Saturday, July 27, 2024

ಟೆಸ್ಟ್: ಭಾರತದ ಜಯಕ್ಕೆ ಭಾರತೀಯರೇ ಅಡ್ಡಿಯಾದಾಗ!!

sportsmail

ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪಂದ್ಯದ ಕೊನೆಯ ಕ್ಷಣದಲ್ಲಿ ಭಾರತ ಜಯ ಗಳಿಸಲು ಯತ್ನಿಸಿದರೆ ಭಾರತೀಯರೇ ಇದಕ್ಕೆ ಅಡ್ಡಿಯಾದರು ಎಂಬುದು ಅಚ್ಚರಿಯ ಸಂಗತಿ!.

ನಿಜವಾಗಿಯೂ ಅಚ್ಚರಿಯಾಗುತ್ತದೆ. ಆದರೆ ಇದು ಸತ್ಯದ ವಿಷಯ. ರವೀಂದ್ರ ಜಡೇಜಾಗೆ ರಚಿನ್‌ ರವೀಂದ್ರ ವಿಕೆಟ್‌ ಒಪ್ಪಿಸಲಿಲ್ಲ, ಅಕ್ಷರ್‌ ಪಟೇಲ್‌ಗೆ ಅಜಾಜ್‌ ಪಟೇಲ್‌ ಅವರ ವಿಕೆಟ್‌ ದಕ್ಕಲಿಲ್ಲ. ಪರಿಣಾಮ 9 ವಿಕೆಟ್‌ ಗಳಿಸಿದ ಭಾರತ ಕೊನೆಯ ವಿಕೆಟ್‌ ಗಳಿಸುವಲ್ಲಿ ವಿಫಲವಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಭಾರತ ಮೂಲದ ಆಟಗಾರರು:

ನ್ಯೂಜಿಲೆಂಡ್‌ ತಂಡದಲ್ಲಿರುವ ರಚಿನ್‌ ರವೀಂದ್ರ ಬೆಂಗಳೂರು ಮೂಲದವರು. ನ್ಯೂಜಿಲೆಂಡ್‌ನಲ್ಲಿ ನೆಲೆಸಿದರೂ ವಿವಿಧ ಕ್ಲಬ್‌ಗಳಲ್ಲಿ ಆಡಲು ಆಗಾಗ ಬೆಂಗಳೂರು ಮತ್ತು ಹೈದರಾಬಾದ್‌ಗೆ ಭೇಟಿ ನೀಡುತ್ತಿರುತ್ತಾರೆ. ಅಜಾಜ್‌ ಪಟೇಲ್‌ ಮಹಾರಾಷ್ಟ್ರ ಮೂಲದವರು. ಇಬ್ಬರೂ ಭಾರತೀಯರು ಭಾರತದ ಜಯಕ್ಕೆ ಅಡ್ಡಿಯಾದುದು ಕಾಕತಳೀಯ.

284 ರನ್ ಜಯದ ಗುರಿಹೊತ್ತ ನ್ಯೂಜಿಲೆಂಡ್‌ ಒಂದು ಹಂತದಲ್ಲಿ ಗೆಲ್ಲುವ ಆತ್ಮವಿಶ್ವಾಸ ತೋರಿತ್ತು. ಆದರೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ಸಿಲುಕಿ ಲಗುಬಗನೆ ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ಸಿಲುಕಿತು. ರಚಿನ್ ರವೀಂದ್ರ 91 ಎಸೆತಗಳನ್ನು ಎದುರಿಸಿ ಭಾರತದ ಕೊನೆಯ ವಿಕೆಟ್ ಗೆ ಅವಕಾಶ ಕೊಡಲಿಲ್ಲ. ಭಾರತ ಮೂಲದ ಇನ್ನೋರ್ವ ಆಟಗಾರ ಅಜಾಜ್ ಪಟೇಲ್ 23 ಎಸೆಗಳನ್ನು ಎದುರಿಸಿ 2 ರನ್ ಗಳಿಸಿದರು. ಕಿವೀಸ್ ಪಡೆ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

ಭಾರತ ಪ್ರಥಮ ಇನ್ನಿಂಗ್ಸ್ ನಲ್ಲಿ 345 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ‌ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಡೀಕ್ಲೇರ್ ಘೋಷಿಸಿತ್ತು. ಕಿವೀಸ್ ಮೊದಲ ಇನ್ನಿಂಗ್ಸ್ ನಲ್ಲಿ 296 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ  165 ರನ್ ಗಳಿಸಿತು.

ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles