Thursday, September 12, 2024

ಪೋಲ್ ಮುರಿಯಿತು… ಕಾಲು ಉಳುಕಿತು ಆದರೂ ದಾಖಲೆ ಬರೆದ ಅಭಿಷೇಕ್ ಶೆಟ್ಟಿ

ಸ್ಪೋರ್ಟ್ಸ್ ಮೇಲ್ ವರದಿ

ಲಖನೌದಲ್ಲಿ ನಡೆಯುತ್ತಿರುವ ೮೪ನೇ ಅಖಿಲ  ಭಾರತ ರೇಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗ ಅಭಿಷೇಕ್ ಎನ್. ಶೆಟ್ಟಿ ಸಂಕಷ್ಟಗಳ ನಡುವೆಯೂ ನೂತನ ರೇಲ್ವೆ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ಡೆಕಾಥ್ಲಾನ್‌ನಲ್ಲಿ ಪಶ್ಚಿಮ ರೇಲ್ವೆಯನ್ನು ಪ್ರತಿನಿಧಿಸುತ್ತಿರುವ ಅಭಿಷೇಕ್ ಡೆಕಾಥ್ಲಾನ್‌ನ 10 ಸ್ಪರ್ಧೆಗಳಲ್ಲಿ ಎರಡು ದಿನಗಳ ಕಾಲ ಸ್ಪರ್ಧಿಸಿದ್ದರು. ೪೦೦ ಮೀ. ಓಡುವಲಾಗ ಕಾಲು ಉಳುಕಿತ್ತು. ಆ ನೋವನ್ನೇ ನುಂಗಿಕೊಂಡು ಮರುದಿನ ೧೫೦೦ ಮೀ. ಓಟ ಹಾಗೂ ೧೧೦ ಮೀ. ಹರ್ಡಲ್ಸ್ ಪೂರ್ಣಗೊಳಿಸಿದರು. ಇದರ ನಡುವೆ ಪೋಲ್ ವಾಲ್ಟ್ ಸ್ಪರ್ಧೆ ನಡೆಯುವಾಗ ಪೋಲ್ ಮುರಿದು ಅಭಿಷೇಕ್ ಅಪಾಯದಿಂದ ಪಾರಾದರು. ಒಂದು ವೇಳೆ ಚಿಮ್ಮವುದಕ್ಕೆ ಮೊದಲೇ ಮುರಿಯುತ್ತಿದ್ದರೆ ಅಭಿಷೇಕ್ ಬೆಡ್‌ನಿಂದ ದೂರಕ್ಕೆ ಎಸೆಯಲ್ಪಡುತ್ತಿದ್ದರು. ನಂತರ ಬೇರೆಯವರಿಂದ ಪೋಲ್ ಎರವಲು ಪಡೆದು ಸ್ಪರ್ಧೆಯನ್ನು ಪೂರ್ಣಗೊಳಿಸಿದರು. ಒಟ್ಟು 7090 ಅಂಕಗಳನ್ನು ಗಳಿಸುವ ಮೂಲಕ ಅಭಿಷೇಕ್ ರೇಲ್ವೆ ಪರ ನೂತನ ರಾಷ್ಟ್ರೀಯ ದಾಖಲೆ ಬರೆದರು.
ಡೆಕಾಥ್ಲಾನ್ ಕಠಿಣ 
ಡೆಕಾಥ್ಲಾನ್‌ನಲ್ಲಿ ಹತ್ತು ಸ್ಪರ್ಧೆಗಳಿರುತ್ತವೆ. ದಿನಕ್ಕೆ ತಲಾ ಐದು ಸ್ಪರ್ಧೆಗಳು ನಡೆಯುತ್ತವೆ. ಮೊದಲ ದಿನದಲ್ಲಿ 100 ಮೀ. ಓಟ, ಲಾಂಗ್‌ಜಂಪ್, ಶಾಟ್‌ಪಟ್, ಹೈಜಂಪ್ ಹಾಗೂ 400 ಮೀ. ಓಟ. ಎರಡನೇ ದಿನದಲ್ಲಿ 110 ಮೀ. ಹರ್ಡಲ್ಸ್, ಡಿಸ್ಕಸ್ ಎಸೆತ, ಪೋಲ್ ವಾಲ್ಟ್, ಜಾವೆಲಿನ್ ಎಸೆತ  ಹಾಗೂ1500 ಮೀ. ಓಟ ಸೇರಿರುತ್ತದೆ.
ಆಳ್ವಾಸ್‌ನ ಹೆಮ್ಮೆಯ ಅಥ್ಲೀಟ್
ಅಭಿಷೇಕ್ ಆಳ್ವಾಸ್ ಮೂಡಬಿದಿರೆಯ ಹೆಮ್ಮೆಯ ಅಥ್ಲೀಟ್. ಹಲವಾರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ರಾಜ್ಯವನ್ನು ಪ್ರತಿನಿಧಿ ಪದಕ ಗೆದ್ದಿರುತ್ತಾರೆ. ಮುಂಬಯಿ ಪಶ್ಚಿಮ ರೇಲ್ವೆಯಲ್ಲಿ ಉದ್ಯೋಗಿಯಾಗಿದ್ದರೂ ಉತ್ತಮ ಸವಲತ್ತುಗಳಿಂದ ಕೂಡಿರುವ ಆಳ್ವಾಸ್‌ನಲ್ಲಿ ತರಬೇತಿ ಪಡೆಯಲು ರೇಲ್ವೆ ಇಲಾಖೆ ಅನುಮತಿ ನೀಡಿದೆ. ಆಳ್ವಾಸ್ ಕ್ರೀಡಾ ಫೌಂಡೇಷನ್‌ನ ಅಧ್ಯಕ್ಷ ಡಾ. ಮೋಹನ್ ಆಳ್ವಾ ಅವರು ಅಭಿಷೇಕ್ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಅಭಿಷೇಕ್ ರೇಲ್ವೆಯಲ್ಲಿ ದಾಖಲೆ ಬರೆದಿರುವುದಕ್ಕೆ ಡಾ. ಮೋಹನ್ ಆಳ್ವಾ ಅಭಿನಂದನೆ ಸಲ್ಲಿಸಿರುತ್ತಾರೆ.
ಲಖನೌದಿಂದ ಮಾತನಾಡಿದ ಅಭಿಷೇಕ್ ಶೆಟ್ಟಿ, ಈ ಬಾರಿ ಸ್ಪರ್ಧೆ  ಮುಗಿಸುವುದೇ ಕಷ್ಟವೆಂದು ತಿಳಿದಿದ್ದೆ, ಮೊದಲ ದಿನ ಕಾಲು ಉಳುಕಿತ್ತು, ನೋವನ್ನೇ ನುಂಗಿಕೊಂಡು ಎರಡನೇ ದಿನದ ಓಟವನ್ನು ಪೂರ್ಣಗೊಳಿಸಬೇಕಾಯಿತು. ನಂತರ ಪೋಲ್‌ವಾಲ್ಟ್ ಸ್ಪರ್ಧೆಯ ವೇಳೆ ಪೋಲ್ ಮುರಿದು ಬೇರೆಯವರಿಂದ ಎರವಲು ಪಡೆಯಬೇಕಾಯಿತು. ಡಾ. ಮೋಹನ್ ಆಳ್ವಾ ಅವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

Related Articles