Thursday, September 12, 2024

ಪ್ರಜ್ವಲ್‌ ಹೆಗ್ಡೆಗೆ ರಾನ್‌ ಬುಕ್‌ಮ್ಯಾನ್‌ ಮೀಡಿಯಾ ಪ್ರಶಸ್ತಿ

ಸೋಮಶೇಖರ್‌ ಪಡುಕರೆ sportsmail:

ದೇಶದ ಶ್ರೇಷ್ಠ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರಾಗಿದ್ದು, ಟೆನಿಸ್‌ ವರದಿಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿರುವ, ಟೈಮ್ಸ್‌ ಆಫ್‌ ಇಂಡಿಯಾದ ಟೆನಿಸ್‌ ಸಂಪಾದಕಿ ಕರ್ನಾಟಕದ ಪ್ರಜ್ವಲ್‌ ಹೆಗ್ಡೆ ಅವರಿಗೆ ಎಟಿಪಿ ರಾನ್‌ ಬುಕ್‌ಮ್ಯಾನ್‌ ಮೀಡಿಯಾ ಎಕ್ಸಲೆನ್ಸ್ ಗೌರವ ಲಭಿಸಿದೆ.

ಈ ಪ್ರಶಸ್ತಿಗೆ ಪಡೆದ ಭಾರತದ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೂ ಪ್ರಜ್ವಲ್‌ ಹೆಗ್ಡೆ ಭಾಜನರಾಗಿದ್ದಾರೆ. ಆಟಗಾರರ ವಿಭಾಗದಲ್ಲಿ 1973ರಲ್ಲಿ ವಿಜಯ್‌ ಅಮೃತ್‌ರಾಜ್‌ ‘ಮೋಸ್ಟ್‌ ಇಂಪ್ರೂವ್ಡ್‌ ಪ್ಲೇಯರ್‌’ ಗೌರವಕ್ಕೆ ಪಾತ್ರರಾಗಿದ್ದರು. 1999ರಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ‘ಟೀಮ್‌ ಆಫ್‌ ದಿ ಇಯರ್‌’ ಪ್ರಶಸ್ತಿ ಗಳಿಸಿದ್ದರು. ಆ ನಂತರ ಭಾರತಕ್ಕೆ ದಕ್ಕಿದ ಮೊದಲ ಎಟಿಪಿ ಪ್ರಶಸ್ತಿ ಇದಾಗಿದೆ.

ವಿಂಬಲ್ಡನ್‌, ಎಟಿಪಿ ಟೂರ್‌, ಡೇವಿಸ್‌ ಕಪ್‌ ಮೊದಲಾದ ಶ್ರೇಷ್ಠ ದರ್ಜೆಯ ಟೂರ್ನಿಗಳನ್ನು ವರದಿ ಮಾಡಿರುವ ಪ್ರಜ್ವಲ್‌ ಹೆಗ್ಡೆ ಅವರು ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ ಅವರನ್ನು ಸಂದರ್ಶನ ಮಾಡಿದ್ದು ಭಾರತದ ಕ್ರೀಡಾ ಓದುಗರು ಮರೆಯುವಂತಿಲ್ಲ.

ರಾಷ್ಟ್ರೀಯ ಮಟ್ಟದ ಟೆನಿಸ್‌ ಆಟಗಾರ್ತಿಯಾಗಿದ್ದ ಪ್ರಜ್ವಲ್‌ ಹೆಗ್ಡೆ ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ, ಮುಂಬೈಯ ಮಿಡ್‌ ಡೇಯಲ್ಲಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ಕ್ರೀಡಾ ವಿಭಾಗದಲ್ಲಿ ಕೆಲಸ ಮಾಡಿದ್ದರು. 2005ರಿಂದ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಟೆನಿಸ್‌ ವಿಭಾಗದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ, ಸಾನಿಯಾ ಮಿರ್ಜಾ, ಸೋಮ್‌ದೇವ್‌ ದೇವ್‌ವರ್ಮನ್‌ ಮತ್ತು ಮಹೇಶ್‌ ಭೂಪತಿ ಮೊದಲಾದ ಭಾರತದ ಶ್ರೇಷ್ಠ ಆಟಗಾರರ ಪಂದ್ಯಗಳನ್ನು ವಿದೇಶದ ಅಂಗಣದಿಂದ ವರದಿ ಮಾಡಿದ ಕೀರ್ತಿ ಪ್ರಜ್ವಲ್‌ ಹೆಗ್ಡೆ ಅವರಿಗೆ ಸಲ್ಲುತ್ತದೆ.

