ಸಿoಗ್ ಇದೇ ರೀತಿಯ ವಸ್ತುಗಳನ್ನು ಬಳಸಲಾಗಿತ್ತು. ೨೦೦೩ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಮೊದಲ ಚೆಸ್ ಬಾಕ್ಸಿಂಗ್ ಚಾಂಪಿಯನ್‌ಷಿಪ್ ನಡೆಯಿತು. ಅದೇ ವರ್ಷ ಆ್ಯಮಸ್ಟರ್‌ಡ್ಯಾಮ್‌ನಲ್ಲಿ ಡಚ್ ಬಾಕ್ಸಿಂಗ್ ಸಂಸ್ಥೆ ಹಾಗೂ ವಿಶ್ವ ಚೆಸ್ ಫೆಡರೇಷನ್ ಆಶ್ರಯದಲ್ಲಿ ಬರ್ಲಿನ್‌ನಲ್ಲಿ ಮೊದಲ ಹೋರಾಟ ನಡೆಯಿತು. ಇದರಿಂದಾಗಿ ಚೆಸ್ ಬಾಕ್ಸಿಂಗ್ ಬರ್ಲಿನ್‌ನಲ್ಲಿ ಜನ್ಮತಾಳಿತು ಎನ್ನಲಾಗಿದೆ.
ಚೆಸ್ ಬಾಕ್ಸಿಂಗ್ ನಿಯಮ
ಚೆಸ್ ಬಾಕ್ಸಿಂಗ್‌ನಲ್ಲಿ ೧೧ ಸುತ್ತುಗಳಿರುತ್ತವೆ. ೬ ಸುತ್ತು ಚೆಸ್ ಹಾಗೂ ೫ ಸುತ್ತು ಬಾಕ್ಸಿಂಗ್ ಪಂದ್ಯವಿರುತ್ತದೆ. ಬಾಕ್ಸಿಂಗ್‌ನಲ್ಲಿ ಆರಂಭಗೊಂಡು ಚೆಸ್‌ನಲ್ಲಿ ಕೊನೆಗೊಳ್ಳುತ್ತದೆ. ಪ್ರತಿಯೊಂದು ಸುತ್ತು ಮೂರು ನಿಮಿಷಗಳಿಂದ ಕೂಡಿರುತ್ತದೆ. ಚೆಸ್ ಹಾಗೂ ಬಾಕ್ಸಿಂಗ್ ಎರಡಕ್ಕೂ ಸಮಾನ ಸಮಯ ಅವಕಾಶ. ಚೆಸ್‌ಗೆ ಒಟ್ಟು ೧೮ ನಿಮಿಷ ತಗಲಿದರೆ, ಪ್ರತಿಯೊಬ್ಬ ಆಟಗಾರನಿಗೆ ೯ ನಿಮಿಷ ತಗಲುತ್ತದೆ. ಚೆಸ್ ಹಾಗೂ ಬಾಕ್ಸಿಂಗ್ ಪಂದ್ಯ ನಡುವೆ ೬೦ ಸೆಕೆಂಡುಗಳ ವಿರಾಮವಿರುತ್ತದೆ. ಪ್ರದರ್ಶನ ಪಂದ್ಯ ಹಾಗೂ ಯುವ ಚಾಂಪಿಯನ್‌ಷಿಪ್ ವೇಳೆ ಅಥವಾ ಹವ್ಯಾಸಿ ಚಾಂಪಿಯನ್‌ಷಿಪ್‌ಗಳಲ್ಲಿ ಚೆಸ್ ಬಾಕ್ಸಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು.
ಅರ್ಹತೆ
ಚೆಸ್ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುವವರಿಗೆ ಉತ್ತಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯದ ಅಗತ್ಯವಿದೆ. ಜಾಗತಿಕ ಮಟ್ಟದ ಚೆಸ್ ಬಾಕ್ಸಿಂಗ್‌ನಲ್ಲಿ ಪಾಲ್ಗೊಳ್ಳಬೇಕಾದರೆ ಚೆಸ್ ಎಲೊ ರೇಟಿಂಗ್ ೧೬೦೦ ರ್ಯಾಂಕ್ ಹೊಂದಿರಬೇಕು. ಬಾಕ್ಸಿಂಗ್‌ನಲ್ಲಿ ಅಥವಾ ಯಾವುದೇ ಮಾರ್ಷಲ್ ಆರ್ಟ್ಸ್‌ನಲ್ಲಿ ಕನಿಷ್ಠ ೫೦ ಹೋರಾಟಗಳನ್ನು ನಡೆಸಿರಬೇಕು. ಚೆಸ್ ಬಾಕ್ಸಿಂಗ್‌ನಲ್ಲಿ ನಿರ್ಣಾಯಕ ಅಂಶವೆಂದರೆ ಸ್ಪರ್ಧಿಗಳು ಪ್ರಮುಖವಾಗಿ ಸ್ಪೀಡ್ ಚೆಸ್‌ನಲ್ಲಿ ತರಬೇತಿ ಪಡೆದಿರಬೇಕು. ಕ್ಲಾಸಿಕಲ್ ಟೈಮ್ ಕಂಟ್ರೋಲ್ ಚೆಸ್‌ನಿಂದ ಇದು ವಿಭಿನ್ನವಾಗಿರುತ್ತದೆ. ಚೆಸ್ ಬಾಕ್ಸಿಂಗ್‌ನ ಮುಖ್ಯ ಉದ್ದೇಶವೆಂದರೆ ಎರಡೂ ಕ್ರೀಡೆಗಳಲ್ಲಿ ಪ್ರಭುತ್ವ ಸಾಧಿಸುವುದಲ್ಲ, ಬದಲಾಗಿ ಒಂದು ಕ್ರೀಡೆಯಿಂದ ಕ್ರೀಡೆಗೆ ಮನಸ್ಸನ್ನು ಪರಿವರ್ತಿಸಿಕೊಳ್ಳುವುದು. ಸಂಪೂರ್ಣ ದೇಹವನ್ನು ಅಳವಡಿಸಿಕೊಳ್ಳುವ ಕ್ರೀಡೆಯಿಂದ ಯೋಚಿಸುವ ಕ್ರೀಡೆಗೆ ಮನಸ್ಸನ್ನು ಪರಿವರ್ತಿಸಿಕೊಳ್ಳುವುದು. ಇದು ಹಂತ ಹಂತಕ್ಕೂ ಬದಲಾವಣೆಯಾಗುವ ಕ್ರೀಡೆ. ಮೂರು ನಿಮಿಷಗಳ ಬಾಕ್ಸಿಂಗ್ ನಂತರ ಸ್ಪರ್ಧಿಗಳು ತಾಳ್ಮೆಯ ಆಟಕ್ಕೆ ಸಜ್ಜಾಗುತ್ತಾರೆ. ಆವೇಶದ ಹೊಡೆದಾಟಕ್ಕೆ ಒಗ್ಗಿಕೊಂಡಿದ್ದ ದೇಹ ಇದ್ದಕ್ಕಿದ್ದಂತೆ ಶಾಂತಿಯ ಆಟಕ್ಕೆ ಇಳಿಯುತ್ತದೆ.
ಈ ಮಾದರಿಯ ಆಟದಲ್ಲಿ ಪಳಗಲು ವಿಶೇಷವಾಗಿ ಚೆಸ್ ಬಾಕ್ಸಿಂಗ್ ತರಬೇತಿಯನ್ನು ನೀಡಲಾಗುತ್ತದೆ. ದೈಹಿಕ ತರಬೇತಿ ಜೊತೆಯಲ್ಲಿ ಬ್ಲಿಟ್ಜ್ ಅಥವಾ ಸ್ಪೀಡ್ ಚೆಸ್ ತರಬೇತಿ ನೀಡಲಾಗುತ್ತದೆ. ಹೋರಾಟಗಾರರು ಚೆಸ್ ಬಾಕ್ಸಿಂಗ್‌ನ ಲಯವನ್ನು ಕಂಡುಕೊಳ್ಳುತ್ತಾರೆ. ಟ್ರ್ಯಾಕ್ ಚೆಸ್ ಹಾಗೂ ಸ್ಟೆ‘ರ್ ಚೆಸ್ ತರಬೇತಿಯಲ್ಲಿ ೧೮ ನಿಮಿಷಗಳ ವೇಗದ ಚೆಸ್ ಹಾಗೂ ನಿರಂತರ ಓಟ ಜತೆಯಲ್ಲಿ ೪೦೦ ಮೀ. ಸ್ಪ್ರಿಂಟ್ ಹಾಗೂ ಸ್ಟೆ‘ರ್ ಸ್ಪ್ರಿಂಟ್‌ನಲ್ಲಿ ತೊಡಗಲಾಗುತ್ತದೆ. ಈ ತರಬೇತಿಯಲ್ಲಿ ಪುಶ್ ಅಪ್ಸ್ ಸಾಮಾನ್ಯವಾಗಿರುತ್ತದೆ.
ಮೈಸೂರು ಪ್ರಸಿದ್ಧ
ಮೈಸೂರಿನಲ್ಲಿ ಸುಮಾರು ೩೦ಕ್ಕೂ ಹೆಚ್ಚು ಆಟಗಾರರು ದಿನವೂ ಚೆಸ್ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಾರೆ. ಎಎಸ್ಫೈ ಟ್ ಕ್ಲಬ್ ಹಾಗೂ ಎ ಎಸ್ ಅಕಾಡೆಮಿ ಆ್ ಸೆಲ್ಫ್ ಡಿೆಫೆನ್ಸ್‌ನಲ್ಲಿ ಚೆಸ್ ಬಾಕ್ಸಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಹರ್ಷ ಎಸ್. ಈ ಕ್ಷೇತ್ರದಲ್ಲಿ ಪಳಗಿ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಮೈಸೂರಿನ ವಿವೇಕಾನಂದ ಸರ್ಕಲ್ ಹಾಗೂ ತೆರೇಸಿಯನ್ ಕಾಲೇಜು ಹತ್ತಿರ ಈ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಪ್ರತಿದಿನವೂ ತರಬೇತಿ ನೀಡಲಾಗುತ್ತದೆ.
ಆಸಕ್ತರು ಹರ್ಷ ಅವರನ್ನು 94820 56568 ದೂರವಾಣಿ ಮೂಲಕ ಸಂಪರ್ಕಿಸಬಹುದು.