ಬಸ್ ಮಾಲೀಕರ ಫುಟ್ಬಾಲ್ ಟ್ರೋಫಿಗೆ 81 ವರ್ಷ!
ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಸೂಪರ್ ಡಿವಿಜನ್ ಕ್ಲಬ್‌ಗಳಿಗಾಗಿ ಪ್ರತಿ ವರ್ಷ ಸಿ. ಪುಟ್ಟಯ್ಯ ಮೆಮೋರಿಯಲ್ ಫುಟ್ಬಾಲ್ ಟ್ರೋಫಿಯನ್ನು ಆಯೋಜಿಸುತ್ತಿದೆ. 1943ರಲ್ಲಿ ಬಸ್ ಸಂಸ್ಥೆಯ ಮಾಲೀಕರು ಹುಟ್ಟು ಹಾಕಿದ ಈ ಟ್ರೋಫಿಗೆ ಈಗ 81 ವರ್ಷ. BDFA C Puttaiah Memorial Cup completing 81 years
ಬೆಂಗಳೂರಿನ ಕಲಾಸಿ ಪಾಳ್ಯದಿಂದ ಚಿಂತಾಮಣಿ-ಕೋಲಾರಕ್ಕೆ ಎಸ್.ಆರ್. ಶ್ರೀ ರಂಗವಿಲಾಸ್ ಮೋಟಾರ್ಸ್ ಜನರನ್ನು ಸಾಗಿಸುತ್ತಿತ್ತು. ಆಗಿನ ಕಾಲಕ್ಕೆ ಈ ಸಂಸ್ಥೆ ಬೆಂಗಳೂರಿನ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾಗಿತ್ತು. ಈ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ಪುಟ್ಟಯ್ಯ ಎಂಬುವರಿಗೆ ಫುಟ್ಬಾಲ್ ಬಗ್ಗೆ ಅಪಾರ ಕಾಳಜಿ. ಫುಟ್ಬಾಲ್ ಅಭಿವೃದ್ಧಿಗಾಗಿ ಅವರು ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದರು. ಅವರ ನಿಧನದ ನಂತರ ಆ ಟ್ರಾವೆಲ್ಸ್ ಕಂಪೆನಿಯ ಡೈರೆಕ್ಟರುಗಳೆಲ್ಲ ಸೇರಿ ಅವರ ಹೆಸರಿನಲ್ಲಿ ಈ ಬೆಳ್ಳಿಯ ಟ್ರೋಫಿಯನ್ನು ಬೆಂಗಳೂರು ಫುಟ್ಬಾಲ್ ಅಸೋಸಿಯೇಷನ್‌ಗೆ ನೀಡಿರುತ್ತಾರೆ.
ರಾಜ್ಯದಲ್ಲಿ ಸ್ಟ್ಯಾಫೋರ್ಡ್ ಕಪ್ ಬಿಟ್ಟರೆ ಪುಟ್ಟಯ್ಯ ಮೆಮೋರಿಯಲ್ ಟ್ರೋಫಿ ಅತ್ಯಂತ ಪ್ರತಿಷ್ಠಿತ ಟೂರ್ನಿಯಾಗಿತ್ತು. ಈಗ ಸ್ಟ್ಯಾಫೋರ್ಡ್ ಟ್ರೋಫಿ ನಿಂತುಹೋಗಿದೆ. ಪುಟ್ಟಯ್ಯ ಮೆಮೋರಿಯಲ್ ಟ್ರೋಫಿ ಮಾತ್ರ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಆಗ ಬೆಂಗಳೂರು ಬ್ಲೂಸ್ ಮತ್ತು ಬೆಂಗಳೂರು ಮುಸ್ಲಿಂ ಎಂಬ ಎರಡು ತಂಡಗಳ ನಡುವಿನ ಪಂದ್ಯವಿದ್ದಾಗ ಜನರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದರು.
ಈ ಬಾರಿ ಪುಟ್ಟಯ್ಯ ಮೆಮೋರಿಯಲ್ ಟ್ರೋಫಿಯಲ್ಲಿ ಇರುವ 18 ತಂಡಗಳಲ್ಲಿ 13 ತಂಡಗಳು ಪಾಲ್ಗೊಳ್ಳುತ್ತಿವೆ. Urbanise ಅರ್ಬನೈಸ್ ಸಂಸ್ಥೆಯು ಟೈಟಲ್ ಪ್ರಾಯೋಜಕತ್ವವನ್ನು ಹೊಂದಿರುತ್ತದೆ. NIVIA ನಿವ್ಯಾ ಟೂರ್ನಿಗೆ ಸಲಕರಣೆಗಳ ಅಧಿಕೃತ ಪ್ರಾಯೋಜಕರಾಗಿರುತ್ತಾರೆ.