Thursday, December 12, 2024

ಫುಟ್ಬಾಲ್‌: ರಿಯಲ್‌ ಚಿಕ್ಕಮಗಳೂರಿಗೆ ರೋಚಕ ಜಯ

ಬೆಂಗಳೂರು: ಸೂಪರ್‌ ಡಿವಿಜನ್‌ ಟೀಮ್ಸ್ ‌ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ BDFA Super Division Football Championship ಬಲಿಷ್ಠ ಎಫ್‌ಸಿ ಬೆಂಗಳೂರು ಯುನೈಟೆಡ್‌ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ರಿಯಲ್‌ ಚಿಕ್ಕಮಗಳೂರು ತಂಡ ರಾಜ್ಯ ಫುಟ್ಬಾಲ್‌ಗೆ ದಿಟ್ಟ ಹೆಜ್ಜೆ ಇಟ್ಟಿದೆ.

ನೂತನ ತಂಡ ರಿಯಲ್‌ ಚಿಕ್ಕಮಗಳೂರು ವಿರುದ್ಧ ಎಫ್‌ಸಿ ಬೆಂಗಳೂರು ಯುನೈಟೆಡ್‌ ಸುಲಭವಾಗಿ ಜಯ ಗಳಿಸುತ್ತದೆ ಎಂಬ ನಿರೀಕ್ಷೆ ಸಹಜವಾಗಿ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಅಲೋಕ್‌ ಸಿಂಗ್‌ (45 ಮತ್ತು 71ನೇ ನಿಮಿಷ) ಹಾಗೂ ವೀರೇಂದ್ರ ಸಿಂಗ್‌ ಥಾಪಾ (83ನೇ ನಿಮಿಷ) ಗಳಿಸಿದ ಗೋಲು ಫುಟ್ಬಾಲ್‌ ತಜ್ಞರ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿತು.

ಎಫ್‌ಸಿ ಬೆಂಗಳೂರು ಯುನೈಟೆಡ್‌ ಪರ ಅಕ್ಷುನ್ನಾ ತ್ಯಾಗಿ (75ನೇ ನಿಮಿಷ) ಹಾಗೂ ಎಂ. ಸುನಿಲ್‌ ಕುಮಾರ್‌ (88ನೇ ನಿಮಿಷ) ಉತ್ತಮ ಹೋರಾಟ ನೀಡಿದರೂ ರಿಯಲ್‌ ಚಿಕ್ಕಮಗಳೂರು ತಂಡದ ಜಯವನ್ನು ಕಸಿಯಲಾಗಲಿಲ್ಲ.

ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ದಿನದ ಮೊದಲ ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡ ಎಫ್‌ಸಿ ಅಗ್ನಿಪುತ್ರ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಸ್ಪೋರ್ಟಿಂಗ್‌ ಕ್ಲಬ್‌ ಪರ ತೊಮ್ಯೋಲ್‌ ಶಿಮ್ರೆ (35 ಮತ್ತು 67 ನೇ ನಿಮಿಷ), ಅಪ್ಪು ಆರೋಗ್ಯ ಸ್ವಾಮಿ (64ನೇ ನಿಮಿಷ) ಹಾಗೂ ಮುಸ್ತಾಫ ಶೇಖ್‌ (69ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಮಂಗಳವಾರದ ಪಂದ್ಯದಲ್ಲಿ ಕಿಕ್‌ ಸ್ಟಾರ್ಟ್‌ ಫುಟ್ಬಾಲ್‌ ಕ್ಲಬ್‌ ಮತ್ತು ಎಂಇಜಿ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಿದರೆ ಎರಡನೇ ಪಂದ್ಯದಲ್ಲಿ ಸೌತ್‌ ಯುನೈಟೆಡ್‌ ಎಫ್‌ಸಿ ಹಾಗೂ ಎಚ್‌ಎಎಲ್‌ ತಂಡಗಳು ಮುಖಾಮುಖಿಯಾಗಲಿವೆ.

Related Articles