 

ಮಂಗಳೂರಿನ ಈ ಶ್ರೇಷ್ಠ ಕ್ರೀಡಾ ಪತ್ರಕರ್ತೆ ಮಾಡಿದಷ್ಟು ಟೆನಿಸ್‌ ಪಂದ್ಯಗಳ ವರದಿಯನ್ನು ಭಾರತದಲ್ಲಿ ಬೇರೆ ಯಾವುದೇ ಕ್ರೀಡಾ ವರದಿಗಾರರು ಮಾಡಿಲ್ಲವೆಂದು ಖಚಿತವಾಗಿ ಹೇಳಬಹುದು. ಏಕೆಂದರೆ ಟೈಮ್ಸ್‌ ಆಫ್‌ ಇಂಡಿಯಾ ಮಾತ್ರ ತನ್ನ ವರದಿಗಾರರನ್ನು ವಿಂಬಲ್ಡನ್‌, ಆಸ್ಟ್ರೇಲಿಯಾ ಓಪನ್‌, ಯುಎಸ್‌ ಓಪನ್‌ ಹಾಗೂ ಫ್ರೆಂಚ್‌ ಓಪನ್‌ ಚಾಂಪಿಯನ್ಷಿಪ್‌ಗೆ ವರದಿಗಾಗಿ ಕಳುಹಿಸುತ್ತದೆ, ಟೆನಿಸ್‌ ಜಗತ್ತಿನ ನಾಲ್ಕೂ ಗ್ರ್ಯಾನ್‌ ಸ್ಲಾಮ್‌ಗಳನ್ನು ವರದಿ ಮಾಡಿದ ಕೀರ್ತಿ ಪ್ರಜ್ಬಲ್‌ ಹೆಗ್ಡೆ ಅವರಿಗೆ ಸಲ್ಲುತ್ತದೆ. ಇದುವರೆಗೂ ಪ್ರಜ್ವಲ್‌ ಅವರು 25ಕ್ಕೂ ಹೆಚ್ಚು ಗ್ರ್ಯಾನ್‌ ಸ್ಲಾಮ್‌ ಪಂದ್ಯಗಳನ್ನು ವರದಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಕುರಿತು www.sportsmail.net ಜತೆ ಮಾತನಾಡಿದ ಪ್ರಜ್ವಲ್‌ ಹೆಗ್ಡೆ, “ಇದು ನಿಜವಾಗಿಯೂ ಹೆಮ್ಮೆಯ ಸಂಗತಿ, ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಸಿಕ್ಕಿದ್ದು ಖುಷಿಯನ್ನು ಇಮ್ಮಡಿಗೊಳಿಸಿದೆ. ಟೆನಿಸ್‌ ಒಂದು ಜಾಗತಿಕ ಕ್ರೀಡೆ, ಟೆನಿಸ್‌ನ ಬಲಿಷ್ಠ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಪ್ರದರ್ಶನ ಅಷ್ಟೇನು ಇಲ್ಲ. ನಮ್ಮ ದೇಶದಲ್ಲಿ ನಂಬರ್‌ 1, ನಂಬರ್‌ 2 ಆರೀತಿಯ ಆಟಗಾರರಿಲ್ಲ. ಜಾಗತಿಕ ಮಟ್ಟದಲ್ಲಿ ಒಬ್ಬ ಭಾರತದ ಒಬ್ಬ ವರದಿಗಾರ್ತಿಯನ್ನು ಗುರುತಿಸಿರುವುದು ಹೆಮ್ಮೆಯ ಸಂಗತಿ. ಜಾಗತಿಕ ಮಟ್ಟದಲ್ಲಿ ಈ ರೀತಿಯ ಪ್ರಶಸ್ತಿಯನ್ನು ನಾವು ನಿರೀಕ್ಷಿಸುವುದೇ ಕಷ್ಟ. ಕಠಿಣ ಶ್ರಮಕ್ಕೆ ದಕ್ಕಿದ ಫಲ ಎಂದಷ್ಟೇ ಗ್ರಹಿಸುವೆ,” ಎಂದರು.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ, ಸಂಜಯ್‌ ಹೆಗ್ಡೆಯವರು ಪತ್ನಿ ಪ್ರಜ್ವಲ್‌ ಅವರ ಕೃತಿ ‘What’s Good About Falling’  ಓದುಗರ ಪ್ರೀತಿಗೆ ಪಾತ್ರವಾಗಿದೆ.

Related Articles